Advertisement

ಬಂಟ್ವಾಳ: ಕೆಡವಿದ ತಾ.ಪಂ. ಕಟ್ಟಡದ ಉಳಿಕೆ ಭಾಗ ಕುಸಿಯುವ ಭೀತಿ

02:15 AM Jun 26, 2018 | Team Udayavani |

ಬಂಟ್ವಾಳ: ಬಿ.ಸಿ. ರೋಡ್‌ ಹೃದಯ ಭಾಗದಲ್ಲಿದ್ದ ತಾ.ಪಂ. ಹಳೆಯ ಕಟ್ಟಡವನ್ನು ಕೆಡವಿ ನಾಲ್ಕು ತಿಂಗಳುಗಳು ಕಳೆದಿವೆ. ಕಳೆದ ಮಾರ್ಚ್‌ನಲ್ಲಿ ಕಟ್ಟಡದ ಛಾವಣಿ ತೆಗೆಯಲಾಗಿದೆ. ಅನಂತರದ ದಿನಗಳಲ್ಲಿ ಕಟ್ಟಡದ ಗೋಡೆಗಳನ್ನು ಕೆಡವಲಾಗಿದೆ. ಆದರೆ ಕಟ್ಟಡದ ಮುಖದ್ವಾರವನ್ನು ಹಾಗೆಯೇ ಉಳಿಸಲಾಗಿದೆ. ಯಾವ ಸಂದರ್ಭದಲ್ಲೂ ಧರಾಶಾಯಿ ಆಗುವ ಭೀತಿ ಇದೆ.

Advertisement

ಸುಮಾರು ಇಪ್ಪತೈದು ಅಡಿಗಳಷ್ಟು ಎತ್ತರವಾಗಿರುವ ಮುಖ್ಯದ್ವಾರದ ಮುಂಬದಿ ಇರುವುದು ಬಿ.ಸಿ. ರೋಡ್‌ ನ‌ ಸರ್ವಿಸ್‌ ರಸ್ತೆ. ವಾಹನ, ಜನ ನಿಬಿಡ ಪ್ರದೇಶ. ಜನರು ವಿವಿಧ ಕಚೇರಿಗಳಿಗೆ ಹೋಗುವಾಗ ಇಲ್ಲಿಂದಲೇ ಹಾದು ಹೋಗುತ್ತಾರೆ. ದೂರದ ಊರುಗಳಿಗೆ ಹೋಗುವ ಮಂದಿ ಇಲ್ಲಿಯೇ ಬಸ್ಸಿಗಾಗಿ ಕಾಯುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಭದ್ರತೆ ಇಲ್ಲದೆ ನಿಂತಿರುವ ದ್ವಾರವು ಮಳೆಯಿಂದ ಒದ್ದೆಯಾಗಿ ಧರಾಶಾಯಿ ಆದರೆ ಖಂಡಿತ ಜೀವಕ್ಕೆ ಅಪಾಯವಿದೆ.

ಟೆಂಡರ್‌ ಕರೆದು ಕ್ರಮಾಗತ ಗುತ್ತಿಗೆ ನೀಡಿ ಜೆಸಿಬಿ ಬಳಸಿ ಕಟ್ಟಡ ಕೆಡವಲಾಗಿತ್ತು. ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ಪಾಯ ತೋಡಲಾಗಿತ್ತು. ದ್ವಾರಕ್ಕೆ ಇದ್ದಂತಹ ಕಬ್ಬಿಣದ ಶಟರ್‌ ಅನ್ನು ತೆಗೆದುಕೊಂಡು ಹೋಗಲಾಗಿದೆ. ಕಟ್ಟಡವನ್ನು ಕೆಡವಿ ಅದರ ಕಲ್ಲು, ಹಂಚು, ಮರದ ತೊಲೆಗಳನ್ನು ಕೊಂಡು ಹೋಗಿದ್ದು, ಈ ಭಾಗವನ್ನು ಹಾಗೇ ಉಳಿಸಲಾಗಿದೆ. ಉಳಿಸಿಕೊಂಡಿರುವ ದ್ವಾರದ ಉಳಿಕೆ ಭಾಗದಲ್ಲಿ ಮರವೊಂದು ಬೆಳೆದು ದಿನದಿಂದ ದಿನಕ್ಕೆ ಅದರ ಭಾರ ಹೆಚ್ಚುತ್ತಿದೆ. ಮರದ ತುದಿ ಇಲ್ಲಿನ ಹೈಟೆನ್ಶನ್‌ ವಿದ್ಯುತ್‌ ತಂತಿಗೆ ತಾಗುವಂತಿದ್ದು, ನೆಲದಲ್ಲಿ ಇದ್ದವರಿಗೆ ವಿದ್ಯುತ್‌ ಆಘಾತ ಭೀತಿ ಕಾಡುತ್ತಿದೆ.

ತೆರವಿಗೆ ಕ್ರಮ
ಕಟ್ಟಡ ಕೆಡಹುವ ಸಂದರ್ಭ ಜೆಸಿಬಿಯವರಿಗೆ ಅದನ್ನು ತೆಗೆಯಲು ಸಾಧ್ಯವಾಗಿಲ್ಲ. ಅದು ತುಂಬ ಸ್ಟ್ರಾಂಗ್‌ ಆಗಿದೆ, ಹಿಟಾಚಿ ತಂದು ಇನ್ನೊಮ್ಮೆ ಪ್ರಯತ್ನಿಸುವ ಎಂದು ಬಿಟ್ಟಿದ್ದರು. ಬಳಿಕ ಅದರ ಕೆಲಸ ಮಾಡಲಾಗದೆ ಉಳಿದು ಬಂದಿದೆ. ಅದು ಬೀಳುವ ಸಾಧ್ಯತೆ ಇಲ್ಲ. ಆದರೂ ಅದನ್ನು ತೆರವು ಮಾಡಲು ತಾ.ಪಂ. ಕ್ರಮ ಕೈಗೊಳ್ಳುವುದು.
– ಚಂದ್ರಹಾಸ ಕರ್ಕೇರ, ಅಧ್ಯಕ್ಷರು, ತಾ.ಪಂ. ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next