Advertisement

ಭವಂತಿ ಸ್ಟ್ರೀಟ್ ಬಳಿ ಕಟ್ಟಡ ಕುಸಿತ 

10:31 AM Jun 10, 2018 | Team Udayavani |

ಮಹಾನಗರ : ಜಿಲ್ಲೆಯಾದ್ಯಂತ ಶನಿವಾರ ಸುರಿದ ಭಾರೀ ಗಾಳಿ, ಮಳೆಗೆ ಬೆಳಗ್ಗೆ 8 ಗಂಟೆ ಸುಮಾರಿಗೆ ನಗರದ ಭವಂತಿ ಸ್ಟ್ರೀಟ್‌ ಬಳಿ ಇರುವಂತಹ ಜಾನಕಿ ಕಟ್ಟಡದ ಎದುರಿನ ಭಾಗ ಕುಸಿದು ಬಿದ್ದಿದೆ. ಇದರಿಂದಾಗಿ ಸ್ಥಳದಲ್ಲಿದ್ದ ಎರಡು ಬೈಕ್‌ ಗಳೂ ಸಂಪೂರ್ಣ ಜಖಂಗೊಂಡಿದ್ದು, ವ್ಯಾನ್‌ಗೂ ಸ್ವಲ್ಪ ಹಾನಿಯಾಗಿದೆ.

Advertisement

ಕೂಡಲೇ ಜೇಸಿಬಿ ಸಹಾಯದಿಂದ ಕಟ್ಟಡದ ಅವಶೇಷಗಳನ್ನು ತೆರವು ಮಾಡಲಾಯಿತು. ಈ ಸಮಯದಲ್ಲಿ ಈ ಮಾರ್ಗವಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಿ ಜಿಎಚ್‌ಎಸ್‌ ರಸ್ತೆಯಿಂದ ಸಂಪರ್ಕ ಕಲ್ಪಿಸಿಕೊಡಲಾಗಿತ್ತು. 

ಸ್ಟೇಟ್‌ಬ್ಯಾಂಕ್‌ ಸಮೀಪದ ಭವಂತಿ ಸ್ಟ್ರೀಟ್‌ ಸೆಂಟ್ರಲ್‌ ಮಾರುಕಟ್ಟೆಗೆ ಸಂಪರ್ಕವಿರುವುದರಿಂದ ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ಓಡಾಡುತ್ತಾರೆ. ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ. ಅಷ್ಟೇ ಅಲ್ಲದೆ, ಅನೇಕರು ಅಂಗಡಿಗಳ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಆದರೆ ಶನಿವಾರ ಬೆಳಗ್ಗೆ ಮಳೆ ಪ್ರಮಾಣ ಹೆಚ್ಚಿದ್ದ ಕಾರಣದಿಂದಾಗಿ ಆ ರಸ್ತೆಯಲ್ಲಿರುವ ಅಕ್ಕಪಕ್ಕದ ಅಂಗಡಿಗಳು ತೆರೆದಿರಲಿಲ್ಲ. ಹಾಗಾಗಿಯೇ ಈ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರ ವಿರಳವಾಗಿತ್ತು. ಇಲ್ಲವಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.

ಇದು ಹಳೆಯ ಕಟ್ಟಡವಾಗಿದ್ದು, ಮಣ್ಣ ಮತ್ತು ಕಲ್ಲಿನಿಂದ ನಿರ್ಮಿಸಿದ ಗೋಡೆಯಾಗಿದೆ. ಈ ಕಟ್ಟಡ ಸೇರಿದಂತೆ ಇದೇ ಸಾಲಿನ ಕೆಲ ಕಟ್ಟಡಗಳು ಕೆಲವು ವರ್ಷಗಳಿಂದ ಶಿಥಿಲಾವಸ್ಥೆಯಿಂದ ಮುಚ್ಚಿತ್ತು. ಕೆಲವೊಂದು ಅಂಗಡಿದಾರರು ಗೋಡೌನ್‌ ರೀತಿಯಲ್ಲಿ ಇದನ್ನು ಉಪಯೋಗ ಮಾಡುತ್ತಿದ್ದರು.

ಕುಸಿಯುವ ಹಂತದಲ್ಲಿದೆ ಮತ್ತೊಂದು  ಭಾಗ
ಸ್ಥಳೀಯ ಕಾರ್ಪೊರೇಟರ್‌ ಪೂರ್ಣಿಮ ಅವರು ಪ್ರತಿಕ್ರಿಯಿಸಿ, ಈ ಕಟ್ಟಡದ ಎದುರಿನ ಭಾಗ ಕುಸಿದ ಕಾರಣ ಉಳಿದ ಭಾಗಗಳೂ ಅಪಾಯದಲ್ಲಿದೆ. ಯಾವ ಸಮಯದಲ್ಲಿ ಈ ಕಟ್ಟಡ ಬೀಳುತ್ತದೆಯೋ ಹೇಳಲು ಅಸಾಧ್ಯ. ನ್ಯಾಯಾಲಯದಲ್ಲಿ ಈ ಕಟ್ಟಡದ ವಿರುದ್ಧ ಮೊಕದ್ದಮೆ ಇರುವುದರಿಂದ ನ್ಯಾಯಾಲಯದ ಅನುಮತಿ ಇಲ್ಲದೆ, ಕಟ್ಟಡವನ್ನು ನಾವು ನೆಲಕ್ಕುರುಳಿಸುವ ಹಾಗಿಲ್ಲ. ಕಟ್ಟಡದ ತೆರವಿಗೆ ಈಗಾಗಲೇ ಮಾಲಕರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

Advertisement

ಅದೃಷ್ಟವಶಾತ್‌ ಅಪಾಯ ಸಂಭವಿಸಲಿಲ್ಲ 
ಸ್ಥಳೀಯರು ಹೇಳುವಂತೆ ಸಾಮಾನ್ಯವಾಗಿ ಭವಂತಿ ಸ್ಟ್ರೀಟ್‌ನಲ್ಲಿರುವ ಜಾನಕಿ ಬಿಲ್ಡಿಂಗ್‌ ಕೆಳಗೆ ಅನೇಕ ಮಂದಿ ನಿಂತಿರುತ್ತಾರೆ. ಆದರೆ ಶನಿವಾರ ಬೆಳಗ್ಗಿನಿಂದ ನಗರದಲ್ಲಿ ಭಾರೀ ಮಳೆಯಾದ ಕಾರಣದಿಂದಾಗಿ ಬೆಳಗ್ಗೆ 8 ಗಂಟೆ ಸುಮಾರಿಗೆ ಸುತ್ತಮುತ್ತ ಸಾರ್ವಜನಿಕ ಸಂಚಾರ ಕಡಿಮೆ ಇತ್ತು. ಒಂದು ವೇಳೆ ಸಾಮಾನ್ಯ ದಿನಗಳಲ್ಲಿ ಈ ಕಟ್ಟಡದ ಭಾಗ ಬಿದ್ದಿದ್ದರೆ ಅನಾಹುತ ಸಂಭವಿಸುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next