ಉಡುಪಿ: ಅವಶ್ಯಕತೆ ಇರುವವರಿಗೆ ಸರಕಾರದ ಸೇವೆಗಳನ್ನು ಅವರ ಮನೆ ಬಾಗಿಲಿಗೆ ಒದಗಿಸುವುದು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಾಹಿತಿ ಕೊರತೆಯಿಂದ ಆಗುವ ತೊಡಕುಗಳನ್ನು ನಿವಾರಿಸುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣೆ ಉದ್ದಿಮೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನ ಶನಿವಾರ ತೋನ್ಸೆಗೆ ಆಗಮಿಸಿದಾಗ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಸಂಕಲ್ಪದಂತೆ 2047ರ ಹೊತ್ತಿಗೆ ಭಾರತವನ್ನು ಜಗತ್ತಿನ ದೊಡ್ಡಣ್ಣನಾಗಿ ಮಾಡುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಇದು ಪûಾತೀತ ಕಾರ್ಯಕ್ರಮ; ಎಲ್ಲರ ಸಹಕಾರದೊಂದಿಗೆ ಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಅವರವರ ಜವಾಬ್ದಾರಿ ನಿರ್ವಹಿಸಿದರೆ ದೇಶ ಅಭಿವೃದ್ಧಿಯಾಗುತ್ತದೆ. 2047ರಲ್ಲಿ ಭಾರತ ವಿಕಸಿತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಅರ್ಜಿ ರಹಿತ ನೆರವು ಕಿಸಾನ್ ಸಮ್ಮಾನ್
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇತಿಹಾಸದಲ್ಲಿ ಪ್ರಥಮ ಬಾರಿಗೆ ಅರ್ಜಿ ಕೊಡದೆ ನೆರವು ಪಡೆಯಬಹುದಾದ ಕೇಂದ್ರ ಸರಕಾರದ ಯೋಜನೆ ಕಿಸಾನ್ ಸಮ್ಮಾನ್ ನಮ್ಮೆಲ್ಲ ರೈತರಿಗೆ ತಲುಪುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ 5 ಲ.ರೂ. ವರೆಗೆ ಆಸ್ಪತ್ರೆ ಖರ್ಚು ಭರಿಸಲಾಗುತ್ತಿದೆ. ನಡೆಯುವ ದಾರಿ, ಕುಡಿಯುವ ನೀರು, ರೋಗಿಗೆ ಸಹಾಯ ಮಾಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.
ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ತೊನ್ಸೆ ಗ್ರಾ.ಪಂ. ಅಧ್ಯಕ್ಷೆ ಕುಸುಮಾ, ಉಪಾಧ್ಯಕ್ಷ ಅರುಣ್, ಕೆನರಾ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕಿ ಶೀಲಾ ಸಾಜನ್, ದೂರದರ್ಶನದ ಉಪನಿರ್ದೇಶಕ ಯಶವಂತ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ| ಧನಂಜಯ್ , ಬ್ಯಾಂಕಿನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಫಲಾನುಭವಿ ಗಳೊಂದಿಗೆ ನಡೆಸಿದ ಸಂವಾದದ ನೇರ ಪ್ರಸಾರವನ್ನು ಅತಿಥಿಗಳು ಮತ್ತು ಸಾರ್ವಜನಿಕರು ವೀಕ್ಷಿಸಿದರು.
ವಿಕಸಿತ ಭಾರತ ಸಂಕಲ್ಪ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಸ್ಥಳದಲ್ಲಿಯೇ ನೀಡಲಾಯಿತು. ರಾಷ್ಟ್ರೀಯ ಕೆಮಿಕಲ್ಸ… ಮತ್ತು ಫರ್ಟಿಲೈಸರ್ಸ್‌ನವರು ಕೀಟನಾಶಕ ಹಾಗೂ ಸೂಕ್ಷ್ಮ ಪೋಷಕಾಂಶಗಳ ಸಿಂಪರಣೆಯಲ್ಲಿ ಡ್ರೋನ್ ಬಳಕೆಯ ಕುರಿತ ಪ್ರಾತ್ಯಕ್ಷಿಕೆ ನಡೆಸಿದರು. ಈ ಸಂದರ್ಭ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಚಿವರು ತಪಾಸಣೆ ಮಾಡಿಸಿಕೊಂಡರು.