Advertisement

ಸುಸಜ್ಜಿತ ತಂಗುದಾಣ ನಿರ್ಮಿಸಿ

03:11 PM Aug 11, 2019 | Suhan S |

ಮುಳಬಾಗಿಲು:ನಗರದಂಚಿನಿಂದ ಕರ್ನಾ ಟಕ ಗಡಿ ಭಾಗದವರೆಗೆ ಜೆಎಸ್‌ಆರ್‌ ಟೋಲ್ವೇಸ್‌ ಕಂಪನಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲವು ಕಡೆ ರಸ್ತೆ ವಿಭಜಕ ಗಳನ್ನು ಕಿತ್ತುಹಾಕಿ ಸ್ಥಳೀಯ ಜನರು, ವಾಹನ ಸವಾರರು ಅಡ್ಡಾದಿಡ್ಡಿಯಾಗಿ ನುಗ್ಗುತ್ತಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ಗೇಟ್‌ಗಳಲ್ಲಿ ಸುಸಜ್ಜಿತ ತಂಗುದಾಣ ನಿರ್ಮಿಸಿದೇ ಜನ ಪರದಾಡುವಂತಾಗಿದೆ.

Advertisement

ಜೆಎಸ್‌ಆರ್‌ ಟೋಲ್ವೇಸ್‌ ಕಂಪನಿಯು 2015ರಲ್ಲಿ ಮುಳಬಾಗಿಲು ನಗರದಂಚಿನಿಂದ 15 ಕಿ.ಮೀ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 75 ಅನ್ನು ನಿರ್ಮಿಸಿದೆ. ಚೆನ್ನೈ, ತಿರುಪತಿ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಹೆದ್ದಾರಿಯು ಸಂಪರ್ಕ ಕಲ್ಪಿಸುವುದರಿಂದ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ, ಸ್ಥಳೀಯರ ಅನುಕೂಲತೆಗೆ ಯಾವುದೇ ಕ್ರಮಕೈಗೊಂಡಿಲ್ಲ.

ಈ ಮಾರ್ಗದಲ್ಲಿ ಹಲವು ಗ್ರಾಮಗಳಿದ್ದು, ಗೇಟ್‌ಗಳ ಬಳಿ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಿಂದ ಪಾರಾಗಲು ಈಗಾಗಲೇ ಸೊನ್ನವಾಡಿ ಬೈಪಾಸ್‌ ಸಮೀಪ, ನರಸಿಂಥತೀರ್ಥ, ಸೀಗೇನಹಳ್ಳಿ, ಅಲಾಲಸಂದ್ರ ಗೇಟ್, ಕಪ್ಪಲಮಡಗು, ಶ್ರೀರಂಗಪುರ, ವೆಂಕಟಾಪುರ, ಎನ್‌.ವಡ್ಡಹಳ್ಳಿ, ಪದ್ಮಘಟ್ಟ, ತಾತಿಕಲ್, ಹಳೆಕುಪ್ಪ, ನಂಗಲಿ, ಮುದಿಗೆರೆ, ಗಡ್ಡೂರು ಗೇಟ್‌ಗಳಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸಲಾಗಿದೆ. ಆದರೆ, ಬಸ್‌ ನಿಲುಗಡೆ ಒಂದು ಕಡೆಯಾದರೆ, ಶೆಲ್ಟರ್‌ ನಿರ್ಮಿಸಿರುವುದು ಮತ್ತೂಂದು ಕಡೆಯಾಗಿರುವುದರಿಂದ ಈ ಶೆಲ್ಟರ್‌ಗಳು ಜನರ ಉಪಯೋಗಕ್ಕೆ ಬರದಂತಾಗಿವೆ.

ಸೂಕ್ತ ತಂಗುದಾಣ ನಿರ್ಮಿಸಿ: ಮಳೆ, ಬಿರು ಗಾಳಿಯಿಂದ ತಪ್ಪಿಸಿಕೊಳ್ಳಲು ಒಂದು ವೇಳೆ ಈ ಬಸ್‌ ಗೇಟ್‌ಗಳಲ್ಲಿ ನಿರ್ಮಿಸಿರುವ ತಂಗುದಾಣಗಳಲ್ಲಿ ಆಶ್ರಯಿಸಿದರೆ ಮತ್ತಷ್ಟು ಸಮಸ್ಯೆಗೆ ಸಿಲುಕುವುದು ಗ್ಯಾರಂಟಿ. ಏಕೆಂದರೆ ಈ ತಂಗುದಾಣಗಳು ವೈಜ್ಞಾನಿಕವಾಗಿದ್ದು, ಜನರಿಗೆ ಸೂಕ್ತ ರಕ್ಷಣೆ ಒದಗಿಸುವುದೇ ಇಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಪ್ರತಿಯೊಂದು ಗೇಟ್‌ನ ಎರಡೂ ಕಡೆಗಳಲ್ಲಿ ಸುರಕ್ಷತೆಯುಳ್ಳ ತಂಗುದಾಣ ನಿರ್ಮಾಣ ಮಾಡಲು ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಈ ಹೆದ್ದಾರಿ ನಿರ್ಮಿಸಿದ ಕಂಪನಿಗೆ ತಿಳಿಸಬೇಕಿದೆ.

Advertisement

ವಾರದಲ್ಲಿ ಎರಡು ಮೂರು ಅಪಘಾತ: ಪ್ರಮುಖವಾಗಿ ಈ ಹೆದ್ದಾರಿಯಲ್ಲಿ ಕೆ.ಜಿ.ಎಫ್, ತಾಯಲೂರು ಬೈಪಾಸ್‌, ಕೆ.ಬೈಯಪಲ್ಲಿ ರಸ್ತೆ, ನರಸಿಂಥತೀರ್ಥ, ಎನ್‌.ವಡ್ಡಹಳ್ಳಿ, ನಂಗಲಿ ಗ್ರಾಮಗಳಲ್ಲಿ ಹೆದ್ದಾರಿ ಪ್ರಾಧಿಕಾರವು ಯಾವುದೇ ಫ್ಲೈಓವರ್‌ ಆಥವಾ ಅಂಡರ್‌ಪಾಸ್‌ ನಿರ್ಮಿಸದ ಕಾರಣ, ಜನರೇ ಡಿವೈಡರ್‌ ಹೊಡೆದು ನಿರ್ಮಿಸಿಕೊಂಡಿರುವ ಜಾಗದಲ್ಲಿ ಹೆದ್ದಾರಿ ದಾಟಲು ಹೋಗಿ ವಾರದಲ್ಲಿ ಎರಡು ಮೂರು ಅಪಘಾತಗಳು ಸಂಭವಿಸುತ್ತಲೇ ಇವೆ.

ಅತೀ ವೇಗವಾಗಿ ಬರುವ ವಾಹನಗಳಿಂದ ತಪ್ಪಿಸಿಕೊಳ್ಳಲು ಹೋಗಿ ಜನ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಹಲವು ಮಂದಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ತೆರಿಗೆ ಹಣದಲ್ಲಿ ರಸ್ತೆ ನಿರ್ಮಿಸಿ ಈಗ ವಾಹನಗಳಿಂದ ಟೋಲ್ ಶುಲ್ಕ ವಸೂಲಿ ಮಾಡಿದರೂ ಜನರ ಪ್ರಾಣಕ್ಕೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ವಿಪರ್ಯಾಸ.

 

● ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next