ಸಕಲೇಶಪುರ: ಕಳೆದ ವರ್ಷ ಸುರಿದ ಭಾರೀ ಮಳೆಗೆ ಇದ್ದ ಗುಡಿಸಲು ಕಳೆದುಕೊಂಡು ಬೀದಿಗೆ ಬಿದ್ದ ಅನಾಥ ಸಹೋದರಿಯರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಸಂಘವು ಇತರರಿಗೆ ಮಾದರಿಯಾಗಿದೆ.
ತಾಲೂಕಿನ ಮಳಲಿ ಗ್ರಾಮದ ಚಂದ್ರಕಲಾ, ಅರುಣಾಕ್ಷಿ ಎಂಬ ಅಕ್ಕ ತಂಗಿಯರು ಚಿಕ್ಕ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದರು. ಸೂಕ್ತಮನೆಯೂ ಇಲ್ಲದೆ, ಗುಡಿಸಲು ಕಟ್ಟಿಕೊಂಡು ವಾಸವಿದ್ದರು. ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಗುಡಿಸಲು ಕೂಡ ಸಂಪೂರ್ಣ ಕುಸಿದು ಹೋಗಿತ್ತು. ಅದನ್ನೇ ದುರಸ್ತಿ ಮಾಡಿಕೊಂಡು ಮುರುಕಲು ಗೂಡಿಸಲಿನಲ್ಲೇ ವಾಸವಾಗಿದ್ದರು. ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ತಾಪಂಇಒ ಹರೀಶ್, ಅಕ್ಕ ತಂಗಿಯರ ಅವಸ್ಥೆ ನೋಡಿ ಸರ್ಕಾರ ದಿಂದ ಮನೆ ಮಂಜೂರು ಮಾಡಲು ಯೋಜಿಸಿದರು.
ಆದರೆ, ಗುಡಿಸಲು ಇದ್ದ ಜಾಗವು ತಾಂತ್ರಿಕ ದೋಷ ದಿಂದ ಕೂಡಿತ್ತು. ಹೀಗಾಗಿ, ಸರ್ಕಾರದ ನಿಯಮಾನುಸಾರ ಮನೆ ಮಂಜೂರು ಮಾಡಲು ಸಾಧ್ಯವಿಲ್ಲದ ಕಾರಣ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದಿಂದ ಮನೆ ನಿರ್ಮಿಸಿಕೊಡಲು ಮುಂದಾದರು. ಸ್ವತಃ ಹಣ ಹಾಕುವುದರ ಜೊತೆಗೆ, ತಾಲೂಕಿನ 26 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಹಾಯಕ ನಿರ್ದೇಶಕರು, ಸಿಬ್ಬಂದಿ, ನರೇಗಾ ಅಭಿಯಂತರರು, ತಾಪಂನ ಕೆಲ ಸದಸ್ಯರಿಂದ ಒಟ್ಟು 3,30,000 ರೂ. ಹಣ ಸಂಗ್ರಹ ಮಾಡಿದ್ದರು. ಮರಳು, ಇಟ್ಟಿಗೆ, ಜಲ್ಲಿಯನ್ನು ಕೆಲವು ಸ್ಥಳೀಯರು ದಾನ ಮಾಡಿದ್ದರು. ಒಟ್ಟು 4.5 ಲಕ್ಷ ರೂ. ವೆಚ್ಚದಲ್ಲಿ 150 23 ಅಡಿ ಜಾಗದಲ್ಲಿ ಪಡಸಾಲೆ, ಅಡುಗೆ ಕೋಣೆ, ಒಂದು ರೂಂ ಒಳಗೊಂಡ ಸುಸಜ್ಜಿತ ಹಂಚಿನ ಮನೆಯನ್ನು ಅನಾಥ ಸಹೋದರಿಯರಿಗೆ 15 ದಿನಗಳಲ್ಲಿ ಕಟ್ಟಿಸಿಕೊಡಲಾಗಿದೆ.
ಬೀಗದ ಕೀ ಹಸ್ತಾಂತರ: ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ್ದ ತಾಪಂ ಹರೀಶ್ ಸೇರಿದಂತೆ ತಾಪಂ, ಗ್ರಾಪಂಅಧಿಕಾರಿಗಳು, ಸಂಘದ ಸದಸ್ಯರು, ಹೊಸ ಮನೆಗೆ ತಳಿರು ತೋರಣ ಕಟ್ಟಿ, ಪೆಂಡಾಲ್ ಹಾಕಿ, ಊರಿನವರಿಗೆ ಊಟಹಾಕಿಸಿ ಸರಳವಾಗಿ ಗೃಹ ಪ್ರವೇಶ ಮಾಡಿ, ಅಕ್ಕತಂಗಿಯರಿಗೆ ಮನೆಯ ಬೀಗದ ಕೀ ಅನ್ನು ಹಸ್ತಾಂತರಿಸಿದರು.
ಈ ಮೂಲಕ ಸೂರಿಲ್ಲದೆ ಪರದಾಡುತ್ತಿದ್ದ ಅನಾಥ ಅಕ್ಕತಂಗಿಯರ ಬಾಳಿನಲ್ಲಿ ಇದೀಗ ಹೊಸ ಬೆಳಕು ಮೂಡಿದೆ. ತಾಲೂಕಿನ ಕರ್ನಾಟಕ ರಾಜ್ಯ ಗ್ರಾಮೀಣನೌಕರರ ಹಾಗೂ ಪಂಚಾಯತ್ ರಾಜ್ ಇಲಾಖೆಅಧಿಕಾರಿಗಳು ಹಾಗೂ ನೌಕರರ ಸಂಘ ಸಕಲೇಶಪುರ ಘಟಕದ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ಪಡಿಸಿದ್ದಾರೆ. ಈ ವೇಳೆ ತಾಪಂ ಸದಸ್ಯರಾದ ಉದಯ್ ಸಿಮೆಂಟ್ ಮಂಜು, ಪಿಡಿಒಗಳಾದ ಸುರೇಶ್, ವತ್ಸಲಾ ಕುಮಾರಿ, ಬ್ಯಾಕರವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಿಜಯ್‌ಕುಮಾರ್ ಉಪಸ್ಥಿತರಿದ್ದರು.
ಗುಡಿಸಲಿನಲ್ಲಿ ನಾವು ವಾಸವಿದ್ದೆವು. ಕಳೆದ ವರ್ಷ ಮಳೆಯಿಂದ ಗುಡಿಸಲು ಸಂಪೂರ್ಣವಾಗಿ ಕುಸಿದು ಹೋಗಿತ್ತು. ಮುಂದೇನೂ ಎಂಬ ಚಿಂತೆ ಆವರಿಸಿತ್ತು. ಪಂಚಾಯತ್ ರಾಜ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದವರು ನಮಗೆಮನೆ ಕಟ್ಟಿಸಿಕೊಟ್ಟಿದ್ದರಿಂದ ನಮಗೆ ಸ್ವಂತ ನೆಲೆಸಿಕ್ಕಂತೆ ಆಗಿದೆ, ಅವರಿಗೆ ಧನ್ಯವಾದಗಳು.
–ಅರುಣಾಕ್ಷಿ, ಅನಾಥೆ.
ಕಳೆದ ವರ್ಷ ಮಳೆಗಾಲದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದವು.ಆಗ ಸರ್ಕಾರದಿಂದ ಅನಾಥೇಯರಿಗೆಮನೆ ನೀಡಲು ಯೋಜಿಸಿದ್ದೆವು. ಆದರೆ, ಜಾಗವು ತಾಂತ್ರಿಕ ದೋಷದಿಂದ ಕೂಡಿದ್ದರಿಂದ ಮನೆ ನೀಡಲುಅವಕಾಶವಿರಲಿಲ್ಲ. ಹೀಗಾಗಿ ತಾಪಂಸಿಬ್ಬಂದಿ ಹಾಗೂ ಕೆಲವು ಸದಸ್ಯರನೆರವಿನಿಂದ ಅನಾಥ ಅಕ್ಕತಂಗಿಯರಿಗೆಮನೆ ಕಟ್ಟಿಸಿಕೊಟ್ಟಿದ್ದೇವೆ. ಈ ಕಾರ್ಯದಲ್ಲಿಸಹಾಯ ಹಸ್ತ ಚಾಚಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
–ಹರೀಶ್, ಇಒ, ಸಕಲೇಶಪುರ ತಾಪಂ
ತಾಪಂ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ಶ್ಲಾಘನೀಯ. ಪ್ರತಿಯೋರ್ವ ಸರ್ಕಾರಿ ನೌಕರರು ಈ ರೀತಿಯ ಸೇವಾ ಮನೋಭಾವ ಅಳವಡಿಸಿಕೊಂಡರೆ ದೇಶ ಅಭಿವೃದ್ಧಿ ಕಾಣುವುದರಲ್ಲಿ ಅನುಮಾನವಿಲ್ಲ.
–ಕಮಲಾಕ್ಷಿ, ಗ್ರಾಮದ ಮಹಿಳೆ.