Advertisement

ಜೋಪಡಿಯಲ್ಲಿದ್ದ ಮಹಿಳೆಗೆ ಪೊಲೀಸರಿಂದ ಮನೆ ನಿರ್ಮಾಣ

11:36 AM Aug 03, 2018 | Team Udayavani |

ಬಜಪೆ: ಮೂಡುಪೆರಾರದ ಕಿನ್ನಿಕಂಬಳ ಬಸ್‌ ನಿಲ್ದಾಣದ ಬಳಿಯ ಜೋಪಡಿಪಟ್ಟಿಯಲ್ಲಿ ಹಲವಾರು ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದ ಕುಸುಮಾ ಗೌಡ ಅವರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಬಜಪೆ ಪೊಲೀಸರು ಆದರ್ಶ ಮೆರೆದಿದ್ದಾರೆ.

Advertisement

ಮಹಿಳೆಯ ಕಷ್ಟ ನೋಡಿ ಬಜಪೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಪರಶಿವ ಮೂರ್ತಿ ಅವರ ನೇತೃತ್ವದ ಪೊಲೀಸ್‌ ತಂಡ ಮನೆ ನಿರ್ಮಾಣ ಮಾಡಿದೆ. ಪಡುಪೆರಾರ ಗ್ರಾ.ಪಂ. ಸಹಿತ ಜನಪ್ರತಿನಿಧಿಗಳು ನೆರವಿಗೆ ಬಾರದ ಕಾರಣ ಜೋಪಡಿ ಮನೆಯ ಬಗ್ಗೆ ಉದಯವಾಣಿ ಸವಿವರ ವರದಿ ಪ್ರಕಟಿಸಿತು. ಇದಕ್ಕೆ ಈಗ ಬಜಪೆ ಪೊಲೀಸರು ಸ್ಪಂದನೆ ನೀಡಿದ್ದಾರೆ.

ಸುಮಾರು 1ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಕಾರ್ಯ ಸಾಗುತ್ತಿದೆ. ಅದರಲ್ಲಿ ಶೌಚಾಲಯ, ಅಡುಗೆ ಹಾಗೂ ವಸ್ತುಗಳನ್ನು ಇಡಲು ವ್ಯವಸ್ಥೆ, ಗಾಲಿ ಕುರ್ಚಿಯಲ್ಲಿ ಮನೆ ಒಳಗೆ ಹೋಗಲು ರ್‍ಯಾಂಪ್‌, ಮನೆ ಮುಂದೆ ಜಗಲಿ ನಿರ್ಮಾಣ ಮಾಡಲಾಗುತ್ತಿದೆ.

ಆ.15ರಂದು ಹಸ್ತಾಂತರ
ಈ ಹೊಸ ಪುಟ್ಟ ಮನೆಯನ್ನು ಬಜಪೆ ಪೊಲೀಸರು ಆ. 15ರಂದು ಕುಸುಮಾ ಅವರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಜೋಪಡಿಯಲ್ಲಿ ಹಲವಾರು ವರ್ಷ ತೆವಳಿಕೊಂಡು ಜೀವನ ಸಾಗಿಸುತ್ತಿದ್ದ ಕುಸುಮಾ ಅವರ ಮುಖದಲ್ಲಿ ಈಗ ನಗು ಮೂಡಿದೆ. ಬಜಪೆ ಪೊಲೀಸರ ಜತೆ ಕಿನ್ನಿಕಂಬಳ ಭ್ರಾಮರಿ ಯುವಕ ಸಂಘವೂ ಸಹಕಾರ ನೀಡುತ್ತಿದೆ. ಈಗಾಗಲೇ ಈ ಸಂಘ ಜೋಪಡಿ ಹಾಗೂ ಅವರ ದೈನಂದಿನ ಉಪಹಾರಕ್ಕೆ ಸಹಾಯ ನೀಡುತ್ತಿತ್ತು.

ಧನ ಸಹಾಯದ ಭರವಸೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಿಂಗಳಿಗೆ 1 ಸಾವಿರ ರೂ. ಧನಸಹಾಯ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. ಈ ಬಗ್ಗೆ ವಾಸ್ತವ್ಯ ಧೃಢೀಕರಣ ಪತ್ರವನ್ನು ಪಡುಪೆರಾರ ಗ್ರಾ.ಪಂ. ನೀಡಿದೆ.

Advertisement

ದಾಖಲೆ ಇದ್ದಲ್ಲಿ ಸರಕಾರಿ ಸವಲತ್ತು
ಕುಸುಮಾ ಅವರ ಬಗ್ಗೆ ಈಗಾಗಲೇ ಗುರುಪುರ ಹೋಬಳಿಯ ಉಪ ತಹಶೀಲ್ದಾರ ಗಮನಕ್ಕೆ ತರಲಾಗಿದೆ. ಅವರಿಗೆ ಪಂಚಾಯತ್‌ ಮನೆನಂಬ್ರ ನೀಡಿದಲ್ಲಿ ಸರಕಾರದ ಸವಲತ್ತನ್ನು ದೊರಕುವಂತೆ ಮಾಡಲು ಸಾಧ್ಯವಾಗುತ್ತದೆ.
 - ಮುತ್ತಪ್ಪ, ತಹಶೀಲ್ದಾರರು

ಕಷ್ಟಕ್ಕೆ ಸ್ಪಂದನೆ
ಜೋಪಡಿಯಲ್ಲಿ ಬದುಕು ಸಾಗಿಸುತ್ತಿದ್ದ ನನ್ನ ಕಷ್ಟವನ್ನು ಅರಿತು ತನಗೆ ಹೊಸ ಮನೆಯನ್ನು ಕಟ್ಟಿಕೊಟ್ಟ ಬಜಪೆ ಪೊಲೀಸರಿಗೆ ಧನ್ಯವಾದಗಳು. ಕಿನ್ನಿಕಂಬಳ ಭ್ರಾಮರಿ ಯುವಕ ಸಂಘ, ಸ್ಥಳೀಯರು ಕೂಡ ನೆರವು ನೀಡುತ್ತಿದ್ದಾರೆ.
 - ಕುಸುಮಾ

Advertisement

Udayavani is now on Telegram. Click here to join our channel and stay updated with the latest news.

Next