ಚಿಕ್ಕಮಗಳೂರು: ದೇಶವನ್ನು ಕಟ್ಟುವ ಶಕ್ತಿ ಯುವಪೀಳಿಗೆಗೆ ಇದೆ. ಆದ್ದರಿಂದ, ಮಕ್ಕಳು ಇಂದಿನಿಂದಲೇ ಕಾನೂನನ್ನು ಅರಿತುಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಉಮೇಶ್. ಎಂ.ಅಡಿಗ ಹೇಳಿದರು.
ನಗರ ಹೊರವಲಯದ ತೇಗೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೌಲಾನ್ ಆಜಾದ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನು ಪುಸ್ತಕಕ್ಕೆ ಮಾತ್ರ ಸೀಮಿತವಾದರೆ ಜನರಿಗೆ ರಕ್ಷಣೆ ಸಿಗುವುದಿಲ್ಲ. ಕಾನೂನು, ಸಂವಿಧಾನ ಎಂಬುದರ ಮಾಹಿತಿ ಕೇವಲ ಪಠ್ಯ ಮತ್ತು ಪರೀಕ್ಷೆಗೆ ಸೀಮಿತವಾಗಿರದೇ ಮಕ್ಕಳಲ್ಲಿ ಕಾನೂನು ಎಂದರೇನು? ಅದರ ಇತಿಮಿತಿಗಳು ಮತ್ತು ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದರ ಬಗೆಗಿನ ಅರಿವು ಮೂಡಿದಾಗ ಜನಸಾಮಾನ್ಯರಿಗೂ ನ್ಯಾಯ ದೊರಕುತ್ತದೆ ಎಂದರು.
ಜನಸಾಮಾನ್ಯರು ನ್ಯಾಯ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರ ಸ್ಥಳೀಯ ಮಟ್ಟದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವನ್ನು ಪ್ರಾರಂಭಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ, ಮಕ್ಕಳಿಗೆ, ರೋಗಿಗಳಿಗೆ, ಮಾಜಿ ಸೈನಿಕರಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ವಿಕೋಪಕ್ಕೆ ತುತ್ತಾದ ವ್ಯಕ್ತಿ, ಸಮುದಾಯಕ್ಕೆ ಉಚಿತ ಕಾನೂನು ಸೇವೆಯನ್ನು ಒದಗಿಸಲು ಪ್ರಾಧಿಕಾರ ಮುಂದಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಮಾತನಾಡಿ, ಕಾನೂನಿನ ಆಗು-ಹೋಗುಗಳನ್ನು ಅರಿತುಕೊಂಡು ಕಷ್ಟಗಳನ್ನು ಎದುರಿಸಿ ಬೆಳೆದು ಸಾಧನೆ ಮಾಡುವ ದೃಢ ನಿರ್ಧಾರ ಮನಸ್ಸಿನಲ್ಲಿದ್ದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಶಿವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಳ್ಳುವುದು ಪ್ರಮುಖವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರ ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೂ ಸಹಾಯ ಹಸ್ತವನ್ನು ಚಾಚಿದೆ. ಮನುಷ್ಯ ತನ್ನಲ್ಲಿರುವ ಕೀಳು ಭಾವನೆ ಮತ್ತು ದೌರ್ಬಲ್ಯಗಳನ್ನು ದೂರ ಮಾಡಿ ಮಾನಸಿಕವಾಗಿ ಸದೃಢರಾದಾಗ ಏಳಿಗೆ ಕಾಣಬಹುದು ಎಂದು ಹೇಳಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರಯ್ಯ, ಮೊರಾರ್ಜಿ ದೇಸಾಯಿ ಶಾಲೆಯ ಮುಖ್ಯೋಪಾಧ್ಯಾಯ ನಾಗೇಶ್, ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.