ಮುದಗಲ್ಲ: ಬೆಳೆಯುತ್ತಿರುವ ಪಟ್ಟಣದಲ್ಲಿ ದಿನೇ ದಿನೇ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮಂಗಳವಾರ ಕರವೇ ಪದಾಧಿಕಾರಿಗಳು ವಿವಿಧ ವಾರ್ಡ್‌ಗಳ ನಿವಾಸಿಗಳ ಜೊತೆಗೂಡಿ ಎಮ್ಮೆಗಳ ಮೇಲೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಬಸ್ ನಿಲ್ದಾಣದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪದಾಧಿಕಾರಿಗಳು ಶಾಸಕ ಹೂಲಗೇರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯುದ್ದಕ್ಕೂ ಶಾಸಕರು ಹಾಗೂ ಪುರಸಭೆ ಆಡಳಿತ ಮಂಡಳಿ ಸದಸ್ಯರಿಗೆ ಹಿಡಿಶಾಪ ಹಾಕಿದರು. ಎಮ್ಮೆಗಳ ಮೇಲೆ ಶಾಸಕರಿಗೆ ಧಿಕ್ಕಾರ ಎಂದು ಬರೆದು ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ಸಂಚಾರಕ್ಕೆ ಬಿಸಿ ಮುಟ್ಟಿಸಿದರು. ಮೆರವಣಿಗೆ ಪುರಸಭೆಗೆ ಪ್ರವೇಶಿಸುತ್ತಿದ್ದಂತೆ ಮಹಿಳೆಯರು ಹಾಗೂ ಪ್ರತಿಭಟನಾಕಾರರು ಪುರಸಭೆಗೆ ಅಡ್ಡಲಾಗಿ ಕುಳಿತು ಅಧಿಕಾರಿಗಳು ಲಿಖೀತ ಉತ್ತರ ನೀಡುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು. ಕರವೇ ಅಧ್ಯಕ್ಷ ಎಸ್.ಎ. ನಯೀಮ್ ಮಾತನಾಡಿ, 24×7 ನೀರು ಸರಬರಾಜು ಯೋಜನೆ ಜಾರಿಯಲ್ಲಿದ್ದರೂ ಪಟ್ಟಣಕ್ಕೆ 10ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿದ್ದು ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕೂಡಲೇ ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಶಾಸಕರು ಮಧ್ಯಸ್ಥಿಕೆ ವಹಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಉಗ್ರ ಹೋರಾಟ: ಕೂಡಲೇ ಸಮಸ್ಯೆಗೆ ಅಧಿ ಕಾರಿಗಳು ಸ್ಪಂದಿಸದಿದ್ದಲ್ಲಿ ನಿರಂತರ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಎಸ್.ಎನ್. ಖಾದ್ರಿ, ಸಾಬು ಹುಸೇನ್, ಮಹಾಂತೇಶ, ಅಬ್ದುಲ್ ಮಜೀದ್, ಅಂಗವಿಕಲರ ಸಂಘದ ಅಧ್ಯಕ್ಷ ಸುರೇಶ ಭಂಡಾರಿ, ಅಜ್ಮಲ್ ಹುಸೇನ್, ಇಸ್ಮಾಯಿಲ್ ಬಳಿಗಾರ, ಮುನ್ನಾ ಕಿಲ್ಲಾ, ನಾಗರಾಜ ನಾಯಕ, ಹನೀಫ್ ಖಾನ್, ಶಾಮೀದ್ ಅರಗಂಜಿ, ಗ್ಯಾನಪ್ಪ, ರಾಜ್ ಮಹ್ಮದ್ ಸೇರಿದಂತೆ ನೀರದೊಡ್ಡಿ, ಬೇಗಂಪುರ ಪೇಟೆ, ವೆಂಕಟರಾಯನಪೇಟೆ, ಹಳೇಪೇಟೆಯಿಂದ ನೂರಾರು ಮಹಿಳೆಯರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.