ದೂರದೃಷ್ಟಿ ಜತೆಗೆ ಕೃಷಿಗೆ ಒತ್ತು ನೀಡಿ ರೈತರ ಆರ್ಥಿಕತೆ ಬಲಪಡಿಸುವ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. 2020-21ನೇ ಸಾಲಿನ ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರೀಯ ತೆರಿಗೆ ಆದಾಯದಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲಿನಲ್ಲಿ ಇಳಿಕೆ, ಜಿಎಸ್‌ಟಿ ಪರಿಹಾರ ಕಡಿತದಿಂದ ಸ್ವಲ್ಪ ಸಮಸ್ಯೆಯಾಗಿದೆ.
15ನೇ ಹಣಕಾಸು ಆಯೋಗದ ಶಿಫಾರಸಿನಡಿ ರಾಜ್ಯಕ್ಕೆ ಹಂಚಿಕೆ ಯಾಗುವ ಪಾಲಿನ ಮೊತ್ತವೂ ಇಳಿಕೆಯಾಗಲಿದ್ದು, 15,000 ಕೋಟಿ ರೂ. ಕಡಿಮೆಯಾಗಲಿದೆ. ಈ ವಿಚಾರಗಳನ್ನು ಮುಚ್ಚಿಟ್ಟಿಲ್ಲ. ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಹೆಚ್ಚಿಸುವ ಮೂಲಕ ರಾಜಸ್ವ ಹೆಚ್ಚಳದ ಬಜೆಟ್ ಮಂಡಿಸಿದ್ದೇನೆ. ರಾಜಸ್ವ ಹೆಚ್ಚಳ ಮಾತ್ರವಲ್ಲದೆ, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಇತರೆ ವಿತ್ತೀಯ ಮಾನ ದಂಡಗಳನ್ನೂ ಪಾಲಿಸಲಾಗಿದೆ. ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ವೇತನ, ಇತರೆ ಭತ್ಯೆಗೆ 12,000 ಕೋಟಿ ರೂ. ಹೆಚ್ಚಳವಾಗಲಿದೆ. ಆದರೂ ನೀರಾವರಿಗೆ ಅತಿ ಹೆಚ್ಚು 21,308 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಎಸ್‌ಸಿಪಿ- ಟಿಎಸ್‌ಪಿ ಯೋಜನೆಯಡಿ ನಿಯಮಕ್ಕಿಂತಲೂ ಹೆಚ್ಚು ಅನುದಾನ ಒದಗಿಸಲಾಗಿದೆ. ರೈತರ ಸಾಲ ಮನ್ನಾ ಹಿನ್ನೆಲೆಯಲ್ಲಿ ಕೆಲ ಹೊಂದಾಣಿಕೆ ಮಾಡಲಾಗಿದೆ. ನೆರೆ ಪರಿಹಾರ ಕಾರ್ಯಕ್ಕೂ ಹೆಚ್ಚಿನ ಹಣ ಒದಗಿಸಲಾಗುವುದು ಎಂದು ತಿಳಿಸಿದರು.
ಬರಪಿಡೀತ ಜಲಕ್ಷಾಮ ಭಾಗಗಳಲ್ಲಿ ಕೃಷಿ ಉತ್ತೇಜನಕ್ಕಾಗಿ ಭೂಜಲ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಏತ ನೀರಾವರಿ ಯೋಜನೆಗೆ 5000 ಕೋಟಿ ರೂ. ಕಾಯ್ದಿರಿಸಲಾಗಿದೆ. ಮಳೆಯಾಶ್ರಿತ ಕೃಷಿಯನ್ನು ಸದೃಢಗೊಳಿಸಲು ಒತ್ತು ನೀಡಲಾಗಿದೆ. ಜತೆಗೆ ಆಡಳಿತ ಸುಧಾರಣೆಗೂ ಆದ್ಯತೆ ನೀಡಲಾಗಿದೆ. ಕಳಸಾ- ಬಂಡೂರಿ ಯೋಜನೆಗೆ 500 ಕೋಟಿ ರೂ. ಹಾಗೂ ಎತ್ತಿನಹೊಳೆ ಯೋಜನೆಗೆ 1,500 ಕೋಟಿ ರೂ. ಒದಗಿಸಲಾಗಿದೆ ಎಂದು ತಿಳಿಸಿದರು. ನಾವು ಅಧಿಕಾರ ವಹಿಸಿಕೊಂಡು ಏಳು ತಿಂಗಳಷ್ಟೇ ಆಗಿದೆ.
ಸಾಲ ಮನ್ನಾ ಬಾಬ್ತು, ಕೇಂದ್ರದಿಂದ ಅನುದಾನ ಕಡಿತ ನಡುವೆಯೂ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಇಡೀ ದೇಶದಲ್ಲಿ ಆರ್ಥಿಕ ಹಿಂಜರಿಕೆ ಸ್ಥಿತಿ ಇರುವುದರಿಂದ ರಾಜ್ಯದಲ್ಲೂ ಸ್ವಲ್ಪ ಹಿನ್ನಡೆಯಾಗಿದೆ ಎಂದು ಪ್ರತಿಕ್ರಿಯಿಸಿದರು. ಮಾ. 13ರಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ 15ನೇ ಹಣಕಾಸು ಆಯೋಗದ ಪ್ರಮುಖರನ್ನು ಭೇಟಿಯಾಗಿ 2020-21ನೇ ಸಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಹಾಗೂ 2021-21ರಿಂದ 2025-26ನೇ ಸಾಲಿನಲ್ಲೂ ರಾಜ್ಯಕ್ಕೆ ಸೂಕ್ತ ಅನುದಾನ ಹಂಚಿಕೆಯಾಗುವಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಲಿದ್ದಾರೆ ಎಂದು ಹೇಳಿದರು.
ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದಿಂದ 1,500 ಕೋಟಿ ರೂ., ಅಬಕಾರಿ ಸುಂಕ ಪ್ರಮಾಣ ಏರಿಕೆಯಿಂದ 1,200 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸಾಲದ ಹಣವನ್ನು ಬಡವರ ಕಲ್ಯಾಣಕ್ಕೆ ರೂಪಿಸಿರುವ ಬಂಡವಾಳ ಯೋಜನೆಗಳಿಗೆ ವಿನಿಯೋಗಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಜೆ.ಸಿ. ಮಾಧುಸ್ವಾಮಿ ಇತರರು ಉಪಸ್ಥಿತರಿದ್ದರು.