Advertisement

ಆರ್ಥಿಕತೆ ಬಲಪಡಿಸುವ ಬಜೆಟ್‌: ಸಿಎಂ

09:52 AM Mar 07, 2020 | Sriram |

ದೂರದೃಷ್ಟಿ ಜತೆಗೆ ಕೃಷಿಗೆ ಒತ್ತು ನೀಡಿ ರೈತರ ಆರ್ಥಿಕತೆ ಬಲಪಡಿಸುವ ಬಜೆಟ್‌ ಇದಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

2020-21ನೇ ಸಾಲಿನ ಬಜೆಟ್‌ ಮಂಡನೆ ಬಳಿಕ ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರೀಯ ತೆರಿಗೆ ಆದಾಯದಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲಿನಲ್ಲಿ ಇಳಿಕೆ, ಜಿಎಸ್‌ಟಿ ಪರಿಹಾರ ಕಡಿತದಿಂದ ಸ್ವಲ್ಪ ಸಮಸ್ಯೆಯಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನಡಿ ರಾಜ್ಯಕ್ಕೆ ಹಂಚಿಕೆ ಯಾಗುವ ಪಾಲಿನ ಮೊತ್ತವೂ ಇಳಿಕೆಯಾಗಲಿದ್ದು, 15,000 ಕೋಟಿ ರೂ. ಕಡಿಮೆಯಾಗಲಿದೆ. ಈ ವಿಚಾರಗಳನ್ನು ಮುಚ್ಚಿಟ್ಟಿಲ್ಲ. ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಹೆಚ್ಚಿಸುವ ಮೂಲಕ ರಾಜಸ್ವ ಹೆಚ್ಚಳದ ಬಜೆಟ್‌ ಮಂಡಿಸಿದ್ದೇನೆ. ರಾಜಸ್ವ ಹೆಚ್ಚಳ ಮಾತ್ರವಲ್ಲದೆ, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಇತರೆ ವಿತ್ತೀಯ ಮಾನ ದಂಡಗಳನ್ನೂ ಪಾಲಿಸಲಾಗಿದೆ. ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ವೇತನ, ಇತರೆ ಭತ್ಯೆಗೆ 12,000 ಕೋಟಿ ರೂ. ಹೆಚ್ಚಳವಾಗಲಿದೆ. ಆದರೂ ನೀರಾವರಿಗೆ ಅತಿ ಹೆಚ್ಚು 21,308 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಎಸ್‌ಸಿಪಿ- ಟಿಎಸ್‌ಪಿ ಯೋಜನೆಯಡಿ ನಿಯಮಕ್ಕಿಂತಲೂ ಹೆಚ್ಚು ಅನುದಾನ ಒದಗಿಸಲಾಗಿದೆ. ರೈತರ ಸಾಲ ಮನ್ನಾ ಹಿನ್ನೆಲೆಯಲ್ಲಿ ಕೆಲ ಹೊಂದಾಣಿಕೆ ಮಾಡಲಾಗಿದೆ. ನೆರೆ ಪರಿಹಾರ ಕಾರ್ಯಕ್ಕೂ ಹೆಚ್ಚಿನ ಹಣ ಒದಗಿಸಲಾಗುವುದು ಎಂದು ತಿಳಿಸಿದರು.

ಬರಪಿಡೀತ ಜಲಕ್ಷಾಮ ಭಾಗಗಳಲ್ಲಿ ಕೃಷಿ ಉತ್ತೇಜನಕ್ಕಾಗಿ ಭೂಜಲ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಏತ ನೀರಾವರಿ ಯೋಜನೆಗೆ 5000 ಕೋಟಿ ರೂ. ಕಾಯ್ದಿರಿಸಲಾಗಿದೆ. ಮಳೆಯಾಶ್ರಿತ ಕೃಷಿಯನ್ನು ಸದೃಢಗೊಳಿಸಲು ಒತ್ತು ನೀಡಲಾಗಿದೆ. ಜತೆಗೆ ಆಡಳಿತ ಸುಧಾರಣೆಗೂ ಆದ್ಯತೆ ನೀಡಲಾಗಿದೆ. ಕಳಸಾ- ಬಂಡೂರಿ ಯೋಜನೆಗೆ 500 ಕೋಟಿ ರೂ. ಹಾಗೂ ಎತ್ತಿನಹೊಳೆ ಯೋಜನೆಗೆ 1,500 ಕೋಟಿ ರೂ. ಒದಗಿಸಲಾಗಿದೆ ಎಂದು ತಿಳಿಸಿದರು.ನಾವು ಅಧಿಕಾರ ವಹಿಸಿಕೊಂಡು ಏಳು ತಿಂಗಳಷ್ಟೇ ಆಗಿದೆ. ಸಾಲ ಮನ್ನಾ ಬಾಬ್ತು, ಕೇಂದ್ರದಿಂದ ಅನುದಾನ ಕಡಿತ ನಡುವೆಯೂ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಇಡೀ ದೇಶದಲ್ಲಿ ಆರ್ಥಿಕ ಹಿಂಜರಿಕೆ ಸ್ಥಿತಿ ಇರುವುದರಿಂದ ರಾಜ್ಯದಲ್ಲೂ ಸ್ವಲ್ಪ ಹಿನ್ನಡೆಯಾಗಿದೆ ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next