ಬೆಂಗಳೂರು: ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್. ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರವನ್ನು ನಿಂದಿಸಲು ಮೀಸಲಾದ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಹಿಂದೆ ಬಸವರಾಜ ಬೊಮ್ಮಾಯಿ ಅವರು ಲೇಖಾನುದಾನ ಪಡೆದಿದ್ದರು. ಅದರ ಮುಂದುವರಿದ ಭಾಗವೇ ಈ ಬಜೆಟ್. ಇದನ್ನು ರಾಜ್ಯದ ಬಜೆಟ್ ಪುಸ್ತಕ ಅನ್ನುವುದಕ್ಕಿಂತ ಬಿಜೆಪಿಯ ನಿಂದನಾ ಪುಸ್ತಕ ಎಂದರೆ ಸರಿಯಾದೀತು. ಬಸವರಾಜ ಬೊಮ್ಮಾಯಿಯವರ ಕಾಲದಲ್ಲಿ ನೀರಾವರಿ ಇಲಾಖೆಗೆ 1 ಲಕ್ಷ ಕೋಟಿ ರೂ. ಯೋಜನೆಗಳಿಗೆ ಅನುಮತಿ ಕೊಟ್ಟಿದ್ಧಾರೆ.
ಅದಕ್ಕೆ ಈಗ 40 ಸಾವಿರ ಕೋಟಿ ರೂ. ಹೆಚ್ಚುವರಿ ಸೇರ್ಪಡೆ ಆಗಿದೆ. 1 ಲಕ್ಷ 75 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಹಣವಿಡದೆ ಘೋಷಿಸಿದ್ಧಾರೆ. 2013 -18ರಿಂದ 15 ಲಕ್ಷ ಮನೆ ಕಟ್ಟಿದ್ದೀವಿ ಎಂದು ಹೇಳಿದ್ಧಾರೆ. ಎಲ್ಲಿ ಕಟ್ಟಿದ್ಧಾರೆ, ಇನ್ನು 12 ಲಕ್ಷ ಮನೆ ಕಟ್ಟಲು 17,815 ಕೋಟಿ ರೂ. ಬೇಕು ಎಂದು ಹೇಳಿದ್ಧಾರೆ. ಅದನ್ನು ಎಲ್ಲಿಂದ ತರುತ್ತಾರೆ. ಈಗ ನೋಡಿದರೆ ಆರ್ಥಿಕ ಶಿಸ್ತನ್ನು ಹಾಳು ಮಾಡಿದ್ಧಾರೆ ಎಂದು ಆರೋಪಿಸಿದ್ಧಾರೆ.
ಈ ಬಾರಿ 3 ಲಕ್ಷ 28 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಎರಡೂವರೆ ಲಕ್ಷ ಕೋಟಿ ರೂ. ರೆವಿನ್ಯೂ ಎಕ್ಸ್ ಪೆಂಡಿಚರ್, 27 ಸಾವಿರ ಕೋಟಿ ರೂ. ಸಾಲ ಮರುಪಾವತಿಗೆ ಮೀಸಲಿಟ್ಟಿದ್ಧಾರೆ. ಅದಾದ ಮೇಲೆ 85 ಸಾವಿರ ಕೋಟಿ ರೂ. ಸಾಲ ಎತ್ತುತ್ತಾರೆ. ಆ ಸಾಲಕ್ಕೆ ತಲೆ ಕೊಡುವುದು ಯಾರು? ಎಂದು ಪ್ರಶ್ನಿಸಿದ್ದಾರೆ.
ಇದು ಕೇವಲ ಕೇಂದ್ರ ಸರ್ಕಾರ-ಹಿಂದಿನ ಸರ್ಕಾರವನ್ನು ದೂಷಣೆ ಮಾಡುವ ಬಜೆಟ್ ಅಷ್ಟೇ. ಇದರಲ್ಲಿ ಏನೂ ಇಲ್ಲ ಎಂದು ಕುಮಾರಸ್ವಾಮಿ ದೂರಿದರು.