Advertisement

ಆಯವ್ಯಯ ಚಾಣಾಕ್ಷ-ಅಭಿವೃದ್ಧಿ ಪರ: ಆಚಾರ್ಯ

04:20 PM Feb 12, 2022 | Team Udayavani |

ಹುಬ್ಬಳ್ಳಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಆಯವ್ಯಯ ಅಭಿವೃದ್ಧಿ ಪರ ಹಾಗೂ ಚಾಣಾಕ್ಷತನದ್ದಾಗಿದ್ದು, ಸಾಕಷ್ಟು ಶಾಕ್‌ ನೀಡುವ ಅಂಶಗಳೂ ಇವೆ ಎಂದು ಬೆಂಗಳೂರಿನ ಲೆಕ್ಕ ಪರಿಶೋಧಕ ಕೆ. ಗುರುರಾಜ ಆಚಾರ್ಯ ಹೇಳಿದರು.

Advertisement

ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಕೆಸಿಸಿಐ ವತಿಯಿಂದ ಐಇಎಂಎಸ್‌-ಬಿ ಸ್ಕೂಲ್‌ ಹಾಗೂ ಐಸಿಎಐ ಹುಬ್ಬಳ್ಳಿ ಶಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೇಂದ್ರ ಬಜೆಟ್‌-2022 ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಸರಕಾರ ಮಂಡಿಸುವ ಬಜೆಟ್‌ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಇದು ಬಜೆಟ್‌ ಅಂದಾಜು ಆಗಿದೆ. ಭಾಷಣವೇ ಬಜೆಟ್‌ ಅಲ್ಲ. ಅದು ಹಣ ಹರಿವಿನ ಆರ್ಥಿಕ ಸ್ಟೇಟ್‌ಮೆಂಟ್‌ ಆಗಿದೆ.

ಸರಕಾರಗಳು ಮಂಡಿಸುವ ಬಜೆಟ್‌ ಖರ್ಚು ಮೊದಲಾಗಿದ್ದರೆ, ನಂತರ ಒಳಹರಿವು ಆಗಿರುತ್ತದೆ. ಬಜೆಟ್‌ನ ಮುಖ್ಯ ಅಂಶಗಳು ಹಾಗೂ ಅದರ ಹಿನ್ನೆಲೆಯಲ್ಲಿರುವ ಪೂರಕ ದಾಖಲೆಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ನಿರ್ಮಲಾ ಅವರು ಒಂದೂವರೆ ತಾಸಿನಲ್ಲಿ ಬಜೆಟ್‌ ಮಂಡಿಸಿರುವುದು ಒಳ್ಳೆಯದಾಗಿದೆ. ಸಿಎ ಪ್ರಕಾರ ಇದೊಂದು ಉತ್ತಮ ಬಜೆಟ್‌ ಆಗಿದೆ ಎಂದರು.

ಒಟ್ಟು 39.49ಲಕ್ಷ ಕೋಟಿ ರೂ.ಗಳ ಬಜೆಟ್‌ನಲ್ಲಿ ಶೇ.20ರಷ್ಟು ಸಿಂಹಪಾಲು ಹಣ ಬಡ್ಡಿ ಭರಿಸಲು ಹೋಗುತ್ತದೆ. ಆದಾಯ ತೆರಿಗೆಯಿಂದ ಸುಮಾರು 14.20 ಲಕ್ಷ ಕೋಟಿ ರೂ. ಸಂಗ್ರಹವಾದರೂ ನೌಕರ ವರ್ಗಕ್ಕೆ ಯಾವುದೇ ಸೌಲಭ್ಯ ಕೊಡದಿರುವುದು ಬೇಸರ ಮೂಡಿಸಿದೆ. ಆದಾಯ ಹಾಗೂ ವೆಚ್ಚಕ್ಕೆ ಹೊಂದಾಣಿಕೆ ಮಾಡದೆ ವೆಚ್ಚಕ್ಕೆ ಪ್ರಾಧಾನ್ಯತೆ ಕೊಟ್ಟಿರುವುದು ಶಾಕಿಂಗ್‌ ಅಂಶಗಳಾಗಿವೆ. ದೇಶದ ಟರ್ನ್ಓವರ್‌ (ವಹಿವಾಟು) ಜಿಡಿಪಿ ಮೇಲೆ ಅವಲಂಬಿಸಿದೆ. ಶೇ.42 ಜಿಡಿಪಿ ಇದೆ. ಈ ಅಂತರ ಹೇಗೆ ತುಂಬಲಾಗುತ್ತದೆ ಎಂಬುದು ಮುಖ್ಯ. ಇದನ್ನು ಹೊಂದಾಣಿಕೆ ಮಾಡಲು ಜಿಡಿಪಿ ಹೆಚ್ಚಿಸಬೇಕೆ ವಿನಃ ನೋಟು ಮುದ್ರಿಸುವುದಲ್ಲ ಎಂದರು.

ಐಇಎಂಎಸ್‌-ಬಿ ಸ್ಕೂಲ್‌ ಚೇರ್ಮನ್‌ ಡಾ| ಎನ್‌.ಎ. ಚರಂತಿಮಠ ಮಾತನಾಡಿ, ಕೇಂದ್ರವು ಮಂಡಿಸಿದ ಬಜೆಟ್‌ ಅಭಿವೃದ್ಧಿ ಪರವಾಗಿದ್ದು, ಜಿಡಿಪಿ ಶೇ. 9.2 ಅಭಿವೃದ್ಧಿ ದರ ಗುರಿ ಉತ್ತಮವಾಗಿದೆ. ರಫ್ತು ಮಾರುಕಟ್ಟೆ ಹೆಚ್ಚಳವಾಗಲಿದೆ. ಇದು ಚೀನಾ ಮಾರುಕಟ್ಟೆಗೆ ಪ್ರತಿರೋಧ ಒಡ್ಡಲು ಸಹಕಾರಿ ಆಗಲಿದೆ. ಕೃಷಿಗೆ ಒತ್ತು ಕೊಡಲು ಸಂಶೋಧನೆಗೆ ಒತ್ತು ಕೊಡಲಾಗಿದೆ. ಇದರಿಂದ ರೈತರ ಆದಾಯ ಹೆಚ್ಚಳವಾಗಲು ಅನುಕೂಲವಾಗುತ್ತದೆ.

Advertisement

ಕಿಸಾನ್‌ ಡ್ರೋನ್‌ ರೈತರ ಫಸಲು ಜೊತೆ ಭೂಮಿ ದಾಖಲಾತಿ ಡಿಜಿಟಲೀಕರಣಕ್ಕೆ ಉಪಯುಕ್ತವಾಗಲಿದೆ. ಇದರಿಂದ ಉದ್ಯೋಗ ಹೆಚ್ಚಳವಾಗಲಿದೆ. ಒಟ್ಟಾರೆ ಈ ಬಜೆಟ್‌ ಅತ್ಯುತ್ತಮವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಆಚಾರ್ಯ ಅವರು ಬಜೆಟ್‌ನ ಕುರಿತು ಸಂವಾದ ನಡೆಸಿ ಕೇಳುಗರ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸಿದರು. ಕಾರ್ಯಕ್ರಮದಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು, ಐಇಎಂಎಸ್‌-ಬಿ ಸ್ಕೂಲ್‌ ನ ಉಪನ್ಯಾಸಕರು, ವಿದ್ಯಾರ್ಥಿಗಳು ಮೊದಲಾದವರು ಪಾಲ್ಗೊಂಡಿದ್ದರು.

ಗಾಯತ್ರಿ ಹಜಿಬ ಪ್ರಾರ್ಥಿಸಿದರು. ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಎಚ್‌.ಎನ್‌. ಆಡಿನ್ನವರ ಪರಿಚಯಿಸಿದರು. ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಸ್ವಾಗತಿಸಿದರು. ತೆರಿಗೆ ಉಪ ಸಮಿತಿ ಚೇರ್ಮನ್‌ ಶೇಷಗಿರಿ ಕುಲಕರ್ಣಿ ನಿರೂಪಿಸಿದರು. ಕಾರ್ಯದರ್ಶಿ ಪ್ರವೀಣ ಅಗಡಿ ವಂದಿಸಿದರು.

ಬಂಡವಾಳ ವೆಚ್ಚ ಹೆಚ್ಚಿಸಿದಷ್ಟು ಹಲವು ಪ್ರಯೋಜನಗಳು ಸಿಗುತ್ತವೆ. ನಮಗೆ ಏನಾದರೂ ಲಾಭ ಸಿಗುತ್ತದೆ ಎಂದರೆ ತಾನೇ ಅದಕ್ಕೆ ವೆಚ್ಚ ಮಾಡುತ್ತೇವೆ. ಅದೇರೀತಿ ದೇಶಕ್ಕೆ ಮೂಲಸೌಕರ್ಯಗಳಿಗಾಗಿ ಬಂಡವಾಳ ವೆಚ್ಚ ಮಾಡಿದಷ್ಟು ಉತ್ತಮ. ಈ ಬಾರಿ ಬಜೆಟ್‌ನಲ್ಲಿ ಯಾವುದೇ ಜನಪರ ಯೋಜನೆಗಳನ್ನು ಘೋಷಿಸಿಲ್ಲ. ಉಚಿತವಾಗಿ ಏನನ್ನೂ ಕೊಟ್ಟಿಲ್ಲ. ಬಂಡವಾಳ ವೆಚ್ಚಕ್ಕೆ 7.50 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಬಾರಿಗಿಂತ ಶೇ.35 ಬಂಡವಾಳ ವೆಚ್ಚ ಮಾಡಿರುವುದು ಉತ್ತಮ ಬೆಳವಣಿಗೆ.
ಕೆ. ಗುರುರಾಜ ಆಚಾರ್ಯ,
ಲೆಕ್ಕ ಪರಿಶೋಧಕ

ನದಿಗಳ ಜೋಡಣೆಯಿಂದ ಕುಡಿಯುವ ನೀರು, ನೀರಾವರಿಗೆ, ವಿದ್ಯುತ್‌ ಉತ್ಪಾದನೆಗೆ ಸಹಕಾರಿ ಆಗಲಿದೆ. ಕೃಷಿ ಆಧುನೀಕರಣಕ್ಕೆ ಒತ್ತು ಕೊಡಲಾಗಿದೆ. ಇದು ರೈತಾಪಿ ಜನರಿಗೆ ಅತ್ಯುಪಯುಕ್ತವಾಗಲಿದೆ. ಎಂಎಸ್‌ಎಂಇಗೆ ಒತ್ತು ಕೊಡಲಾಗಿದೆ. ಇದರಿಂದ ಶೇ. 25 ಉದ್ಯೋಗಾವಕಾಶ ಹೆಚ್ಚಳವಾಗಲಿದೆ.
ಡಾ| ಎನ್‌.ಎ. ಚರಂತಿಮಠ,
ಐಇಎಂಎಸ್‌-ಬಿ ಸ್ಕೂಲ್‌ ಚೇರ್ಮನ್‌

Advertisement

Udayavani is now on Telegram. Click here to join our channel and stay updated with the latest news.

Next