ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರಕಾರದ ಪಾಲಿಗೆ ಅಗ್ನಿಪರೀಕ್ಷೆ ಎಂದೇ ಪರಿಗಣಿಸಲಾಗಿರುವ ವಿಧಾನ ಸಭೆಯ ಬಜೆಟ್ ಅಧಿವೇಶನ ಇಂದು ಆರಂಭಗೊಂಡಿದೆ. ಈ ಅಧಿವೇಶನದಲ್ಲಿ ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಈ ಕಾರಣದಿಂದ ಕಳೆದ ಕೆಲವು ದಿನಗಳಿಂದ ತಲೆ ಮರೆಸಿಕೊಂಡಿರುವ ಏಳು ಜನ ಕಾಂಗ್ರೆಸ್ ಶಾಸಕರು ಇಂದಾದರೂ ಸದನಕ್ಕೆ ಆಗಮಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಎಳೂ ಜನ ಶಾಸಕರು ಸದನಕ್ಕೆ ಗೈರಾಗುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ನಡುಕ ಹುಟ್ಟಿಸಿದ್ದಾರೆ.
ಒಟ್ಟಾರೆಯಾಗಿ ಇಂದು ಸದನಕ್ಕೆ ದೋಸ್ತಿ ಸರಕಾರದ 8 ಜನ ಶಾಸಕರು ಮತ್ತು 2 ಜನ ಪಕ್ಷೇತರರು ಗೈರಾಗಿದ್ದಾರೆ.
ಸದನಕ್ಕೆ ಗೈರಾಗಿರುವ ಕಾಂಗ್ರೆಸ್ ಶಾಸಕರು
: ಬಿ. ನಾಗೇಂದ್ರ, ಗಣೇಶ್ ಜೆ.ಎನ್., ಉಮೇಶ್ ಜಾಧವ್, ಮಹೇಶ್ ಕುಮಠಹಳ್ಳಿ, ಬಿ.ಸಿ. ಪಾಟೀಲ್, ರಾಮಪ್ಪ ಮತ್ತು ರಮೇಶ್ ಜಾರಕಿಹೊಳಿ.
ಇನ್ನು ಜೆಡಿಎಸ್ ನ ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಮತ್ತು ಪಕ್ಷೇತರ ಶಾಸಕರಾಗಿರುವ ನಾಗೇಶ್ ಹೆಚ್. ಮತ್ತು ಮಾಜೀ ಸಚಿವ ಆರ್. ಶಂಕರ್ ಅವರು ಗೈರಾಗಿದ್ದಾರೆ.
ಬಿಜೆಪಿ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ಮತ್ತು ಅಶ್ವಥ್ಥನಾರಾಯಣ ಅವರೂ ಇಂದು ಅಧಿವೆಶನದಲ್ಲಿ ಕಾಣಿಸಿಕೊಳ್ಳದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಂಧನ ಭೀತಿಯಿಂದ ಗಣೇಶ್ ಬರಲಿಲ್ಲವೇ?
ರೆಸಾರ್ಟ್ ನಲ್ಲಿ ಸಚಿವ ಆನಂದ ಸಿಂಗ್ ಮೇಲೆ ಹಲ್ಲೆ ಮಾಡಿ ತಲೆತಪ್ಪಿಸಿಕೊಂಡಿರುವ ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಇಂದು ಬೆಳಿಗ್ಗೆ ಬೆಂಗಳೂರಿಗೆ ಬಂದಿದ್ದರು ಎಂದೇ ಸುದ್ದಿಯಾಗಿತ್ತು. ಆದರೆ ಅವರ ಬಂಧನಕ್ಕೆ ಪೊಲೀಸ್ ಬಲೆ ಬೀಸಿರುವುದರಿಂದ ಬಂಧನ ಭೀತಿಗೆ ಹೆದರಿ ಅವರು ಸದನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆ ಈಗ ಎಲ್ಲರ ಮನದಲ್ಲಿ ಮೂಡಿದೆ.
ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಆನಂದ ಸಿಂಗ್ ಅವರು ಇಂದು ಸದನಕ್ಕೆ ಆಗಮಿಸಿದರು. ಕಣ್ಣಿನ ಭಾಗಕ್ಕೆ ಗಾಯವಾಗಿದ್ದ ಕಾರಣ ಅವರು ಕಪ್ಪು ಕನ್ನಡಕ ಧರಿಸಿ ಸದನಕ್ಕೆ ಆಗಮಿಸಿ ಗಮನ ಸೆಳೆದರು.