ಹೊಸದಿಲ್ಲಿ : ಕಳೆದ ಜನವರಿ 29ರಂದು ಆರಂಭಗೊಂಡಿದ್ದ ಬಜೆಟ್ ಅಧಿವೇಶನದ ಎರಡನೇ ಹಂತ 30 ಬೈಠಕ್‌ಗಳನ್ನು ಕಂಡಿತಾದರೂ ಕೇವಲ 44 ತಾಸುಗಳ ಕಲಾಪಕ್ಕೆ ಸಾಕ್ಷಿಯಾಗಿ 121 ತಾಸುಗಳ ಅಕ್ಷಮ್ಯ ನಷ್ಟಕ್ಕೆ ಗುರಿಯಾಗಿ ಸಮಾಪನಗೊಂಡಿರುವುದು ವಿಶೇಷವಾಗಿದೆ.
27 ದಿನಗಳ ಈ ಬೈಠಕ್‌ನಲ್ಲಿ ಒಂದೇ ಒಂದು ತಾಸು ಕೂಡ ಪ್ರಶ್ನಾವಧಿಯನ್ನು ಕಾಣಲಾಗಿಲ್ಲ; ನಿರಂತರ ಗದ್ದಲ, ಅಡಚಣೆಗಳಿಂದ ಪದೇ ಪದೇ ಮುಂದೂಡಿಕೆಗಳನ್ನು ಈ ಅಧಿವೇಶನ ಕಂಡಿತು ಎಂದು ರಾಜ್ಯಸಭೆ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ವಿಷಾದದಿಂದ ಹೇಳಿದರು.
ರಾಜ್ಯಸಭೆಯಲ್ಲಿ ವಿಪಕ್ಷೀಯರ ನಿರಂತರ ಗದ್ದಲ, ಗಲಾಟೆ, ಕ್ಷೋಭೆಗೆ ಕಾರಣವಾದ ಕೆಲವು ಮುಖ್ಯ ವಿಷಯಗಳೆಂದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಬ್ಯಾಂಕ್ ಹಗರಣಗಳು, ಕಾವೇರಿ ಜಲ ನಿರ್ವಹಣಾ ಮಂಡಳಿ ಸ್ಥಾಪನೆಯ ಆಗ್ರಹ, ಪ್ರತಿಮೆಗಳ ಭಂಜನೆ, ಎಸ್‌ಸಿ/ಎಸ್‌ಟಿ ಕಾಯಿದೆ ಕುರಿತ ಸುಪ್ರೀಂ ಕೋರ್ಟ್ ಆದೇಶ ಮತ್ತು ಉತ್ತರ ಪ್ರದೇಶ್‌ದ ಕಸ್‌ಗಂಜ್‌ನಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ವಿಷಯ. ಎರಡನೇ ಹಂತದ ಬಜೆಟ್ ಅಧಿವೇಶನದ ನಾಲ್ಕನೇ ಮೂರಂಶ ಅವಧಿಯು ಕೇವಲ ಗದ್ದಲ, ಗಲಾಟೆ, ಆಕ್ರೋಶ, ತಾರಕ ಸ್ವರದ ಪ್ರತಿಭಟನೆಯನ್ನು ಕಂಡಿತೇ ಹೊರತು ಯಾವುದೇ ಕಲಾಪವನ್ನು ಕಾಣಲಿಲ್ಲ.
ರಾಜ್ಯಸಭೆಯ 245ನೇ ಅಧಿವೇಶನದ ತನ್ನ ಸಮಾಪನ ಭಾಷಣದಲ್ಲಿ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು “ಇದೊಂದು ಪ್ರಮುಖವಾಗಿ ಮರೆಯಬೇಕಾದ ಅಧಿವೇಶನ ಎಂಬುದು ನನಗೆ ಅತ್ಯಂತ ನೋವಿನ ವಿಷಯವಾಗಿದೆ. ಅತ್ಯಂತ ಮಹತ್ವದ ಸಂಸದೀಯ ಸಂಸ್ಥೆಯ ಹೊಣೆಗಾರಿಕೆಗಳನ್ನು ಮತ್ತು ಜನಾದೇಶವನ್ನು ಸಂಪೂರ್ಣ ಅಗೌರವದಿಂದ ಕಂಡ ಕಳೆದ ಹೋದ ಅವಕಾಶಗಳ ಅಧಿವೇಶನ ಇದಾಗಿರುವುದು ದುಃಖದ ಸಂಗತಿ’ ಎಂದು ಹೇಳಿದರು.
ರಾಜ್ಯಸಭಾ ಕಲಾಪಗಳಿಗೆ ನಿರಂತರವಾಗಿ ಒಡ್ಡಲಾದ ತಡೆಯಿಂದಾಗಿ ಅತ್ಯಂತ ಮಹತ್ವದ 2018ರ ಹಣಕಾಸು ಮಸೂದೆಯು ಯಾವುದೇ ಚರ್ಚೆಯನ್ನು ಕಾಣಲಿಲ್ಲ; ಆದಾಗ್ಯೂ ಗ್ರಾಚ್ಯುಟಿ ಕಾನೂನನ್ನು ಚರ್ಚೆ ಇಲ್ಲದೆ ಪಾಸು ಮಾಡಿರುವುದು ವಿಶೇಷ.