Advertisement

ಇಂದಿನಿಂದ ಬಜೆಟ್‌ ಅಧಿವೇಶನ ಶುರು:ಕಾಂಗ್ರೆಸ್‌ ವಿಪ್‌ ಅಸ್ತ್ರ 

12:30 AM Feb 06, 2019 | Team Udayavani |

ಬೆಂಗಳೂರು: ಸರ್ಕಾರ ಉಳಿಯುತ್ತಾ, ಉರುಳುತ್ತಾ ಎಂಬ ಆತಂಕದ ನಡುವೆಯೇ ರಾಜ್ಯ ವಿಧಾನಮಂಡಲದ ಬಜೆಟ್‌ ಅಧಿವೇಶನ ಬುಧವಾರದಿಂದ ಆರಂಭವಾಗಲಿದ್ದು, ಎಲ್ಲರ ಕಣ್ಣು ಕಾಂಗ್ರೆಸ್‌ನ ಅತೃಪ್ತ ಶಾಸಕರತ್ತ ಹೊರಳಿದೆ. ಬಿಜೆಪಿ,ಜೆಡಿಎಸ್‌ಗಿಂತ ಹೆಚ್ಚು ಆತಂಕಕ್ಕೆ ಒಳಗಾಗಿರುವ ಕಾಂಗ್ರೆಸ್‌ ತನ್ನ ಶಾಸಕರಿಗೆ ವಿಪ್‌ ಜಾರಿ ಮಾಡಿದೆ. ಒಂದು ವೇಳೆ, ಅತೃಪ್ತ ಶಾಸಕರು ಸದನಕ್ಕೆ ಹಾಜರಾಗದೇ ಇದ್ದರೆ ಅನರ್ಹತೆಯ ತೂಗುಗತ್ತಿಗೆ ಈಡಾಗಲಿದ್ದಾರೆ. ಯಾವುದೇ ಕಾರಣಕ್ಕೂ ತನ್ನ ಶಾಸಕರು ಸದನಕ್ಕೆ ಗೈರು ಹಾಜರಾಗಬಾರದು ಎಂಬ ಸಲುವಾಗಿ “ವಿಪ್‌’ ಜಾರಿ ಮಾಡಿರುವ ಕಾಂಗ್ರೆಸ್‌, ಫೆ.6 ರಿಂದ ಫೆ.15ರ ವರೆಗೆ ಸದನಕ್ಕೆ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

Advertisement

ಆದರೆ, ಬಿಜೆಪಿ ಮತ್ತು ಜೆಡಿಎಸ್‌ ಮಾತ್ರ ತಮ್ಮ ಶಾಸಕರಿಗೆ ವಿಪ್‌ ಜಾರಿ ಮಾಡದೇ ಇರುವುದು ಕುತೂಹಲಕ್ಕೆಡೆ ಮಾಡಿದೆ. ಕಾಂಗ್ರೆಸ್‌ನ ವಿಪ್‌ನಿಂದಾಗಿ ಇದುವರೆಗೆ ಯಾರಿಗೂ ಸಿಗದೇ ನಿಗೂಢವಾಗಿಯೇ ಇರುವ ಅತೃಪ್ತ ಶಾಸಕರಾದ ರಮೇಶ್‌ ಜಾರಕಿಹೊಳಿ, ಮಹೇಶ ಕುಮಟಳ್ಳಿ,ನಾಗೇಂದ್ರ ಅವರು ಅಧಿವೇಶನಕ್ಕೆ ಹಾಜರಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ಜತೆಗೆ ಆನಂದ್‌ಸಿಂಗ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಕಂಪ್ಲಿ ಶಾಸಕ ಗಣೇಶ್‌ ಅವರು ಕೂಡ ಆಗಮಿಸಬೇಕಾಗಿದೆ. ಸರ್ಕಾರದ ಮುಖ್ಯ ಸಚೇತಕ ಗಣೇಶ್‌ ಹುಕ್ಕೇರಿ, ಕಾಂಗ್ರೆಸ್‌ ಶಾಸಕರಿಗೆ ಮಂಗಳವಾರ ಸಂಜೆಯೇ ವಿಪ್‌ ಜಾರಿಗೊಳಿಸಿದ್ದಾರೆ. ಈ ಅಧಿವೇಶನದಲ್ಲಿ ವಿಪ್‌ ಜಾರಿ ಮಾಡುವ ಅಗತ್ಯವಿಲ್ಲ. ಹೀಗಾಗಿ ಬಿಜೆಪಿ ಶಾಸಕರಿಗೆ ವಿಪ್‌ ಜಾರಿ ಮಾಡಿಲ್ಲ ಎಂದು ಮುಖ್ಯ ಸಚೇತಕ ಸುನೀಲ್‌ ಕುಮಾರ್‌ ಹೇಳಿದ್ದಾರೆ.

ನಾಲ್ವರು ಅತೃಪ್ತರ ಪೈಕಿ ಉಮೇಶ್‌ ಜಾಧವ್‌ ಕಾಂಗ್ರೆಸ್‌ ನಾಯಕರ ಸಂಪರ್ಕಕ್ಕೆ ಬಂದಿದ್ದಾರೆ. ಉಳಿದ ಮೂವರು ಸಹ ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ. ಬುಧವಾರ ಉಭಯ ಸದನ ಉದ್ದೇಶಿಸಿ ರಾಜ್ಯಪಾಲ ವಜೂಭಾಯ್‌ವಾಲಾ ಭಾಷಣ ಮಾಡಲಿದ್ದಾರೆ. ಶುಕ್ರವಾರ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಅತೃಪ್ತರಿಗೆ ಸಿದ್ದರಾಮಯ್ಯ ಪತ್ರ

 ವಿಪ್‌ ಜಾರಿಯ ಹೊರತಾಗಿ ಯೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಪತ್ರ ಬರೆದಿದ್ದಾರೆ. ಜ.17 ರಂದು ನಡೆದ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಪಿ.ಆರ್‌.ರಮೇಶ್‌ ಸೂಚನೆ ನೀಡಿದ್ದರೂ, ತಾವು 9 ದಿನ ಕಳೆದರೂ ಭೇಟಿ ಮಾಡದೇ ದೂರ ಉಳಿದಿದ್ದೀರಿ. ಫೆಬ್ರವರಿ 6 ರಿಂದ 15 ರ ವರೆಗೆ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯ ಕಲಾಪಗಳಲ್ಲಿ ಪಾಲ್ಗೊಂಡು ಅಧಿವೇಶನದ ಮುಂಚೆ ಅಥವಾ ಕಲಾಪ ನಡೆಯುವ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಪ್ರತ್ಯೇಕವಾಗಿ ಭೇಟಿ ಮಾಡಿ ಗೈರು ಹಾಜರಿಗೆ ಸಮಜಾಯಿಷಿ ನೀಡುವಂತೆ ಪತ್ರದಲ್ಲಿ ಸೂಚಿಸಲಾಗಿದೆ. ಈಗಾಗಲೇ ಬೆಂಗಳೂರಿಗೆ ಆಗಮಿಸಿ ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿರುವ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್‌ ಜಾಧವ್‌ ಅವರಿಗೆ ಅವರ ಸಂಬಂಧಿಕ ಹಾಗೂ ಪರಿಷತ್‌ ಸದಸ್ಯ ಪ್ರಕಾಶ್‌ ರಾಠೊಡ್‌ ಅವರ ಮೂಲಕ ಸಿದ್ದರಾಮಯ್ಯ ನೇರವಾಗಿ ಪತ್ರ ರವಾನೆ ಮಾಡಿದ್ದಾರೆ. ಖುದ್ದಾಗಿ ಭೇಟಿ ಮಾಡಿ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮೈತ್ರಿಕೂಟದಿಂದ ಪ್ರತಿತಂತ್ರ: ಬಿಜೆಪಿಯ ತಂತ್ರಗಾರಿಕೆಯ ಸುಳಿವರಿತಿರುವ ಕಾಂಗ್ರೆಸ್‌-ಜೆಡಿಎಸ್‌ ಸಹ ಬಿಜೆಪಿಗೆ ತಿರುಗೇಟು ನೀಡಲು ಪ್ರತಿತಂತ್ರ ಹೂಡಲು ನಿರ್ಧರಿಸಿದ್ದು ಗುರುವಾರ ಜಂಟಿ ಶಾಸಕಾಂಗ ಪಕ್ಷದ ಸಭೆ ಸಹ ನಿಗದಿಗೊಳಿಸಿದೆ. ಇಲ್ಲಿ ಕಾರ್ಯತಂತ್ರ ರೂಪಿಸುವ ಸಾಧ್ಯತೆಯಿದೆ. ಆದರೆ, ಜಂಟಿ ಶಾಸಕಾಂಗ ಪಕ್ಷದ ಸಭೆ ಆಗದಿದ್ದರೆ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಗುರುವಾರ ಬೆಳಗ್ಗೆ ನಡೆಯುವ ಸಾಧ್ಯತೆಯಿದೆ.

ಅವಿಶ್ವಾಸ ನಿರ್ಣಯಇಲ್ಲ: ಬಿಎಸ್‌ವೈ
ರಿವರ್ಸ್‌ ಆಪರೇಷನ್‌ ವದಂತಿ ಹಿನ್ನೆಲೆಯಲ್ಲಿ ಬಿಜೆಪಿ ಸಹ ಶಾಸಕಾಂಗ ಪಕ್ಷದ ಸಭೆ ನಡೆಸಿ ತಮ್ಮಶಾಸಕರನ್ನು ಹಿಡಿದಿಟ್ಟುಕೊಳ್ಳುವ ಜತೆಗೆ ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದಟಛಿ ಪ್ರಯೋಗಿಸ ಬೇಕಾದ ಅಸOಉಗಳ ಸಮೇತ ಸಜ್ಜಾಗಿದೆ.

ಅವಿಶ್ವಾಸ ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಯಡಿ ಯೂರಪ್ಪ ಹೇಳಿದ್ದು ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಹೇಳಿಕೆಗಳು, ವ್ಯತ್ಯಾಸಗಳನ್ನೇ ಮುಂದಿಟ್ಟು ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಸಿಎಂ ಕುಮಾರಸ್ವಾಮಿ ಅಥವಾ ಕಾಂಗ್ರೆಸ್‌ ನಾಯಕರ ಮಾತುಗಳು, ಆಮಿಷ ನಂಬಿ ಬಿಜೆಪಿಯವರು ಯಾರೂ ಪಕ್ಷಕ್ಕೆ ಕೈ ಕೊಡಲು ಮುಂದಾಗಬಾರದು. ಖಂಡಿತವಾಗಿಯೂ ನಮ್ಮದೇ ಸರ್ಕಾರ ಬಂದೇ ಬರುತ್ತದೆ. ಅದುವರೆಗೂ ತಾಳ್ಮೆಯಿಂದ ಕಾಯೋಣ ಎಂದು ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ. ಅತೃಪ್ತ ಕಾಂಗ್ರೆಸ್‌ ಶಾಸಕರ ಕೈಲಿ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನೂ ಬಿಜೆಪಿ ಜೀವಂತವಾಗಿಯೇ ಇಟ್ಟುಕೊಂಡಿದೆ ಎನ್ನಲಾಗಿದೆ. 

ಮೈತ್ರಿ ಸರ್ಕಾರದ ಗಾಡಿ ಸುಭದ್ರವಾಗಿ ಸಾಗುತ್ತಿದೆ. ಕಾಂಗ್ರೆಸ್‌ನ ಕೆಲ ಶಾಸಕರು ಬರುವ ಬಗ್ಗೆ “ನಾಳೆ ಅಧಿವೇಶನದಲ್ಲಿ ಪರದೆ ತೆರೆಯುತ್ತದೆ. ಆಗ ನೀವೇ ನೋಡಿಕೊಳ್ಳಿ’.
● ಎಚ್‌.ಡಿ.ಕುಮಾರಸ್ವಾಮಿ, 

ಸಿಎಂಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ ಮಂಡಿಸಲಿದ್ದಾರೆ. ಬಜೆಟ್‌ಗೆ ಅನುಮೋದನೆಯೂ ಸಿಗಲಿದೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಆಪರೇಷನ್‌ ಕಮಲ ಪದೇ ಪದೆ ಫೇಲಾಗುತ್ತಿದೆ.
ಸಿದ್ದರಾಮಯ್ಯ, ಮಾಜಿ ಸಿಎಂ

ಅವಿಶ್ವಾಸ ನಿರ್ಣಯ ಮಂಡಿಸುವ ಯಾವುದೇ ಚಿಂತನೆಯಿಲ್ಲ. ರಾಜ್ಯಪಾಲರ ಭಾಷಣದ ಬಳಿಕ ಮತ್ತೆ ನಾಯಕರ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ.
● ಯಡಿಯೂರಪ್ಪ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next