Advertisement

ಪಾಲಿಕೆ ಬಜೆಟ್‌ ಅಂದಾಜು ಪಟ್ಟಿ ಸಿದ್ಧತೆ

11:37 AM Jan 10, 2020 | Naveen |

ದಾವಣಗೆರೆ: ಆಯುರ್ವೇದಿಕ್‌ ಆಸ್ಪತ್ರೆ ಮೇಲ್ದರ್ಜೆ, ಎಸಿ ಕಚೇರಿ ಬಳಿ ಸ್ಟೀಲ್‌ ಬ್ರಿಡ್ಜ್, ಟ್ರೇಡ್‌ ಲೈಸನ್ಸ್‌ ಅಕ್ರಮ ತಡೆ, ಜಾಹೀರಾತು ಸ್ಟಿಕ್ಕರ್‌ ನಿಯಂತ್ರಣ, ಪಾಲಿಕೆ ಆಸ್ತಿಯಿಂದ ಆದಾಯ ವೃದ್ಧಿ, ಉತ್ತರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭ, ಈಜುಕೊಳ ಪುನರ್‌ ಆರಂಭ…ಇವು ಮಹಾನಗರ ಪಾಲಿಕೆಯಲ್ಲಿ ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಸಂಘ-ಸಂಸ್ಥೆಗಳವರು, ಸಾರ್ವಜನಿಕರು ನೀಡಿದ ಸಲಹೆ.

Advertisement

ಪಾಲಿಕೆ ಸಭಾಂಗಣದಲ್ಲಿ 2020-21ನೇ ಸಾಲಿನ ಆಯ-ವ್ಯಯ ಅಂದಾಜು ಪಟ್ಟಿ ಸಿದ್ಧತೆ ಸಂಬಂಧ ಸಂಘ-ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಆದಾಯ ಕ್ರೋಢೀಕರಣ ಹಾಗೂ ಅಗತ್ಯವಾಗಿ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆ ಸಲಹೆ ನೀಡಿದರು.

ಹೋರಾಟಗಾರ ಡಿ.ಅಸ್ಲಂ ಖಾನ್‌ ಮಾತನಾಡಿ, ನಗರದ ದೊಡ್ಡಪೇಟೆಯಲ್ಲಿರುವ ಐನಳ್ಳಿ ಶರಣಪ್ಪ ಆಯುರ್ವೇದಿಕ್‌ ಆಸ್ಪತ್ರೆ ಹಾಗೂ ಬಾಷಾನಗರದಲ್ಲಿರುವ ಪ್ರಸೂತಿ ಕೇಂದ್ರ ಮೇಲ್ದರ್ಜೆಗೇರಿಸಬೇಕು. ಹಳೇಯ ನಗರದಲ್ಲಿ ಪಾಲಿಕೆ ವಲಯ ಕಚೇರಿ ಸ್ಥಾಪಿಸಬೇಕು. ಎ.ಸಿ.ಕಚೇರಿ ಬಳಿ ಪಿಬಿ ರಸ್ತೆಯಲ್ಲಿ ಸ್ಟೀಲ್‌ ಬ್ರಿಡ್ಜ್ ನಿರ್ಮಿಸಬೇಕು. ನಗರದ ನಾಲ್ಕೂ ದಿಕ್ಕಿನಲ್ಲಿ ಕಸ ವಿಲೇವಾರಿಗೆ ವ್ಯವಸ್ಥೆ ಮತ್ತು ಹದಡಿ ರಸ್ತೆಯಲ್ಲಿ ಪ್ರತ್ಯೇಕ ಬಸ್‌ ನಿಲ್ದಾಣ ಸ್ಥಾಪಿಸುವಂತೆ ಸಲಹೆ ನೀಡಿದರು.

ಸಾರ್ವಜನಿಕ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ. ಶ್ರೀಕಾಂತ್‌, ಪಾಲಿಕೆ ಆದಾಯ ಕ್ರೋಢೀಕರಣದ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು. ನಗರದಲ್ಲಿ ಟ್ರೇಡ್‌ ಲೈಸೆನ್ಸ್‌ ಅಕ್ರಮ ಪ್ರಕರಣ ಪತ್ತೆ ಹಚ್ಚಿದರೂ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತಿಲ್ಲ. ಪಾಲಿಕೆ ಅಧಿಕಾರಿಗಳೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಈ ಬಗ್ಗೆ ಆಯುಕ್ತರು ಸೂಕ್ತ ಗಮನ ಹರಿಸಬೇಕೆಂದರು.

ವಾಣಿಜ್ಯ ತೆರಿಗೆ ಸಮರ್ಪಕವಾಗಿ ಸಂಗ್ರಹ ಆಗುತ್ತಿಲ್ಲ. 45 ಕಟ್ಟಡಗಳಿದ್ದರೂ ಅವುಗಳೆಲ್ಲವಕ್ಕೆ ಸೇರಿ 3 ರಿಂದ 4 ಟ್ರೇಡ್‌ ಲೈಸೆನ್ಸ್‌ ಇವೆ. ಕಲ್ಯಾಣ ಮಂಟಪ, ಸಮುದಾಯ ಭವನಗಳ ಕಸ ವಿಲೇವಾರಿಯಲ್ಲೇ ಅಕ್ರಮ ನಡೆಯುತ್ತಿದೆ. 4 ಜಾಹಿರಾತು ಫಲಕಕ್ಕೆ ಅನುಮತಿ ಪಡೆದು 10 ಫಲಕ ಹಾಕುತ್ತಾರೆ. ಲೈಟ್‌ ಕಂಬಗಳು, ರಸ್ತೆ ಡಿವೈಡರ್‌ಗಳ ಮೇಲೆ ಜಾಹಿರಾತು ಸ್ಟಿಕ್ಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

ಆದಾಯ ವೃದ್ಧಿಗೆ ಬಿಬಿಎಂಪಿ, ಮಂಗಳೂರು ಸೇರಿದಂತೆ ಮಹಾನಗರಗಳಲ್ಲಿರುವಂತೆ ಪಾರ್ಕಿಂಗ್‌ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಆದಾಯ ತರುವ ಮಾಹಿತಿ ನೀಡಿದರೆ ಹಲವೆಡೆ ಪುರಸ್ಕಾರ ನೀಡಲಾಗುತ್ತದೆ. ಅದೇ ರೀತಿ ಇಲ್ಲೂ ಕೂಡ ಆ ಬಗ್ಗೆ ಆಲೋಚಿಸಲಿ ಎಂದರು.

ಕನ್ನಡ ಸಂಘಟನೆ ಮುಖಂಡ ನಾಗೇಂದ್ರ ಬಂಡಿಕರ್‌, ಸ್ಮಾರ್ಟ್‌ ಸಿಟಿ ಯೋಜನೆ ಹೆಸರಿನಲ್ಲಿ ಸುಸ್ಥಿತಿಯಲ್ಲಿರುವ ಸಿಮೆಂಟ್‌ ರಸ್ತೆಗಳು, ಒಳ ಚರಂಡಿ ಮತ್ತು ನೀರಿನ ಸಂಪರ್ಕಗಳನ್ನು ಹಾಳು ಮಾಡಲಾಗುತ್ತಿದೆ. ಇದರಿಂದಾಗಿ ಪಾಲಿಕೆಗೆ ಅನಗತ್ಯ ವೆಚ್ಚವಾಗಲಿದೆ. ಯಾವುದೇ ರಸ್ತೆ ನಿರ್ಮಿಸುವ ಮುನ್ನ ಒಳಚರಂಡಿ ಮತ್ತು ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಕಾಮಗಾರಿ ಕೈಗೊಳ್ಳಬೇಕು. ಅಲ್ಲದೆ, ಪಾಲಿಕೆ ಆವರಣದಲ್ಲಿರುವ ಪುಟ್ಟಣ್ಣ ಕಣಗಾಲ್‌ ವಾದ್ಯ ಮಂದಿರ ದುರಸ್ತಿಗೊಳಿಸಿ, ಸಂಗೀತಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಜೆಡಿಎಸ್‌ ಮುಖಂಡ ಅಮಾನುಲ್ಲಾ ಖಾನ್‌ ಮಾತನಾಡಿ, ಜನರಿಗೆ ಕುಡಿಯುವ ನೀರು, ಸ್ವಚ್ಛತೆ ಮತ್ತು ಬೀದಿ ದೀಪಗಳ ಅವಶ್ಯಕತೆ
ಹೆಚ್ಚಿರುತ್ತದೆ. ಆದ್ದರಿಂದ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಪಾಲಿಕೆ ಹಳೆಯ ಮತ್ತು ಬಳಕೆ ಇಲ್ಲದ ಕಟ್ಟಡಗಳನ್ನು ಗುರುತಿಸಿ, ಅವುಗಳನ್ನು ಆದಾಯದ ಮೂಲಗಳಾಗಿ ಪರಿರ್ವತಿಸಬೇಕು. ಸತ್ತ ಹಂದಿಗಳ ನಿರ್ವಹಣೆಗೆ ನಗರದ ಎರಡೂ ಭಾಗಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಜಿಲ್ಲಾ ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ಎಲ್‌.ಎಚ್‌.ಸಾಗರ್‌, ದಾವಣಗೆರೆ ದಕ್ಷಿಣ ಭಾಗದಲ್ಲಿ ಕ್ರೀಡಾಪಟುಗಳು ಹೆಚ್ಚಿದ್ದು, ಈ ಭಾಗಕ್ಕೆ ಒಳಾಂಗಣ ಕ್ರೀಡಾಂಗಣ ಆಗಬೇಕು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಉನ್ನತಿಗೆ ತಕ್ಕಂತೆ ಪ್ರೋತ್ಸಾಹಧನ ನೀಡಬೇಕು. ಉತ್ತರ ಭಾಗದಲ್ಲಿಯೂ ಒಂದು ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಬೇಕಲ್ಲದೆ, ಕಸ ವಿಂಗಡಿಸಿ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಯಣ್ಣ ಮಾತನಾಡಿ, ನಾವು ನೀಡುವ ಸಲಹೆ, ಸೂಚನೆಗಳು ಜಾರಿಗೆ ಬರುವುದಿಲ್ಲ. ಪಾಲಿಕೆ ವತಿಯಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಅನೇಕ ಅವಕಾಶಗಳಿವೆ. ಪಿ.ಬಿ ರಸ್ತೆಯೊಂದರಲ್ಲೇ ಟ್ರೇಡ್‌ ಲೈಸೆನ್ಸ್‌ ವಿಷಯವಾಗಿ ಲಕ್ಷಾಂತರ ರೂ. ಸಂಗ್ರಹಿಸಬಹುದು. ಟ್ರೇಡ್‌ ಲೈಸೆನ್ಸ್‌ ವಿಚಾರವಾಗಿ ವಾಣಿಜ್ಯ ಮಳಿಗೆಗಳಿಂದ ಕೋಟ್ಯಾಂತರ ರೂ.ಆದಾಯ ಬರಲಿದೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳ ನಿರ್ವಹಣೆ
ಸಮರ್ಪಕವಾಗಿ ಆಗುತ್ತಿಲ್ಲ. ಮಂಡಿಪೇಟೆ, ಹಳೇಪೇಟೆಯಲ್ಲಿ 2 ವರ್ಷಗಳಾದರೂ ಕಾಮಗಾರಿ ವಿಳಂಬದಿಂದ ವ್ಯವಹಾರ ಬಿದ್ದು ಹೋಗಿವೆ. ನಗರದ ಮಧ್ಯ ಭಾಗದಲ್ಲಿ ವಲಯ ಕಚೇರಿ ಆಗುವುದರ ಜೊತೆಗೆ ಬ್ಯಾಂಕ್‌ ಕೌಂಟರ್‌ ಹೆಚ್ಚಿಸಬೇಕೆಂದರು.

ಹಿರಿಯ ಪತ್ರಕರ್ತ ವೀರಣ್ಣ ಭಾವಿ ಮಾತನಾಡಿ, ದೇವರಾಜ ಅರಸು
ಬಡಾವಣೆಯಲ್ಲಿ ಪಾಲಿಕೆಯ ಮುಚ್ಚಿರುವ ಈಜುಕೊಳ ಪುನರ್‌ ಆರಂಭಿಸಬೇಕು. ಶಿಥಿಲಗೊಂಡಿರುವ ಮಳಿಗೆ ತೆರವುಗೊಳಿಸಿ, ಹೊಸದಾಗಿ ಕಟ್ಟಲು ಕ್ರಮ ವಹಿಸಬೇಕೆಂದರು.

ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ ಮಾತನಾಡಿ, ವಾಣಿಜ್ಯ ಮಳಿಗೆಗಳ ನಿರ್ಮಾಣ, ಪಾರ್ಕಿಂಗ್‌ ವ್ಯವಸ್ಥೆ , ತೆರಿಗೆ ಸಂಗ್ರಹ ಸೇರಿದಂತೆ ಆದಾಯ ಕ್ರೋಢೀಕರಣ ಕುರಿತು ನೀಡಿರುವ ಉಪಯುಕ್ತ ಸಲಹೆಗಳನ್ನು 2020-21ನೇ ಸಾಲಿನ ಬಜೆಟ್‌ ಸಿದ್ದಪಡಿಸುವಾಗ ಪರಿಗಣಿಸಲಾಗುವುದು ಎಂದರು ತಿಳಿಸಿದರು.

ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾ ಧಿಕಾರಿ ಪ್ರಶಾಂತ ನಾಯಕ, ಆಡಳಿತ ಉಪ ಆಯುಕ್ತ ಗದಿಗೇಶ್‌ ಕೆ., ಕಂದಾಯ ವಿಭಾಗದ ಉಪ ಆಯುಕ್ತ ನಾಗರಾಜ್‌ ಕೆ, ಕಾರ್ಯಪಾಲಕ ಅಭಿಯಂತರ ಮಂಜುನಾಥ ಕುಪ್ಪಾಳಿ, ಲೆಕ್ಕ ಅಧೀಕ್ಷಕ ನಾಮದೇವ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next