Advertisement

ಬಜೆಟ್ ತಡೆ: ತ್ಯಾಜ್ಯ ಸಮಸ್ಯೆ ಉಲ್ಬಣಕ್ಕೆ ನಾಂದಿ

10:38 AM Aug 06, 2019 | Team Udayavani |

ಬೆಂಗಳೂರು: ಬಿಬಿಎಂಪಿಯ ಬಜೆಟ್ ಹಾಗೂ ನವ ಬೆಂಗಳೂರು ಯೋಜನೆಯನ್ನು ಸರ್ಕಾರ ತಡೆ ಹಿಡಿದಿರುವುದರಿಂದ ನಗರದಲ್ಲಿ ತ್ಯಾಜ್ಯ ಸಮಸ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.

Advertisement

ಕಳೆದ ಒಂದು ತಿಂಗಳಿನಿಂದ ಹಲವೆಡೆ ತ್ಯಾಜ್ಯ ವಿಲೇವಾರಿ ಸರ್ಮಪಕವಾಗಿ ನಡೆಯುತ್ತಿಲ್ಲ. ಈಗಾಗಲೇ ಬೆಳ್ಳಳ್ಳಿ ಕ್ವಾರಿ ತುಂಬಿದ್ದು, ಮಿಟಗಾನಹಳ್ಳಿಯಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಕರೆಯುವುದಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಿಕೊಂಡಿತ್ತು. ಈಗ ಏಕಾಎಕಿ ಬಜೆಟ್‌ಗೆ ತಡೆ ನೀಡಲಾಗಿದೆ ಮತ್ತು ಯಾವುದೇ ಟೆಂಡರ್‌ ಕರೆಯದಂತೆ ಹಾಗೂ ಜಾಬ್‌ಕೋಡ್‌ ನೀಡದಂತೆಯೂ ಸೂಚಿಸಲಾಗಿದೆ. ಇದರಿಂದ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆಗೂ ತೊಡಕುಂಟಾಗಲಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಕಂಡುಬರುತ್ತಿವೆ.

ನವ ಬೆಂಗಳೂರು ಯೋಜನೆಯಲ್ಲೇನಿತ್ತು?: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ‘ನವ ಬೆಂಗಳೂರು ನಿರ್ಮಾಣ’ಕ್ರಿಯಾ ಯೋಜನೆಯಲ್ಲಿ ವೈಟ್ ಟಾಪಿಂಗ್‌ ರಸ್ತೆ, ಕೆರೆಗಳ ಅಭಿವೃದ್ಧಿ, ಗ್ರೇಡ್‌ ಸಪರೇಟರ್‌ಗಳ ನಿರ್ಮಾಣ, ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಅಭಿವೃದ್ಧಿ ಸೇರಿ ವಿವಿಧ 12ಯೋಜನೆಗಳನ್ನು ರೂಪಿಸಲಾಗಿತ್ತು.

ಪ್ರಮುಖ ಯೋಜನೆಗಳು: ಎಲಿವೇಟೆಡ್‌ ಕಾರಿಡಾರಿಗೆ ಮತ್ತು ಪೆರಿಫೆರಲ್ ವರ್ತುಲ ರಸ್ತೆಗೆ ಒಂದು ಸಾವಿರ ಕೋಟಿ ರೂ. , ನಡಿಗೆ ಪಥ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 50 ಕೋಟಿ.ರೂ ಅನುದಾನ, ಕಮರ್ಷಿಯಲ್ ಸ್ಟ್ರೀಟ್ , ಬ್ರಿಗೇಡ್‌ ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸುವುದು, ಮಳೆನೀರು ಕಾಲುವೆ ದುರಸ್ತಿ ಯೋಜನೆಗಳು ನವ ಬೆಂಗಳೂರು ಯೋಜನೆಯಡಿ ಸೇರಿದ್ದವು. ಈ ಪೈಕಿ ಬಹುತೇಕ ಯೋಜನೆಗಳನ್ನು ಬಿಜೆಪಿ ವಿರೋಧಿಸಿತ್ತು.

ಬಜೆಟ್ ಅನುಮೋದಿಸಲು ಸಿಎಂಗೆ ಮೇಯರ್‌ ಮನವಿ:

Advertisement

ಬಿಬಿಎಂಪಿಯ 2019-20ನೇ ಸಾಲಿನ ಬಜೆಟ್‌ಗೆ ಅನುಮೋದನೆ ನೀಡುವಂತೆ ಮೇಯರ್‌ ಗಂಗಾಂಬಿಕೆ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಡಾಲರ್ ಕಾಲೋನಿ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಮನವಿ ಮಾಡಿದರು.

‘ಬಿಬಿಎಂಪಿಯ 2019-20ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿರುವ ಹಲವು ಕಾಮಗಾರಿಗಳು ಈಗಾಗಲೇ ಜಾರಿಯಲ್ಲಿದ್ದು, ಈಗ ಬಜೆಟ್ ತಡೆಹಿಡಿದರೆ ಸಮಸ್ಯೆಯಾಗುತ್ತದೆ ಮತ್ತು ಬಿಎಂಪಿಯ ನಿರ್ವಹಣೆ ಸಹ ಕಷ್ಟವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, ‘ ಬಿಬಿಎಂಪಿಯ 2019-20ನೇ ಸಾಲಿನ ಬಜೆಟ್ ತಡೆಹಿಡಿದಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತರಲಾಗಿದೆ’ ಎಂದರು.

‘ಬಜೆಟ್ ತಡೆಹಿಡಿದಿರುವುದ ರಿಂದ ನಗರದ ನಿರ್ವಹಣೆ ಹೇಗೆ ನಡೆಸಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಲಾಗಿದ್ದು, ಪಾಲಿಕೆಯ ಯಾವುದೇ ತುರ್ತು ಕೆಲಸಗಳಿಗೆ ಸಮಸ್ಯೆಯಾಗುವುದಿಲ್ಲ, ಅದನ್ನು ಮುಂದುವರಿಸುವಂತೆ ಮತ್ತು ಇನ್ನೂ ಮೂರು ದಿನಗಳಲ್ಲಿ ಬಜೆಟ್‌ಗೆ ಅನುಮೋದನೆ ನೀಡು ವುದಾಗಿ ಭರವಸೆ ನೀಡಿದ್ದಾರೆ’ಎಂದು ಹೇಳಿದರು.

‘ಬಿಬಿಎಂಪಿಯ ಬಜೆಟ್‌ಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಬೇಕಾ ಗಿತ್ತು. ಅನುಮೋದನೆ ಪಡೆದುಕೊಳ್ಳುವುದರ ಒಳಗಾಗಿ, ಸರ್ಕಾರ ಬದಲಾಗಿರುವುದರಿಂದ ಸಮಸ್ಯೆ ಎದುರಾಗಿದೆ. ತುರ್ತು ಕೆಲಸಗಳಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದರು.

ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮುಖ್ಯಮಂತ್ರಿಗಳ ಆರೋಪದ ಬಗ್ಗೆ ಉತ್ತರಿಸಲು ನಿರಾಕರಿಸಿದ ಮೇಯರ್‌, ಈ ಬಗ್ಗೆ ಸಿಎಂ ಅವರನ್ನೇ ಕೇಳಿ ಎಂದಷ್ಟೇ ಹೇಳಿದರು.

2019-20ನೇ ಸಾಲಿನಲ್ಲಿ ಮಂಡಿಸಲಾಗಿರುವ ಬಜೆಟ್:

ಬಿಬಿಎಂಪಿಯು 2019-20ನೇ ಸಾಲಿನಲ್ಲಿ 12,958 ಕೋಟಿ ರೂ. ಮೊತ್ತದ ಬೃಹತ್‌ ಬಜೆಟ್ ಮಂಡಿಸಿತ್ತು. ಮೈತ್ರಿ ಸರ್ಕಾರ 11,648.90 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಿತ್ತು . ಜತೆಗೆ 1,308.89 ಕೋಟಿ ರೂ.ಗೆ ಪೂರಕ ಅಂದಾಜು ಸಿದ್ಧಪಡಿಸುವಂತೆಯೂ ಸೂಚಿಸಲಾಗಿತ್ತು. 2019-20ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ’ಯಲ್ಲಿ ಬಿಬಿಎಂಪಿಗೆ 8 ಸಾವಿರ ಕೋಟಿ ರೂ.ಅನುದಾನ ಘೋಷಿಸಿತ್ತು. ಈಗ ಈ ಯೋಜನೆಗಳಿಗೂ ತಡೆ ನೀಡಲಾಗಿದೆ. ಸೆ.28ಕ್ಕೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರ ಅಧಿಕಾರ ಅವಧಿ ಮುಗಿಯಲಿದೆ. ಮುಂದೆ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ನಡೆದಿದೆ. ಹೀಗಾಗಿ, ಈ ಅವಧಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಆಡಳಿತ ಮಂಡಿಸಿರುವ ಬಜೆಟ್ ಅನುಷ್ಠಾನಗೊಳ್ಳುತ್ತಾ ಇಲ್ಲವಾ ಎಂಬುದು ಕಾದು ನೋಡಬೇಕಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next