Advertisement

Budget: ಹಿರಿ ಜೀವಗಳ ಮನೆ ಬಾಗಿಲಿಗೆ “ಅನ್ನ ಸುವಿಧಾ”

11:32 PM Feb 16, 2024 | Team Udayavani |

ಬೆಂಗಳೂರು: “ಹಸಿವು ಮುಕ್ತ ಕರ್ನಾಟಕ ನಿರ್ಮಾಣ’ದ ಕನಸಿನೊಂದಿಗೆ ಹಿಂದಿನ ತಮ್ಮ ಆಡಳಿತ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಬಜೆಟ್‌ನಲ್ಲಿ 80 ವರ್ಷ ದಾಟಿದ ವೃದ್ಧರಿಗಾಗಿ “ಅನ್ನ  ಸುವಿಧಾ’ ಎಂಬ ಹೊಸ ಯೋಜನೆ ರೂಪಿಸಿದ್ದಾರೆ. ಈ ಯೋಜನೆಯ ಮೂಲಕ ವೃದ್ಧರ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವುದಾಗಿ ಬಜೆಟ್‌ನಲ್ಲಿ ಸಿದ್ದು ಘೋಷಿಸಿದ್ದಾರೆ.

Advertisement

“ಅನ್ನ ಸುವಿಧಾ’ ಎಂಬ ಹೊಸ ಯೋಜನೆಯಡಿ ಯಲ್ಲಿ ಹೋಮ್‌ ಡೆಲಿವರಿ ಆ್ಯಪ್‌ ಮೂಲಕ 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಹಸಿವು ಮುಕ್ತ ಕರ್ನಾಟಕ ನಮ್ಮ ಆಶಯ. ಸಾಮಾಜಿಕ ಬದ್ಧತೆಯ ಕಳಕಳಿಯೊಂದಿಗೆ ಅನ್ನ ಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈಗಾಗಲೇ 5,000ಕ್ಕೂ ಹೆಚ್ಚು ವೃದ್ಧರು ಈ ಯೋಜನೆಗಾಗಿ ನೋಂದಾಯಿಸಿಕೊಂಡಿದ್ದು, ಏಕಾಂಗಿಯಾಗಿ ವಾಸಿಸುತ್ತಿರುವವರೇ ಇದರಲ್ಲಿ ಹೆಚ್ಚಿದ್ದಾರೆ. ಮನೆಮಂದಿಯಿಂದ
ದೂರವಿದ್ದು, ಅಂಗಡಿ ಅಥವಾ ನ್ಯಾಯಬೆಲೆ ಅಂಗಡಿಗೆ ತೆರಳಿ ಆಹಾರ ಧಾನ್ಯ ತರಲು ಸಾಧ್ಯವಾಗದ ಹಿರಿಯ ಜೀವಗಳಿಗೆ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಸರಕಾರ ಹೇಳಿದೆ.
“ಅನ್ನ ಸುವಿಧಾ’ ಎಂಬ ಹೊಸ ಯೋಜನೆ ಯಡಿಯಲ್ಲಿ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವುದಾಗಿ ಈ ಹಿಂದೆಯೇ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದ್ದರು. ಆದರೆ ಬಜೆಟ್‌ ಮೂಲಕ ಯೋಜನೆ ಈಗ ಕಾರ್ಯರೂಪಕ್ಕೆ ಬರುವುದರಲ್ಲಿದೆ.

ಆಹಾರ ಭದ್ರತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು 2013 ರಲ್ಲಿ ಜಾರಿಗೆ ತರಲಾಯಿತು. ಪಡಿತರ ಹಾಗೂ ಆಹಾರ-ಧಾನ್ಯ ವಿತರಣಾ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಇದರಿಂದ ಆಹಾರ ಭದ್ರತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಹಸಿವು ಮುಕ್ತ ಕರ್ನಾಟಕದ ಆಶಯ ಈಡೇರಿಸಲು ನೆರವಾಗಲಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಅಕ್ಕಿ ನೀಡಲು ಕೇಂದ್ರದ ಅಸಹಕಾರ: ಬಜೆಟ್‌ ವೇಳೆ ಸಿದ್ದು ಆರೋಪ
ನೀಡಿದ್ದ ಭರವಸೆಯಂತೆ ಕಾಂಗ್ರೆಸ್‌ ಸರಕಾರ ಪ್ರತಿ ಫ‌ಲಾನುಭವಿಗೆ ಐದು ಕೆ.ಜಿ. ಹೆಚ್ಚುವರಿ ಆಹಾರ ಧಾನ್ಯ ನೀಡಲು ತೀರ್ಮಾನಿಸಿತ್ತು. ಆದರೆ ಕೇಂದ್ರದ ಅಸಹಕಾರದಿಂದಾಗಿ ಪ್ರತಿ ಫ‌ಲಾನುಭವಿಗೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಪ್ರತಿ ತಿಂಗಳಿಗೆ 170 ರೂ.ನಂತೆ ನೇರ ನಗದು ವರ್ಗಾವಣೆ ಮಾಡಲಾಗಿದೆ. 2024ರ ಜನವರಿ ಅಂತ್ಯದವರೆಗೆ 4.02 ಕೋಟಿ ಫ‌ಲಾನುಭವಿಗಳಿಗೆ ಒಟ್ಟು 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಬಜೆಟ್‌ ವೇಳೆ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next