ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ 500ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್ ಶಿಪ್ (Internship)ಗೆ ಅವಕಾಶ ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ 23) ಲೋಕಸಭೆಯಲ್ಲಿ ಮಂಡಿಸಿದ್ದ ಬಜೆಟ್ ನಲ್ಲಿ ಘೋಷಿಸಿದ್ದಾರೆ.
2024-2025ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ನೂತನ ಯೋಜನೆಯಡಿ Internship ಭತ್ಯೆಯಾಗಿ ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಹಾಗೂ One time ಅಸಿಸ್ಟೆನ್ಸ್ ರೂಪದಲ್ಲಿ 6 ಸಾವಿರ ರೂಪಾಯಿ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳು ಕಡಿಮೆ ಖರ್ಚಿನಲ್ಲಿ ಇಂಟರ್ನ್ ಶಿಪ್ ನೀಡಲಿದ್ದು, ಇದಕ್ಕಾಗಿ ಕಂಪನಿಗಳು ತಮ್ಮ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ಫಂಡ್ಸ್ ಗಳನ್ನು ಬಳಸಿಕೊಳ್ಳಲಿವೆ. ಇಂಟರ್ನಿಗಳು ನಿಜ ಜೀವನದ ಕಲಿಕೆಯ ವಾತಾವರಣ ಪಡೆಯಲು ಸಾಧ್ಯವಾಗಲಿದ್ದು, ಪ್ರತಿ ತಿಂಗಳು ಭತ್ಯೆಯೂ ದೊರಕಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
2024-2025ನೇ ಸಾಲಿನ ಬಜೆಟ್ ನಲ್ಲಿ ಉದ್ಯೋಗಾವಕಾಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬಜೆಟ್ ನಲ್ಲಿ ಉತ್ಪಾದನೆ, ಉದ್ಯೋಗ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ಆವಿಷ್ಕಾರ ಮತ್ತು ಪುನರ್ ಸ್ಥಾಪನೆ ಸೇರಿದಂತೆ 9 ವಲಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಬಜೆಟ್ ನಲ್ಲಿ ತಿಳಿಸಿದೆ.