Advertisement

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

04:03 PM Mar 11, 2024 | Team Udayavani |

ಬೆಂಗಳೂರು: ವ್ಯಾಪಕ ಟೀಕೆ-ಪ್ರಶಂಸೆಗಳ ನಡುವೆಯೂ, 5 ಗ್ಯಾರಂಟಿ ಯೋಜನೆಗಳ ಮುಂದುವರಿಕೆ ಜತೆಗೆ ಅಭಿವೃದ್ಧಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತು ಕೊಟ್ಟಿದ್ದಾರೆ. ಕಲ್ಯಾಣ ಕಾರ್ಯಕ್ರಮಗಳಿಗೆ ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡುವ ಘೋಷಣೆ ಮೂಲಕ, 2024-25ನೇ ಸಾಲಿನ ಬಜೆಟ್‌ನಲ್ಲೂ ಜನಪ್ರಿಯತೆಗೆ ಒತ್ತು ಕೊಟ್ಟಿದ್ದಾರೆ.

Advertisement

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಹೊಸ ಘೋಷಣೆಗಳನ್ನು ಮಾಡಬಹುದೆಂಬ ನಿರೀಕ್ಷೆ ಇದ್ದರೂ, ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲಿಡುವ ಮೂಲಕ ಈ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿಸಿದ ಸಿಎಂ, ಭಾಷಣದುದ್ದಕ್ಕೂ ಕೇಂದ್ರ ಸರಕಾರದ ತೆರಿಗೆ ಹಂಚಿಕೆಯನ್ನು ಟೀಕಿಸಿದರು. ಅವರ ಮುಂದೆ ಹಲಬಗೆಯ ಆರ್ಥಿಕ ಸವಾಲು ಇರುವುದರಿಂದ ಸೂಕ್ಷ್ಮ ಹೆಜ್ಜೆಗಳನ್ನಿ­ಟ್ಟಿದ್ದಾರೆ. ಲಕ್ಷ ಕೋಟಿರೂ.ಗಳ ಸಾಲ ಮತ್ತು ಕೆಲ ತೆರಿಗೆ ಪರಿಷ್ಕರಣೆಯ ಪ್ರಸ್ತಾವವನ್ನೂ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2024-25ನೇ ಸಾಲಿಗೆ ಅಂದಾಜು 3,71,383 ಕೋಟಿ ರೂ.ಗಳ ಮುಂಗಡ ಪತ್ರ ಮಂಡಿಸಿರುವ ಅವರು, 2025ರ ಮಾರ್ಚ್‌ 31ರವರೆಗೆ ಖರ್ಚು ಮಾಡಲು ಪೂರ್ಣ ಬಜೆಟ್‌ ಅಂಗೀಕಾರಕ್ಕೆ ಅನುಮತಿ ಕೋರಿ­ದ್ದಾರೆ.

ಅಭಿವೃದ್ಧಿ ಪಥದ ಯಥಾಸ್ಥಿತಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈಹಿಡಿದ ಮತದಾರರನ್ನೇ ಕೇಂದ್ರೀಕರಿಸಿಕೊಂಡು ಜಾರಿಗೊಳಿಸಿರುವ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳಿಗೆ ಮತ್ತೆ ಮುದ್ರೆ ಒತ್ತಲಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ತೊಡಕಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸುವ ಸಲುವಾಗಿಯೇ, ಹಾಲಿ ಯೋಜನೆ/ಕಾರ್ಯಕ್ರಮಗಳನ್ನು ಪೂರ್ಣ ಗೊಳಿಸಲು ಆದ್ಯತೆ ನೀಡಿದ್ದಾರೆ. ಜತೆಗೆ 9 ತಿಂಗಳ ಅವಧಿಯಲ್ಲಿ 21,168 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಈಗಲೂ ಬಂಡವಾಳ ವೆಚ್ಚವಾಗಿ 55 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟು, ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ ಇಲಾಖೆಗಳಿಗೆ ಒತ್ತು ಕೊಟ್ಟಿದ್ದಾರೆ. ಅಭಿವೃದ್ಧಿಪಥ ಯಥಾಸ್ಥಿತಿ ಮುಂದುವರಿಯುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದಂತಿದೆ.
ಮತ ಬ್ಯಾಂಕ್‌ ಕಾಯ್ದುಕೊಳ್ಳುವ ತಂತ್ರಗಾರಿಕೆ: ಕಲ್ಯಾಣ ಕಾರ್ಯ ಕ್ರಮಗಳಿಗೆ 1,20,373 ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಹೇಳುವ ಮೂಲಕ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು, ಮಹಿಳೆಯರ ಕ್ಷೇಮಾಭಿವೃದ್ಧಿಗೆ ಒತ್ತು ಕೊಟ್ಟಿದ್ದು, ತನ್ನ ಮತಬ್ಯಾಂಕ್‌ ಕಾಯ್ದುಕೊಳ್ಳುವ ತಂತ್ರಗಾರಿಕೆ ಅನುಸರಿಸಿದಂತೆ ಕಾಣುತ್ತಿದೆ. ಜತೆಗೆ ಅನುದಾನ ಹಂಚಿಕೆಯಲ್ಲೂ ಉದಾರತೆ ತೋರಿದ್ದಾರೆ. ಕೃಷಿ ಇಲಾಖೆಯಲ್ಲಿ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರೂ; ಅದಕ್ಕೆ ಯಾವುದೇ ಹಣ ಮೀಸಲಿಟ್ಟಿಲ್ಲ. ಈ ರೀತಿ ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳಲ್ಲಿ ಘೋಷಿಸಿರುವ ಕಾರ್ಯಕ್ರಮಗಳಿಗೆ ನಿರ್ದಿಷ್ಟವಾಗಿ ಅನುದಾನ ನಿಗದಿಪಡಿಸಿಲ್ಲ. ಬಹುತೇಕ ಎಲ್ಲಾ ಇಲಾಖೆಗಳಲ್ಲೂ ವಿವಿಧ ಯೋಜನೆ/ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆಯಾಗಿದ್ದರೂ, “ಇದು ಸಿದ್ದರಾಮಯ್ಯ ಸರ್ಕಾರದ ಯೋಜನೆ- ಕಾರ್ಯಕ್ರಮ’ ಎಂಬುದು ಎಲ್ಲಿಯೂ ಎದ್ದು ಕಾಣುತ್ತಿಲ್ಲ. ಮೇಲ್ನೋಟಕ್ಕೆ ಸರ್ವಸ್ಪರ್ಶಿ ಬಜೆಟ್‌ನಂತೆ ಬಿಂಬಿತವಾಗಿದೆ.

ಬ್ರ್ಯಾಂಡ್‌ ಬೆಂಗಳೂರಿಗೆ ಬಂಪರ್‌ ಘೋಷಣೆ
ಬೆಂಗಳೂರನ್ನು ವಿಶ್ವದರ್ಜೆಗೇರಿಸಲು ಬ್ರ್ಯಾಂಡ್‌ ಬೆಂಗಳೂರು ಕಲ್ಪನೆ. ಮೆಟ್ರೋ ಜಾಲಕ್ಕೆ 2025ರೊಳಗಾಗಿ ಹೆಚ್ಚುವರಿ 40 ಕಿ.ಮೀ. ಮಾರ್ಗ ಸೇರ್ಪಡೆ. 2ನೇ ಹಂತ ಯೋಜನೆಯಡಿ, 2026 ಜೂನ್‌ನೊಳಗೆ ವಿಮಾನನಿಲ್ದಾಣ ಮಾರ್ಗ ಪೂರ್ಣ. ಬಿಐಇಸಿಯಿಂದ ತುಮಕೂರು, ಕೆಐಎಎಲ್‌ನಿಂದ ದೇವನಹಳ್ಳಿಗೂ ಮೆಟ್ರೋ ವಿಸ್ತರಣೆ. ಬಿಎಂಟಿಸಿಗೆ 1,334 ಹೊಸ ಎಲೆಕ್ಟ್ರಿಕ್‌ ಬಸ್‌ಗಳು, 820 ಬಿಎಸ್‌-6 ಡೀಸೆಲ್‌ ಬಸ್‌ಗಳ ಸೇರ್ಪಡೆ. ಪೆರಿಫೆರಲ್‌ ರಿಂಗ್‌ ರಸ್ತೆಗೆ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ಎಂಬ ಹೊಸ ಕಲ್ಪನೆ. ಬೆಂಗಳೂರು ಸನಿಹ 2,000 ಎಕರೆಯಲ್ಲಿ ನಾಲೆಜ್‌ ಹೆಲ್ತ್‌ ಕೇರ್‌, ಇನ್ನೋವೇಶನ್‌ ಆ್ಯಂಡ್‌ ರೀಸರ್ಚ್‌ ಸಿಟಿ (ಕೆಎಚ್‌ಐಆರ್‌) ನಿರ್ಮಾಣ. 40,000 ಕೋ.ರೂ. ಹೂಡಿಕೆ.

Advertisement

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌: ಗ್ರಾಮೀಣ ಪತ್ರಕರ್ತರಿಗೆ ವೃತ್ತಿಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಉಚಿತ ಬಸ್‌ಪಾಸ್‌ ಸೌಲಭ್ಯದ ಕೊಡುಗೆ ಪ್ರಕಟಿಸಲಾಗಿದ್ದು, ಗ್ರಾಮೀಣ ಭಾಗದ ಪತ್ರಕರ್ತರ ಬೇಡಿಕೆಗೆ ಸರಕಾರ ಸ್ಪಂದಿಸಿದೆ.

ರಾಜ್ಯಕ್ಕಾಗಿರುವ ಅನ್ಯಾಯ ಹೇಳುವುದು ನನ್ನ ಕರ್ತವ್ಯ
ಬಜೆಟ್‌ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದೆ. ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದ ಆಧಾರವಾಗಿದೆ. ಬಡವರು ಹಾಗೂ ಮಹಿಳೆ­ ಯರು, ಯುವಕರು, ಪರಿಶಿಷ್ಟ ಜಾತಿ, ವರ್ಗದವರು, ಅಲ್ಪಸಂಖ್ಯಾಕರಿಗೆ ಕೊಂಡು ಕೊಳ್ಳುವ ಶಕ್ತಿ ತುಂಬ ಪ್ರಯತ್ನ ಮಾಡಿದ್ದೇನೆ. ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಆಗಿರುವ ಅನ್ಯಾಯವನ್ನು ಹೇಳುವುದು ನನ್ನ ಕರ್ತವ್ಯ. ನಾಡಿನ 7ಕೋಟಿ ಕನ್ನಡಿಗರ ಪರ ಆ ಕೆಲಸ ನಾನು ಮಾಡಿದ್ದೇನೆ. ಸತ್ಯ ಹೇಳಿದರೆ, ಬಿಜೆಪಿಯವರಿಗೆ ಸಹಿಸಿ­ ಕೊಳ್ಳಲು ಆಗುತ್ತಿಲ್ಲ. ಬಿಜೆಪಿಯವರು ಬಡವರು ಮತ್ತು ಕನ್ನಡ ವಿರೋಧಿಗಳು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

-ಎಂ. ಎನ್‌. ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next