ಬೆಂಗಳೂರು: ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ಸಾವಿರ ರೂಪಾಯಿ ನೀಡುವ ಕಾಂಗ್ರೆಸ್ ಪಕ್ಷದ ಗೃಹಲಕ್ಷ್ಮೀ ಯೋಜನೆ ಘೋಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ(ಫೆ.17) ಮಂಡಿಸಿದ್ದ 2023ನೇ ಸಾಲಿನ ಬಜೆಟ್ ನಲ್ಲಿ ಗೃಹಿಣಿ ಶಕ್ತಿ ಎಂಬ ಯೋಜನೆಯನ್ನು ಘೋಷಿಸುವ ಮೂಲಕ ಎದುರೇಟು ನೀಡಿದ್ದಾರೆ.
ಇದನ್ನೂ ಓದಿ:ಕುಟುಕು ಕಾರ್ಯಾಚರಣೆ ಪ್ರಭಾವ: ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ
ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಈ ಹಿಂದಿನ ವರ್ಷದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೊಳಿಸಲಾಗಿತ್ತು. ಸಹಕಾರ ವಲಯದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲು ಅವಕಾಶ ನೀಡಲಾಗಿದೆ. ಈ ಧ್ಯೇಯೋದ್ದೇಶವನ್ನು ಮುಂದುವರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ “ಗೃಹಿಣಿ ಶಕ್ತಿ” ಯೋಜನೆ ಜಾರಿಗೊಳಿಸಲು ನಿರ್ಧರಿಸಿರುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ.
ಈ ಯೋಜನೆಯಡಿ ಕುಟುಂಬ ನಿರ್ವಹಣೆಯೊಂದಿಗೆ ಮನೆಯ ಆರ್ಥಿಕ ಸುಧಾರಣೆಗಾಗಿ ಶ್ರಮಿಸುವ ಮಹಿಳಾ ಕೃಷಿ ಕಾರ್ಮಿಕರ ಕುರಿತು ರಾಜ್ಯ ಸರ್ಕಾರ ಹೊಂದಿರುವ ಕಾಳಜಿಯ ಪ್ರತೀಕವಾಗಿ, ಶ್ರಮ ಶಕ್ತಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯಡಿ ರಾಜ್ಯ ಸರ್ಕಾರವು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ.ಗಳ ಸಹಾಯ ಧನವನ್ನು ಡಿಬಿಟಿ ಮೂಲಕ ನೀಡಲಿದೆ.
ಗೃಹಿಣಿಯರಿಗೆ ಮನೆಯಲ್ಲಿಯೇ ಲಾಭದಾಯಕ ಉದ್ಯಮ ಪ್ರಾರಂಭಿಸಲು ಪ್ರಸಕ್ತ ವರ್ಷದಲ್ಲಿ ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.
ಬಾಲಕಿಯರು ಮತ್ತು ಮಹಿಳೆಯರ ಸಬಲೀಕರಣ ಕುರಿತು Life cycle approach ಹೊಂದಲು ನಿರ್ಧರಿಸಲಾಗಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯಲು “ಆರೋಗ್ಯ ಪುಷ್ಟಿ” ಯೋಜನೆಯಡಿ ಮಾತೃಪೂರ್ಣ ಯೋಜನೆಯಂತೆ ಅರ್ಹ ವಿವಾಹಿತ ಮಹಿಳೆಯರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ ಮತ್ತು Prophylactic IFA ಮಾತ್ರೆಗಳನ್ನು ಜೀವಿತಾವಧಿಯಲ್ಲಿ ಒಂದು ಬಾರಿ ಗರಿಷ್ಠ 6 ತಿಂಗಳ ಅವಧಿಗೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಒದಗಿಸಲಾಗುವುದು. ಈ ಯೋಜನೆಯಡಿ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒತ್ತು ನೀಡಲಾಗುವುದು.