Advertisement

ನರೇಗಾಕ್ಕೆ ಮತ್ತಷ್ಟು ಹಣಕಾಸು ನೆರವು

10:30 AM Feb 10, 2018 | Karthik A |

ಹೊಸದಿಲ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಕೇಂದ್ರ ಸರಕಾರ 55 ಸಾವಿರ ಕೋಟಿ ರೂ. ಮೀಸಲಾಗಿರಿಸಿದೆ. ಹೀಗೆಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ. ಇದರ ಜತೆಗೆ ಆಹಾರ ಸಬ್ಸಿಡಿ ಮೊತ್ತಕ್ಕೆ 1.7 ಲಕ್ಷ ಕೋಟಿ ರೂ. ನೀಡಲಾಗುತ್ತದೆ ಎಂದಿದ್ದಾರೆ.

Advertisement

ಹೊಸತಾಗಿ ಜಾರಿ ಮಾಡಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದಾಗಿ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿದೆ. ಇದು ವಿತ್ತೀಯ ಕೊರತೆ ಮೇಲೆ ಪ್ರಭಾವ ಬೀರಿದೆ ಎಂದು ಬಜೆಟ್‌ ಮೇಲೆ ನಡೆದ ಚರ್ಚೆಗೆ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಜೇಟ್ಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತವಾಗುತ್ತಿದೆ ಎಂದು ಹೇಳಿದ ಅವರು, ಹಾಲಿ ಹಣಕಾಸು ವರ್ಷದಲ್ಲಿ ಹಣದುಬ್ಬರ ದರ ಶೇ. 3.6ರಷ್ಟು ಇದೆ  ಎಂದಿದ್ದಾರೆ.

ನೆರವಿಗೆ ಒಪ್ಪಿಗೆ: ಆಂಧ್ರಕ್ಕೆ ಬಜೆಟ್‌ನಲ್ಲಿ ನೆರವು ಘೋಷಣೆ ಮಾಡಲಾಗಿಲ್ಲ ಎಂಬ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಕ್ರೋಶ ತಣ್ಣಗಾಗಿಸಲು ಮುಂದಾಗಿರುವ ಕೇಂದ್ರ ಐದು ವರ್ಷಗಳವರೆಗೆ ನೆರವು ನೀಡುವುದಾಗಿ ವಾಗ್ಧಾನ ಮಾಡಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ಬಾಹ್ಯವಾಗಿ ನೆರವು ನೀಡುವ ಬಗ್ಗೆ ನಿರ್ಧರಿಸಲಾಗಿತ್ತು. ಈ ಬಗ್ಗೆ ಶೀಘ್ರವೇ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.

ಕುಸಿದು ಬಿದ್ದ ಸಂಸದ: ರಾಜ್ಯಸಭೆಯಲ್ಲಿ ಬಿಜೆಡಿ ಸಂಸದ ಎ.ವಿ.ಸ್ವಾಮಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಸಭಾಪತಿ ವೆಂಕಯ್ಯ ನಾಯ್ಡು ಈ ಮಾಹಿತಿ ನೀಡಿದ್ದಾರೆ.

ಅಧಿವೇಶನ ಮುಂದೂಡಿಕೆ: ಲೋಕಸಭೆಯ ಕಲಾಪವನ್ನು ಮಾ.5ರ ವರೆಗೆ ಮುಂದೂಡಲಾಗಿದೆ.

Advertisement

ಮಾನಸ ಸರೋವರ ರಸ್ತೆ ಪುನಃ ಬಳಕೆಗೆ: ಕೈಲಾಸ ಮಾನಸ ಸರೋವರ ಯಾತ್ರೆ ಸಾಗಿಹೋಗುವ ನಾಥು ಲಾ ಹಾದಿಯನ್ನು ಕಳೆದ ವರ್ಷ ಬಂದ್‌ ಮಾಡಿದ್ದ ಚೀನ ಸರಕಾರ, ಈಗ ಪುನಃ ಅದನ್ನು ಯಾತ್ರಿಕರಿಗೆ ಮುಕ್ತಗೊಳಿಸಿದೆ ಎಂದು ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಜ| ವಿ.ಕೆ. ಸಿಂಗ್‌ ಲೋಕಸಭೆಗೆ ಶುಕ್ರವಾರ ತಿಳಿಸಿದ್ದಾರೆ. ಡೋಕ್ಲಾಂ ವಿವಾದದ ಹಿನ್ನೆಲೆ ಚೀನ ಈ ದಾರಿಯನ್ನು ಮುಚ್ಚಿತ್ತು.

ನಾವು ಉತ್ತರ ಕೊಟ್ಟಿದ್ದೆವು: ರಾಹುಲ್‌ ಗಾಂಧಿ
ರಫೇಲ್‌ ಯುದ್ಧ ವಿಮಾನ ಖರೀದಿ ಕುರಿತ ಮಾಹಿತಿಯನ್ನು ಕೇಂದ್ರ ಬಹಿರಂಗ ಮಾಡುತ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಹೊಸ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಯುಪಿಎ ಅವಧಿಯಲ್ಲಿ ಕೈಗೊಳ್ಳಲಾಗಿರುವ ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ರಷ್ಯಾದಿಂದ ಖರೀದಿ ಮಾಡಲಾಗಿದ್ದ ಅಡ್ಮಿರಲ್‌ ಘೋಷೊRàìವ್‌ ಖರೀದಿಗೆ ಸಂಬಂಧಿಸಿ ನೀಡಲಾಗಿದ್ದ ಉತ್ತರದ ಪ್ರತಿಯನ್ನು ಅವರು ಟ್ವೀಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.  ಯುಪಿಎ ಅವಧಿಯಲ್ಲಿ ರಕ್ಷಣಾ ಒಪ್ಪಂದಗಳಿಗೆ ಸಂಸತ್‌ನಲ್ಲಿ ಉತ್ತರ ನೀಡಲಾಗಿಲ್ಲ ಎಂಬ ಜೇಟ್ಲಿಯವರ ಸುಳ್ಳಿಗೆ ಪ್ರತಿಯಾಗಿ ಮಾಹಿತಿ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next