ಪ್ರತಿ ವರ್ಷದಂತೆ ಈ ಬಾರಿಯೂ ರಕ್ಷಣಾ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಕ್ಷಣಾ ಬಜೆಟ್‌ನ ಮೊತ್ತವನ್ನು ಶೇ.7.81ರಷ್ಟು ಅಂದರೆ 2.95 ಲಕ್ಷ ಕೋಟಿಗೆ ಏರಿಸಲಾಗಿದೆ. ಕಳೆದ ವರ್ಷ ಈ ಮೊತ್ತ 2.74 ಲಕ್ಷ ಕೋಟಿ ಆಗಿತ್ತು. ಎರಡು ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಕಾರಿಡಾರ್ ಸ್ಥಾಪಿಸಲು ಹಾಗೂ ‘ಕೈಗಾರಿಕಾಸ್ನೇಹಿ ಸೇನಾ ಸಾಮಗ್ರಿ ಉತ್ಪಾದನೆ ನೀತಿ 2018’ ಅನ್ನು ಜಾರಿ ಮಾಡಲು ಸರಕಾರ ನಿರ್ಧರಿಸಿದೆ. ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ವಲಯ ಮತ್ತು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಮುಂದೆ ಬಂದು ದೇಶೀಯವಾಗಿಯೇ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವಂತಾಗಬೇಕು ಎಂಬುದು ಇದರ ಉದ್ದೇಶ. ಈಗಾಗಲೇ ಈ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ವಿದೇಶಿ ನೇರ ಬಂಡವಾಳವನ್ನೂ ಸರಳಗೊಳಿಸಲಾಗಿದೆ. ಪಾಕಿಸ್ಥಾನ ಮತ್ತು ಚೀನಾದ ಜತೆಗಿನ ಗಡಿಗಳಲ್ಲಿ ಪ್ರಕ್ಷುಬ್ಧ ಸ್ಥಿತಿ ಇರುವಂಥ ಈ ಸಂದರ್ಭದಲ್ಲಿ, ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಶಸ್ತ್ರ ಪಡೆಗಳಿಗೆ ನಿರೀಕ್ಷೆಗೂ ಮೀರಿ ಅನುದಾನ ನೀಡಲಾಗಿದೆ.