Advertisement
ನಭ ನಿರ್ಮಾಣ್: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದಲ್ಲಿ ಪ್ರಸ್ತುತ 124 ವಿಮಾನ ನಿಲ್ದಾಣಗಳಿದ್ದು, ಈ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಿಸಲು ಮತ್ತು ಆ ಮೂಲಕ ವಾರ್ಷಿಕ ಒಂದು ಶತಕೋಟಿ ಟ್ರಿಪ್‌ಗಳನ್ನು ನಿರ್ವಹಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಈ ಗುರಿ ಸಾಧನೆಗಾಗಿ ‘ನಭ ನಿರ್ಮಾಣ್’ ಕಾರ್ಯಕ್ರಮ ಆರಂಭಿಸುತ್ತಿರುವುದಾಗಿ ಅರುಣ್ ಜೇಟ್ಲಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಸರಕಾರ 9000 ಕಿ.ಮೀ ಉದ್ದದ ರಾ.ಹೆ. ನಿರ್ಮಾಣ ಕಾರ್ಯವನ್ನು 2018-19ನೇ ಸಾಲಿನಲ್ಲೇ ಪೂರ್ಣಗೊಳಿಸುವ ವಿಶ್ವಾಸ ಹೊಂದಿದೆ. ಇದರೊಂದಿಗೆ ಮೂಲ ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ‘ಭಾರತ್‌ಮಾಲಾ ಪರಿಯೋಜನಾ’ ಕ್ಕೆ ಅನುಮೋದನೆ ನೀಡಲಾಗಿದೆ. ದೇಶದ ಗಡಿ ಪ್ರದೇಶಗಳೂ ಈ ಯೋಜನೆ ವ್ಯಾಪ್ತಿಯಲ್ಲಿದ್ದು, ಮೊದಲ ಹಂತದಲ್ಲಿ, ಸುಮಾರು 5,35,00 ಕೋಟಿ ರೂ. ಅಂದಾಜು ವೆಚ್ಚದಲ್ಲಿ 35000 ಕಿ.ಮೀ ಉದ್ದದ ರಸ್ತೆ ಆಗಲಿದೆ. ಫಾಸ್ಟ್ ಪ್ರಯಾಣಕ್ಕೆ ಫಾಸ್ಟ್‌ಟ್ಯಾಗ್
ಹೈವೆ ಪ್ರಯಾಣ ತಡೆರಹಿತವಾಗಿಸುವ ಉದ್ದೇಶದಿಂದ 2017ರ ಡಿಸೆಂಬರ್ ನಂತರ ತಯಾರಾಗುವ ಎಲ್ಲ ಕ್ಲಾಸ್ ‘ಎಂ’ ಮತ್ತು ಕ್ಲಾಸ್ ‘ಎನ್’ ವಾಹನಗಳಿಗೆ ‘ಫಾಸ್ಟ್ ಟ್ಯಾಗ್’ ಇರಲಿದೆ. ‘ಬಳಸಿದಾಗ ಮಾತ್ರ ಪಾವತಿಸಿ’ ಆಧಾರದಲ್ಲಿ ಟೋಲ್ ವ್ಯವಸ್ಥೆ ಪರಿಚಯಿಸಲು ನಿಯಮ ಜಾರಿಗೊಳಿಸುವುದಾಗಿ ಕೇಂದ್ರ ಹೇಳಿದೆ. ಇದರೊಂದಿಗೆ ರೋಡ್ ಟೋಲ್ ಫ್ಲಾಜಾಗಳಲ್ಲಿ ಹಣ ಪಾವತಿಸುವ ಬದಲು ಫಾಸ್ಟ್ ಟ್ಯಾಗ್ ಮತ್ತಿತರ ಪೇಮೆಂಟ್ ಸೇವೆ ಬಳಕೆಯನ್ನೇ ಸಂಪೂರ್ಣವಾಗಿ ಅನುಷ್ಠಾನದ ಚಿಂತನೆಯನ್ನು ಕೇಂದ್ರ ಹೊಂದಿದೆ.
Related Articles
ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಸಂಪರ್ಕ ಸೌಲಭ್ಯಗಳನ್ನು ವೃದ್ಧಿಸುತ್ತಿರುವುದಾಗಿ ಕೇಂದ್ರ ತಿಳಿಸಿದೆ. ಲಡಾಕ್ ಪ್ರಾಂತ್ಯಕ್ಕೆ ಸರ್ವ ಋತುವಿನಲ್ಲೂ ಸಂಪರ್ಕ ಕಲ್ಪಿಸುವ ರೋಹ್ಟಾಂಗ್ ಸುರಂಗ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. 14 ಕಿ.ಮೀ ಉದ್ದದ ಝೋಜಿಲಾ ಪಾಸ್ ಸುರಂಗ ನಿರ್ಮಾಣ ಪ್ರಗತಿಯಲ್ಲಿದ್ದು, ಸೀಲ್ ಪಾಸ್ ಅಡಿಯಲ್ಲೂ ಸುರಂಗ ನಿರ್ಮಾಣ ಕಾರ್ಯವನ್ನು ಸರಕಾರ ಕೈಗೆತ್ತಿಕೊಳ್ಳಲಿದೆ ಎಂದು ಸಚಿವ ಜೇಟ್ಲಿ ತಿಳಿಸಿದ್ದಾರೆ.
Advertisement
– ವಿಮಾನ ನಿಲ್ದಾಣಗಳ ಸಾಮರ್ಥ್ಯ ವೃದ್ಧಿಗೆ ನಭ ನಿರ್ಮಾಣ್ ಯೋಜನೆ ಘೋಷಣೆ– ವೈಮಾನಿಕ ಸೇವೆ ವಂಚಿತ 56 ಏರ್‌ಪೋರ್ಟ್, 16 ಏರ್‌ಪೋರ್ಟ್‌ಗಳಿಗೆ ಸಂಪರ್ಕ
– ಮೂಲ ಸೌಲಭ್ಯ ವಲಯಕ್ಕೆ ನೀಡುವ ಅನುದಾನ 5.97 ಲಕ್ಷ ಕೋಟಿಗೆ ಹೆಚ್ಚಳ
– ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ ಅನುದಾನ ಗಿಟ್ಟಿಸಿದ ಸಾರಿಗೆ ವಲಯ
– 10 ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಒತ್ತು
– ಡಿಜಿಟಲ್ ಇಂಡಿಯಾ ಅನುದಾನ ದುಪ್ಪಟ್ಟು
– ಟೆಲಿ ಸಂವಹನ ವಲಯದ ಮೂಲ ಸೌಲಭ್ಯ ಉತ್ತಮಪಡಿಸಲು 10000 ಕೋಟಿ
– ಕಳೆದ ಮೂರು ವರ್ಷಗಳಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ವಾರ್ಷಿಕ ಶೇ.18ರಷ್ಟು ಪ್ರಗತಿ
– ಈಗಾಗಲೇ ಹೊಸದಾಗಿ 900 ವಿಮಾನಗಳ ಖರೀದಿಗೆ ಮುಂದಾಗಿರುವ ವಿಮಾನ ಯಾನ ಸಂಸ್ಥೆಗಳು
– ಹಾಲಿ ಇರುವ ಏರ್‌ಪೋರ್ಟ್‌ಗಳ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಿಸುವ ಉದ್ದೇಶ
– ವಾರ್ಷಿಕ ಒಂದು ಶತಕೋಟಿ ವೈಮಾನಿಕ ಟ್ರಿಪ್‌ಗಳನ್ನು ನಿರ್ವಹಿಸುವ ಗುರಿ