ಮುಳಗುಂದ: ಸಮೀಪದ ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀಮಠದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಭಕ್ತರ ಪೂರ್ವಭಾವಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಚೋಟೇಶ್ವರ ಶ್ರೀಗಳು, ಮಾ. 25ರಂದು ಅಂತೂರ ಬೆಂತೂರ ರಾಷ್ಟ್ರೋತ್ಥಾನ ಕಾರ್ಯಕ್ರಮ, ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರಾರಂಭೋತ್ಸವ ಜರುಗಲಿದೆ. ಪ್ರವಚನಕಾರರಾಗಿ ನರೇಗಲ್ಲನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಂಗೀತಕಾರರಾಗಿ ಮಲ್ಲಿಕಾರ್ಜುನ ಹೂಗಾರ, ತಬಲಾ ಸಾತಿಯಾಗಿ ಲಕ್ಷ್ಮಣ ಆಲೂರ ನೆರವೇರಿಸುವರು.
ಏ. 28ರಂದು ಬೂದೀಶ್ವರ ಮಠದ ರಥೋತ್ಸವ, 29ರಂದು ಸಾಮೂಹಿಕ ವಿವಾಹ, ಕಡುಬಿನ ಕಾಳಗ, 30ರಂದು ಮಕ್ಕಳ ಜಾತ್ರೋತ್ಸವ, ಮೇ 1ರಂದು ಮಹಿಳಾ ಜಾತ್ರೋತ್ಸವ, 2ರಂದು ರೈತ ಜಾತ್ರೋತ್ಸವ ಹಾಗೂ ಸಮಾರೋಪ ಕಾರ್ಯಕ್ರಮ ಜರುಗಲಿದೆ. ನಿವೃತ್ತ ಶಿಕ್ಷಕರ ಸನ್ಮಾನ, ಮಕ್ಕಳಿಗಾಗಿ ವಿಜ್ಞಾನ ರಸ ಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ವಿವಿಧ ಸ್ಪರ್ಧೆ, ರೈತರಿಗಾಗಿ ವಿಶೇಷ ಕಾರ್ಯಕ್ರಮ ಜರುಗುವವು.
ಜಾತ್ರೆಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಿಡಿಮದ್ದು ಹಾರಿಸುವಂತಿಲ್ಲ ಎಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಚೋಟೇಶ್ವರ ಶ್ರೀಗಳಿಗೆ ಅಧಿಕಾರ ಪ್ರಮಾಣ ಪತ್ರ ವಿತರಣೆ ಜರುಗಲಿದ್ದು, ಕಾರ್ಯಕ್ರಮಕ್ಕೆ ಮಠಾಧೀಶರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ನೆರೆ ಗ್ರಾಮದ ಗಣ್ಯರು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅಚ್ಚುಕಟ್ಟಾಗಿ ಜಾತ್ರಾ ಮಹೋತ್ಸವ ಹಾಗೂ ರಾಷ್ಟ್ರೋತ್ಸವ ಕಾರ್ಯಕ್ರಮವನ್ನು ರಾಚೋಟೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲು ಇಚ್ಚಿಸುವವರು ಏ. 10ರೊಳಗಾಗಿ ಮೊ: 9743235159, 9964908497 ಸಂಪರ್ಕಿಸಲು ಕೋರಲಾಗಿದೆ.