Advertisement
ಬೌದ್ಧ ಧರ್ಮದಲ್ಲಿ ಮದ್ಯಪಾನ ನಿಷಿದ್ಧ. ಅದೇ ಬಾಟಲಿಗಳನ್ನು ಬಳಸಿಕೊಂಡು ಭಿಕ್ಕುಗಳು ಬೌದ್ಧ ದೇವಾಲಯವನ್ನೇ ನಿರ್ಮಿಸಿಕೊಂಡಿದ್ದಾರೆ. ಥಾಯ್‌ಲೆಂಡಿನ ಈಶಾನ್ಯಕ್ಕೆ, ಬ್ಯಾಂಕಾಕಿನಿಂದ ಸುಮಾರು 400 ಮೈಲು ದೂರದ ಸಿಸಾಕೆಟ್ ಪ್ರಾಂತದಲ್ಲಿ ಕಾಂಬೋಡಿಯಾ ಗಡಿಯಲ್ಲಿ “ವ್ಯಾಟ್ ಪ ಮಹಾಚೇದಿ ಕೇವ್’ ಸಂಕೀರ್ಣದಲ್ಲಿ 20 ಕಟ್ಟಡಗಳಿವೆ. ಈ ಕಟ್ಟಡಗಳು ಮತ್ತು ಇದರಲ್ಲಿರುವ ಬೌದ್ಧ ದೇವಾಲಯವು ಬಹಳ ವಿಶಿಷ್ಟವಾದದ್ದು. ಇವುಗಳ ಗೋಡೆ, ಛಾವಣಿ ಎಲ್ಲದರಲ್ಲೂ ಬಾಟಲಿಗಳನ್ನೇ ಇಟ್ಟಿಗೆಯಾಗಿ ಬಳಸಿಕೊಳ್ಳಲಾಗಿದೆ. ಅಷ್ಟೇ ಯಾಕೆ? ನೆಲವನ್ನು ಬಾಟಲಿಗಳ ಮುಚ್ಚಳಗಳಿಂದ ಹಾಸಲಾಗಿದೆ. ದೇವಾಲಯದಲ್ಲಿ ಒಂದು ಪ್ರಾರ್ಥನಾ ಮಂದಿರ, ಸ್ನಾನಗೃಹ, ಶೌಚಾಲಯ, ಚಿತಾಗಾರ, ನೀರಿನ ಗೋಪುರ ಮತ್ತು ವಸತಿ ಕೊಠಡಿಗಳಿವೆ. ಶೌಚಾಲಯಕ್ಕೆ ಹಸಿರು ಮತ್ತು ಚಿತಾಗಾರಕ್ಕೆ ಕಂದುವರ್ಣದ ಬಾಟಲಿಗಳು ಬಳಕೆಯಾಗಿವೆ. ಇದರಿಂದಾಗಿ ಬೆಳಕಿನ ಪ್ರತಿಫಲನಕ್ಕೆ ಅನುಕೂಲವಾಗಿದೆ. ಸುಮಾರು ಹದಿನೈದು ಲಕ್ಷ ಮದ್ಯದ ಬಾಟಲಿಗಳನ್ನು ಬಳಸಲಾಗಿದೆಯಂತೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಾಟಲಿಗಳನ್ನು ಸಂಗ್ರಹಿಸಿದ್ದು ಬೌದ್ಧ ಸನ್ಯಾಸಿಗಳೇ. ಇದಕ್ಕಾಗಿ ತಗುಲಿದ ಸಮಯ ಸುಮಾರು ಮೂವತ್ತು ವರ್ಷಗಳು! ಬಾಟಲಿಯ ಭಿತ್ತಿಚಿತ್ರಗಳು
1984ರಲ್ಲಿ ಕೆಲಸ ಪ್ರಾರಂಭಗೊಂಡ ದೇವಾಲಯ ನಿರ್ಮಾಣ ಕೆಲಸ ಎರಡು ವರ್ಷಗಳಲ್ಲಿ ಪೂರ್ಣಗೊಂಡಿತು. ನಮ್ಮಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಥವಾ ಜೀರ್ಣೋದ್ಧಾರಕ್ಕೆ ಭಕ್ತಾದಿಗಳು ತಮ್ಮ ಕೈಲಾದಷ್ಟು ಧನವನ್ನು ನೀಡುತ್ತಾರೆ. ಈ ಬೌದ್ಧ ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಭಕ್ತರು ಬಾಟಲಿಗಳನ್ನು ದಾನವಾಗಿ ನೀಡಿರುವುದು ವಿಶೇಷ. ಲೋಕಾರ್ಪಣೆಗೊಂಡ ನಂತರ ಈ ಮಂದಿರ ಬಾಟಲಿ ಮಂದಿರ ಎಂದೇ ಪ್ರಖ್ಯಾತವಾಗಿದೆ. ಬೇರೆ ಬೇರೆ ಬಣ್ಣದ ಬಾಟಲಿಗಳನ್ನು ಜೋಡಿಸಿ ರಚಿಸಿದ ಭಿತ್ತಿಚಿತ್ರಗಳನ್ನೂ ಒಳಗೆ ನೋಡಬಹುದು.
Related Articles
Advertisement