ರಾಯಚೂರು: ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯ ಬುದ್ದಿನ್ನಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕಚೇರಿ ಎದುರು ಧರಣಿ ನಡೆಸಿದರು. ಬಳಿಕ ಜಿಲ್ಲಾಡಳಿತ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಸುತ್ತಲಿನ ಎಂಟು ಗ್ರಾಮಗಳ 120ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೌಢಶಾಲೆ ಅಗತ್ಯವಿದೆ. ಬುದ್ದಿನ್ನಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ 14 ವರ್ಷಗಳ ಹಿಂದೆಯೇ ಉನ್ನತೀಕರಿಸಿದ್ದು, ಪ್ರಸಕ್ತ ಸಾಲಿನಲ್ಲಿ 8ನೇ ತರಗತಿಗೆ 122 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 9ನೇ ತರಗತಿ ಪ್ರವೇಶಕ್ಕೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
2017-18ನೇ ಸಾಲಿನಲ್ಲಿ ಕೆಕೆಆರ್‌ಡಿಬಿಯಿಂದ 1.40 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಪ್ರೌಢಶಾಲೆ ಮಂಜೂರಾಗದ ಕಾರಣ ಆ ಶಾಲೆ ಈಗ ನಿರುಪಯುಕ್ತವಾಗಿದೆ. ಕೂಡಲೇ ಪ್ರೌಢಶಾಲೆ ಮಂಜೂರು ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಮನವಿ ಸ್ವೀಕರಿಸಿ, ಪ್ರೌಢಶಾಲೆ ಮಂಜೂರಿಗೆ ಇರುವ ತೊಡಕು ಸರಿಪಡಿಸುವ ಭರವಸೆ ನೀಡಿದರು.
ಇದನ್ನೂ ಓದಿ: ವ್ಯಾಕ್ಸಿನೇಶನ್; ಗುರಿ ತಲುಪಲು ಹರಸಾಹಸ!
ಈ ವೇಳೆ ಸಂಘಟನೆ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ್ ಕಂದಗಲ್, ಬುದ್ದಿನ್ನಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ, ಉಪಾಧ್ಯಕ್ಷ ಹನುಮಂತ ಬುದ್ದಿನ್ನಿ, ಸಂಘಟನೆ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ದೀನಸಮುದ್ರ, ಜಿಲ್ಲಾ ಸಮಿತಿ ಸದಸ್ಯರಾದ ಮೌನೇಶ ಬುಳ್ಳಾಪೂರು, ತಿಪ್ಪಣ್ಣ ನಿಲೋಗಲ್, ಎಐಕೆಎಸ್‌ನ ಚಂದ್ರಶೇಖರ ಕ್ಯಾತನಹಟ್ಟಿ, ಬಸವರಾಜ್ ಗುತ್ತೇದಾರ್, ದೇವೇಂದ್ರಪ್ಪ ಕನಸಾವಿ, ಮೌನೇಶ ದೇವರಮನಿ, ಬಾಲಪ್ಪ ಪಾಲೇದ್, ಸಂಗೀತಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.