Advertisement

ಜಗತ್ತಿನ ಉದ್ಧಾರಕ್ಕೆ ಬುದ್ಧನ ತತ್ವಗಳು ಅನಿವಾರ್ಯ

12:46 PM Apr 18, 2018 | |

ಮೈಸೂರು: ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಎಲ್ಲಾ ಕಾಲಕ್ಕೂ ಸಲ್ಲುವವರಾಗಿದ್ದು, ವಿಶ್ವಕ್ಕೆ ಇಂದಿಗೂ ಬಸವಣ್ಣ ಪ್ರಸ್ತುತವಾದರೆ, ಜಗತ್ತಿನ ಉದ್ಧಾರಕ್ಕೆ ಬುದ್ಧನ ತತ್ವಾದರ್ಶನಗಳು ಅನಿವಾರ್ಯ ಎಂದು ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಪಿ.ಮಹೇಶ್‌ ಚಂದ್ರಗುರು ಹೇಳಿದರು.

Advertisement

ಮೈಸೂರು ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಕತ್ತಲು ಹಾಗೂ ಅಜ್ಞಾನದಲ್ಲಿ ಸಿಲುಕಿದ್ದ ಭಾರತೀಯರನ್ನು ಪರಿವರ್ತನೆಯತ್ತ ಕೊಂಡೊಯ್ಯುವ ಜತೆಗೆ ಮಹಿಳೆಯರಿಗೆ ಸಮಾನತೆ ನೀಡಿದ ಕೀರ್ತಿ ಬುದ್ಧನಿಗೆ ಸಲ್ಲುತ್ತದೆ. ಹೀಗಾಗಿ ವಿಶ್ವದ ರಕ್ಷಣೆ ಬುದ್ಧನಿಂದಲೇ ಆಗಲಿದೆ ಎಂಬುದು ಅನಿವಾರ್ಯ ಎಂದು ಹೇಳಿದರು. 

ಪ್ರಜ್ಞಾವಂತರ ಕೊರತೆ: ಇಂದು ವಿಶ್ವದ ನಾಗರಿಕತೆ ಬೆಳೆದಿದ್ದರೂ, ಹೃದಯವಂತಿಕೆ ಬೆಳೆದಿಲ್ಲ. ಬುದ್ದಿವಂತರು ಸಾಕಷ್ಟು ಸಂಖ್ಯೆಯಲ್ಲಿ ಬೆಳೆದರೂ, ಪ್ರಜ್ಞಾವಂತರ ಕೊರತೆ ಇದೆ. ಅಲ್ಲದೆ ಸಮಾಜದಲ್ಲಿ ಸ್ವಾರ್ಥ ಮನೋಭಾವ ಹೆಚ್ಚಾಗಿದ್ದು, ಅನ್ಯರ ಉದ್ಧಾರಕ್ಕಾಗಿ ಶ್ರಮಿಸುವವರ ಸಂಖ್ಯೆ ಕಡಿಮೆ ಆಗಿದೆ.

ಈ ಎಲ್ಲದರ ಪರಿಣಾಮ ಆಧುನಿಕತೆ ಎಂಬುದು ಪಾಶ್ಚಾತ್ಯವಾಗಿದ್ದು, ಪಾಶ್ಚಿಮಾತ್ಯ ಎಂಬುದೇ ಆಧುನಿಕತೆಯಾಗಿದೆ. ಇಂತಹ ಕವಲುದಾರಿಯ ಸಂದರ್ಭದಲ್ಲಿ ಜಗತ್ತಿನ ಉದ್ಧಾರಕ್ಕೆ ಬುದ್ಧನ ಸಂದೇಶಗಳು ಅನಿವಾರ್ಯವಾಗಿದೆ ಎಂದರು. ಇಂದು ಸಮಾಜದ ಬುದ್ಧನ ಯೋಗ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯರ ಭೋಗ ಸಂಸ್ಕೃತಿಯತ್ತ ಸಾಗುತ್ತಿರುವುದು ಮಾರಕ ಬೆಳವಣಿಗೆ.

ಸಮಾಜದಲ್ಲಿಂದು ಬುದ್ಧ, ಬಸವ ಹಾಗೂ ಅಂಬೇಡ್ಕರ್‌ರಂತಹ ಮಹನೀಯರನ್ನು ಕಡೆಗಣಿಸಲಾಗುತ್ತಿದೆ. ಇಂದಿನ ಯುವಜನತೆ ಹಾಗೂ ಜಗತ್ತಿಗೆ ಬುದ್ಧನ ಸಂದೇಶದ ಅಗತ್ಯವಿದೆ. ಜಗತ್ತಿನಲ್ಲಿ ಜಾತಿ ರಾಜಕೀಯ ಮಾಡಿದವರ್ಯಾರು ಉದ್ಧಾರವಾಗಿಲ್ಲ. ಸಮಾಜದಲ್ಲಿ ಜನರನ್ನು ಒಗ್ಗೂಡಿಸಬೇಕಿದ್ದು, ಸಮಾಜವನ್ನು ಒಡೆಯಬಾರದು. ಜಾತೀವಾದ ಶಾಶ್ವತವಲ್ಲ ಕೇವಲ ಕಾಲ್ಪನಿಕ ಎಂದು ಹೇಳಿದರು.

Advertisement

ಮನುಕುಲಕ್ಕೆ ಸೀಮಿತ: 12ನೇ ಶತಮಾನದಲ್ಲಿ ಕಲ್ಯಾಣ ಕರ್ನಾಟಕವನ್ನು ನಿರ್ಮಿಸಿದ ಬಸವಣ್ಣ, ಕೇವಲ ವೀರಶೈವ, ಲಿಂಗಾಯತ ಧರ್ಮಕ್ಕೆ ಸೀಮಿತವಾಗದೆ, ಇಡೀ ಮನುಕುಲಕ್ಕೆ ಸೀಮಿತವಾಗಿದ್ದಾರೆ. ಅಲ್ಲದೆ ಅಂತರ್ಜಾತಿ ವಿವಾಹದ ಮೂಲಕ ಸಮಾಜದಲ್ಲಿ ಜಾತಿವಿನಾಶಕ್ಕೆ ಬಸವಣ್ಣ ಶ್ರಮಿಸಿದ್ದು, ದೇಶದಲ್ಲಿರುವ ಜಾತಿ ವಿನಾಶವಾದರೆ ಅಮೆರಿಕಾ, ರಷ್ಯಾ, ಚೀನಾ ರಾಷ್ಟ್ರಗಳನ್ನು ಮೀರಿಸಬಹುದಾಗಿದೆ.

ಇಂದು ಬಸವಣ್ಣನ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದ್ದು, ಲಿಂಗಾಯತ ಮತ್ತು ವೀರಶೈವರನ್ನು ಇಬ್ಭಾಗ ಮಾಡಲಾಗುತ್ತಿದೆ. ಆದರೆ ಈ ಇಬ್ಬರೂ ಬಸವಣ್ಣನ ಅನುಸರಿಸಬೇಕಿದ್ದು, ಇಲ್ಲವಾದಲ್ಲಿ ವೀರಶೈವರು ಯಾರಿಗೂ ಬೇಡದ ಶೋಷಿತರಾಗುವುದು ಕಟ್ಟಿಟ್ಟಬುತ್ತಿ ಎಂದರು.

ಕಾರ್ಯಕ್ರಮದಲ್ಲಿ ಎಂಬಿಎ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಆನಂದ್‌, ಸಮಾಜಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಆರ್‌.ಶಿವಪ್ಪ, ಸಹಾಯಕ ಪ್ರಾಧ್ಯಾಪಕರಾದ ಚಂದ್ರಮೌಳಿ, ಡಾ.ಎಚ್‌.ಪಿ.ಜ್ಯೋತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next