Advertisement
ಬಿಕ್ಕುಗಳೇ, ಇದುವೇ ದುಃಖ ಅರಿಯ ಸತ್ಯ, ಅಂದರೆ ಹುಟ್ಟೆಂಬುದು ದುಃಖ, ವಯಸ್ಸಾಗುವಿಕೆಯು ದುಃಖ, ಕಾಯಿಲೆಯು ದುಃಖ, ಸಾಯುವುದು ದುಃಖ, ಅನಪೇಕ್ಷಣೀಯ ವಿಷಯದ ಸಾಮೀಪ್ಯವು ದುಃಖ, ಅಪೇಕ್ಷಣೀಯ ವಿಷಯದಿಂದ ದೂರ ಸರಿಯುವುದು ದುಃಖ, ತಾನು ಇಚ್ಛಿಸಿದ್ದು ಸಿಗದೆ ಇರುವುದು ದುಃಖ, ಸಂಕ್ಷೇಪವಾಗಿ ಹೇಳುವುದಿದ್ದರೆ ಪಂಚಸ್ಕಂದಗಳಿಂದ ಮಾಡಲ್ಪಟ್ಟ ಈ ವಿಶ್ವಕ್ಕೆ ಜೋತು ಬೀಳುವುದು ದುಃಖಮಯ.
Related Articles
Advertisement
ಬಿಕ್ಕುಗಳೇ, ಏನು ಈ ಸರಿಯಾಗಿ ಅರ್ಥಮಾಡಿಕೊಳ್ಳುವಿಕೆ? ಬಿಕ್ಕುಗಳೇ ಈ ಸಂಸಾರದ ದುಃಖವನ್ನು ಅರ್ಥಮಾಡಿಕೊಳ್ಳುವಿಕೆ. ಈ ದುಃಖಕ್ಕೆ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳುವಿಕೆ. ಈ ದುಃಖದ ನಿವಾರಣೆಯನ್ನು ಅರ್ಥಮಾಡಿಕೊಳ್ಳುವಿಕೆ. ಈ ದುಃಖದ ನಿವಾರಣೆಯ ದಾರಿಯನ್ನು ಅರ್ಥಮಾಡಿಕೊಳ್ಳುವಿಕೆ.
ಬಿಕ್ಕುಗಳೇ, ಏನು ಈ ಸರಿಯಾದ ಸಂಕಲ್ಪ? ತ್ಯಾಗದ ಸಂಕಲ್ಪ, ದ್ವೇಷವನ್ನು ತೊರೆಯುವ ಸಂಕಲ್ಪ, ಹಿಂಸೆಯನ್ನು ತೊರೆಯುವ ಸಂಕಲ್ಪ, ಇವೇ ಸರಿಯಾದ ಸಂಕಲ್ಪ.
ಬಿಕ್ಕುಗಳೇ, ಏನು ಈ ಸರಿಯಾದ ಮಾತು? ಸುಳ್ಳು ಹೇಳದಿರುವುದು, ಮನಸ್ಸನ್ನು ಘಾಸಿಗೊಳಿಸುವಂತೆ ಬೈಯದಿರುವುದು, ತಮಾಷೆ ಮಾಡದಿರುವುದು, ಹರಟೆ ಹೊಡೆಯದಿರುವುದು, ಚಾಡಿಮಾತನ್ನು ಆಡದಿರುವುದು ಇವೇ ಸರಿಯಾದ ಮಾತುಗಳು.
ಬಿಕ್ಕುಗಳೇ, ಏನು ಈ ಸರಿಯಾದ ಕ್ರಿಯೆ(ಕರ್ಮ)? ಕೊಲ್ಲದಿರುವುದು, ಕದಿಯದಿರುವುದು. ಲೈಂಗಿಕ ಪರಿಶುದ್ಧತೆಯನ್ನು ಕಾಪಾಡುವುದು, ಮದ್ಯ ಮತ್ತು ಮಾದಕ ದ್ರವ್ಯಗಳ ಸೇವನೆಯನ್ನು ಮಾಡದಿರುವುದು, ಇವೇ ಸರಿಯಾದ ಕ್ರಿಯೆಗಳು.
ಬಿಕ್ಕುಗಳೇ, ಏನು ಈ ಸರಿಯಾದ ಉದ್ಯೋಗ? ಐದು ವಿಧಧ ಉದ್ಯೋಗಗಳಾದ ಮಾರಕ ಆಯುಧಗಳ ವ್ಯಾಪಾರ, ಗುಲಾಮರ ವ್ಯಾಪಾರ, ಮಾಂಸಕ್ಕಾಗಿ ಪ್ರಾಣಿವಧೆಯ ವ್ಯಾಪಾರ, ಮದ್ಯ ಹಾಗೂ ಮಾದಕ ದ್ರವ್ಯಗಳ ವ್ಯಾಪಾರ, ಪ್ರಾಣಿಗಳಿಗೆ ತೊಂದರೆ ಕೊಡುವ ವಿಷದ ವ್ಯಾಪಾರ, ಇವುಗಳಲ್ಲಿ ವ್ಯಕ್ತಿಯು ತನ್ನನ್ನು ತೊಡಗಿಸಿಕೊಳ್ಳಬಾರದು.
ಬಿಕ್ಕುಗಳೇ, ಏನು ಈ ಸರಿಯಾದ ಪ್ರಯತ್ನ? ಬಿಕ್ಕುಗಳೇ, ಇಲ್ಲಿ ಬಿಕ್ಕುವು ತನ್ನ ಇಚ್ಚಾಶಕ್ತಿಯನ್ನು ಹೆಚ್ಚಿಸಿಕೊಂಡು, ತನ್ನಲ್ಲಿರುವ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು, ಶ್ರದ್ಧೆಯಿಂದ ಶ್ರಮವಹಿಸಿ ಸರಿಯಾದ ಪ್ರಯತ್ನದ ಮೂಲಕ, ಈಗಾಗಲೇ ಹುಟ್ಟಿಕೊಂಡಿರುವ ಕೆಟ್ಟ ಆಲೋಚನೆಗಳ ನಿವಾರಣೆ, ಹುಟ್ಟದೆ ಇರುವ ಕೆಟ್ಟ ಆಲೋಚನೆಗಳನ್ನು ಹುಟ್ಟದಂತೆ ಮಾಡುವುದು, ಹುಟ್ಟದೆ ಇರುವ ಒಳ್ಳೆಯ ಆಲೋಚನೆಗಳನ್ನು ಹುಟ್ಟುವಂತೆ ಮಾಡುವುದು ಹಾಗೂ ಈಗಾಗಲೇ ಹುಟ್ಟಿರುವ ಒಳ್ಳೆಯ ಆಲೋಚನೆಗಳನ್ನು ಜಾಗ್ರತೆಯಿಂದ ರಕ್ಷಿಸಿಕೊಂಡು ಹಾಗೂ ಅವುಗಳನ್ನು ಮುಂದುವರಿಸಿಕೊಂಡು ಹೋಗುವುದು ಸರಿಯಾದ ಪ್ರಯತ್ನ.
ಬಿಕ್ಕುಗಳೇ, ಏನು ಈ ಸರಿಯಾದ ಗಮನಹರಿಸುವಿಕೆ? ಸತಿಯೆಂದು ಕರೆಯಲ್ಪಡುವ ನಾಲ್ಕು ಭದ್ರ ಬುನಾದಿಗಳನ್ನು ಹೊಂದಿರುವ ಇಲ್ಲಿ ಮೊದಲನೆಯದಾದ ಕಾಯಾನುಸ್ಸತಿಯಲ್ಲಿ (ದೇಹದ ಚಟುವಟಿಕೆಗಳನ್ನು ಗಮನಿಸುವುದು) ಬಿಕ್ಕುವು ತನ್ನ ದೇಹದಲ್ಲಿ, ಕುಳಿತಿರುವಾಗ, ನಿಂತಿರುವಾಗ, ನಡೆಯುತ್ತಿರುವಾಗ, ಮಲಗಿರುವಾಗ ಹಾಗೂ ಶ್ವಾಸೋಚ್ಚಾಸ ಮಾಡುತ್ತಿರುವಾಗ ನಡೆಯುತ್ತಿರುವ ಸೂಕ್ಷ್ಮಾತಿಸೂಕ್ಷ್ಮಆಗುಹೋಗುಗಳನ್ನು ನಿರಂತರವಾಗಿ, ವರ್ತಮಾನದಲ್ಲಿಯೇ ಮನಸ್ಸನ್ನು ಇರಿಸಿಕೊಂಡು, ತದೇಕಚಿತ್ತದಿಂದ, ಸ್ಪಷ್ಟವಾಗಿ ಗಮನಿಸುವ ಮೂಲಕ ಲೋಭದಿಂದ ಬಿಡುಗಡೆಗೊಂಡು, ಸಂಸಾರದ ಮೂರು ಲಕ್ಷಣಗಳಲ್ಲಿ ಒಂದಾದ ದುಃಖದಿಂದ ಸಂಪೂರ್ಣವಾಗಿ ಮುಕ್ತನಾಗುತ್ತಾನೆ.
ಎರಡನೆಯದಾದ ವೇದನಾನುಸ್ಸತಿಯಲ್ಲಿ ಬಿಕ್ಕುಗಳೇ, ಇಲ್ಲಿ ಒಬ್ಬ ಬಿಕ್ಕುವು ತನ್ನಲ್ಲಿ ಉಂಟಾಗುತ್ತಿರುವ ಸುಖ, ದುಃಖ ಹಾಗೂ ಸುಖವೂ ಅಲ್ಲದ, ದುಃಖವೂ ಅಲ್ಲದ ವೇದನೆಗಳ ಸೂಕ್ಷ್ಮಾತಿಸೂಕ್ಷ್ಮ ಆಗುಹೋಗುಗಳನ್ನು ನಿರಂತರವಾಗಿ, ವರ್ತಮಾನದಲ್ಲಿಯೇ ಮನಸ್ಸನ್ನು ಇರಿಸಿಕೊಂಡು, ತದೇಕಚಿತ್ತದಿಂದ ಸ್ಪಷ್ಟವಾಗಿ ಗಮನಿಸುವ ಮೂಲಕ ಲೋಭದಿಂದ ಬಿಡುಗಡೆಗೊಂಡು, ಸಂಸಾರದ ಮೂರು ಲಕ್ಷಣಗಳಲ್ಲಿ ಒಂದಾದ ದುಃಖದಿಂದ ಸಂಪೂರ್ಣವಾಗಿ ಮುಕ್ತನಾಗುತ್ತಾನೆ.
ಮೂರನೆಯದಾದ ಚಿತ್ತಾನುಸ್ಸತಿಯ ಮೂಲಕ ಒಬ್ಬ ನಿಷ್ಠಾವಂತ ಭಿಕ್ಷುವು ತನ್ನ ಚಿತ್ತದಲ್ಲಿ ಮೂಡುತ್ತಿರುವ ಲೋಭ, ಮೋಹ, ದ್ವೇಷ, ಅಲೋಭ (ದಾನ), ಅಮೋಹ(ಪ್ರಜ್ಞ), ಅದ್ವೇಷಗಳನ್ನು (ಮೈತ್ರಿ), ಸೂಕ್ಷ್ಮಾತಿಸೂಕ್ಷ್ಮ ಏರುಪೇರುಗಳನ್ನು, ಆಗುಹೋಗುಗಳನ್ನು, ನಿರಂತರವಾಗಿ ವರ್ತಮಾನಕಾಲದಲ್ಲಿಯೇ ಮನಸ್ಸನ್ನು ಇರಿಸಿಕೊಂಡು ತದೇಕಚಿತ್ತದಿಂದ, ಸ್ಪಷ್ಟವಾಗಿ ಗ್ರಹಿಸುವ ಮೂಲಕ ಲೋಭದಿಂದ ಬಿಡುಗಡೆಗೊಂಡು, ಸಂಸಾರದ ಮೂರು ಲಕ್ಷಣಗಳಲ್ಲಿ ಒಂದಾದ ದುಃಖದಿಂದ ಸಂಪೂರ್ಣ ಮುಕ್ತನಾಗುತ್ತಾನೆ.
ನಾಲ್ಕನೆಯದಾದ ಧಮ್ಮಾನುಸ್ಸತಿಯಲ್ಲಿ ಬಿಕ್ಕುಗಳೇ, ಇಲ್ಲಿ ಒಬ್ಬ ಬಿಕ್ಕುವು ತನ್ನ ಧ್ಯಾನಕ್ಕೆ ತಡೆಯೊಡ್ಡುವ ಪಂಚನೀವರಣಗಳು, ಪಂಚಸ್ಕಂದಗಳು, ಆರು ಇಂದ್ರಿಯಗಳು, ಏಳು ಬೋಧಿಯ ಅಂಗಗಳು, ಧಮ್ಮ ವಿಸಯಗಳು, ವೀರ್ಯ, ಪೀತಿ ಪಸ್ಸದ್ಧಿ ಹಾಗೂ ನಾಲ್ಕು ಆರ್ಯಸತ್ಯಗಳು, ಮತ್ತು ಸಂಸಾರದ ಮೂರು ಲಕ್ಷಣಗಳಾದ ಅನಿತ್ಯ, ದುಃಖ ಮತ್ತು ಅನತ್ತ, ಇವುಗಳನ್ನೆಲ್ಲ ನಿರಂತರವಾಗಿ, ವರ್ತಮಾನಕಾಲದಲ್ಲಿಯೇ ಮನಸ್ಸನ್ನು ಇರಿಸಿಕೊಂಡು ತದೇಕಚಿತ್ತದಿಂದ ಸ್ಪಷ್ಟವಾಗಿ ಗಮನಿಸುವ ಮೂಲಕ ಲೋಹದಿಂದ ಬಿಡುಗಡೆಗೊಂಡು ದುಃಖದಿಂದ ಸಂಪೂರ್ಣವಾಗಿ ಮುಕ್ತನಾಗುವನು. ಬಿಕ್ಕುಗಳೇ, ಇದೇ ಸರಿಯಾದ ಗಮನಿಸುವಿಕೆ.
ಬಿಕ್ಕುಗಳೇ, ಏನು ಈ ಸರಿಯಾದ ಏಕಾಗ್ರತೆ? ಬಿಕ್ಕುಗಳೇ, ಇಲ್ಲಿ ಒಬ್ಬ ಬಿಕ್ಕುವು ಇಂದ್ರಿಯ ಸುಖಗಳಿಂದ ಸಂಪೂರ್ಣವಾಗಿ ಬಿಡುಗಡೆಗೊಂಡು ವಿತಕ್ಕ, ವಿಚಾರ, ಪೀತಿ ಮತ್ತು ಸುಕಗಳನ್ನು ಸಾಧಿಸಿ ಪ್ರಥಮ ಹಂತದ ಸಮಾಧಿಸ್ಥಿತಿಯನ್ನು ಹೊಂದುವನು.
ಈ ವಿತಕ್ಕ ಹಾಗೂ ವಿಚಾರ ಸ್ಥಿತಿಯನ್ನು ಯಶಸ್ವಿಯಾಗಿ ದಾಟಿದ ಅನಂತರ ಬಿಕ್ಕುವು ಆಂತರಿಕ ವಿಶ್ವಾಸವನ್ನು ಪಡೆದುಕೊಂಡು ಏಕಾಗ್ರತಾ ಚಿತ್ತದ ಮೂಲಕ ದ್ವಿತೀಯ ಹಂತದ ಅತೀಂದ್ರಿಯ ಸಮಾಧಿ ಸ್ಥಿತಿಯನ್ನು ಹೊಂದುವನು. ಈ ಸ್ಥಿತಿಯಲ್ಲಿ ವಿತಕ್ಕ ಮತ್ತು ವಿಚಾರಗಳನ್ನು ಮೀರಿ ಪೀತಿ ಮತ್ತು ಸುಕಗಳನ್ನು ಅನುಭವಿಸುವನು. ಮುಂದುವರಿದು ಈ ಸುಕವನ್ನು ಮೀರಿ ಉಪೇಕ್ಷ ಭಾವನೆಯ ಮೂಲಕ ಏಕಾಗ್ರತೆಯ ಅನುಭವವನ್ನು ಹೊಂದಿ ಈ ದೇಹ ಮತ್ತು ಮನಸ್ಸಿನ ನಿಜ ಸ್ಥಿತಿಯನ್ನು ಅನುಭವಿಸುವನು. ಈ ಸ್ಥಿತಿಯಲ್ಲಿ ಬಿಕ್ಕು ಮೂರನೆಯ ಹಂತದ ಅತೀಂದ್ರಿಯ ಸ್ಥಿತಿಯನ್ನು ತಲುಪುವನು. ಇಷ್ಟೊತ್ತಿಗಾಗಲೇ ದೇಹದ (ನೋವು) ಆನಂದ ಮತ್ತು ದುಃಖಗಳ ಅನುಪಸ್ಥಿತಿಯನ್ನು ತಲುಪಿ, ಮನಸ್ಸಿನ ಸುಖ ಮತ್ತು ನೋವುಗಳನ್ನು ತ್ಯಜಿಸುವ ಮೂಲಕ ಬಿಕ್ಕುವು ನಾಲ್ಕನೆಯ ಹಂತದ ಅತೀಂದ್ರಿಯ ಆಧ್ಯಾತ್ಮಿಕ ಸ್ಥಿತಿಯನ್ನು ತಲುಪುವನು. ಈ ಸ್ಥಿತಿಯು ಎಲ್ಲ ತರಹದ ಸುಖ, ದುಃಖ, ನೋವು, ಆನಂದಗಳ ಸ್ಥಿತಿಯನ್ನು ಮೀರಿದ್ದು, ಸಾಧಕನು ಅತ್ಯಂತ ಪರಿಶುದ್ಧ ಮನಸ್ಸು, ಏಕಾಗ್ರತೆ ಮತ್ತು ಉಪೇಕ್ಷಾ ಭಾವನೆಯನ್ನು ಹೊಂದುವನು.
ಬಿಕ್ಕುಗಳೇ, ಇದೇ ಸರಿಯಾದ ಏಕಾಗ್ರತೆ. ಬಿಕ್ಕುಗಳೇ, ಇವೇ ಎಲ್ಲ ತರಹದ ದುಃಖಗಳ ನಿವಾರಣೆಯನ್ನು ತಲುಪುವ ದಾರಿಯಾದ ಅರಿಯ ಆಷ್ಟಾಂಗ ಮಾರ್ಗ. ಅಷ್ಟು ಹೊತ್ತಿಗೆ ಬಿಕ್ಕುವಿನ ಗಮನಹರಿಸುವಿಕೆಯ ಕ್ರಿಯೆಯು ಅತೀ ಸೂಕ್ಷ್ಮ ಮಟ್ಟಕ್ಕೆ ತಲುಪಿ, ಮನಸ್ಸಿನಲ್ಲಿ ಮೂಡುವ ವಿಷಯಗಳು ಇರುವುದೇ ಗಮನಹರಿಸುವ ಕ್ರಿಯೆಯನ್ನು ಹರಿತಗೊಳಿಸಲು ಎಂಬ ಸತ್ಯವನ್ನು ಅರಿಯುವನು. ಆಗ ಬಿಕ್ಕುವು ಲೋಭ ಮತ್ತು ಮಿಥ್ಯಾದೃಷ್ಟಿಗಳಿಂದ ಸಂಪೂರ್ಣವಾಗಿ ಬಿಡುಗಡೆಗೊಂಡು, ಈ ಲೋಕದ ಎಲ್ಲ ಬಂಧನಗಳಿಂದಲೂ ಮುಕ್ತನಾಗುವನು. ಬಿಕ್ಕುಗಳೇ, ಹೀಗೆ ಬಿಕ್ಕುವು ಧಮ್ಮಾನುಸ್ಸತಿಯ ಮೂಲಕ ಮನಸ್ಸಿನ ಆಗುಹೋಗುಗಳನ್ನು ಗಮನ ಹರಿಸಿ ಚತುರಾರ್ಯ ಸತ್ಯವನ್ನು ಅರಿಯುವನು.
(ಲೇಖನದಲ್ಲಿ ಬಳಸಲಾದ ಕೆಲವು ಶಬ್ದಗಳು ಪಾಲೀ ಭಾಷೆಯದ್ದಾಗಿವೆ.)
-ಡಾ| ಮುನಿಯಾಲು ವಿಜಯಭಾನು ಶೆಟ್ಟಿ