Advertisement

ಕೋಡಿ ಸಮುದ್ರ ಪಾರ್ಕಿಗೆ ಬಂದ ಬುದ್ಧ !

10:56 PM Nov 11, 2019 | Sriram |

ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ಕೋಡಿ ಕಡಲತಡಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಊರವರೇ ರಚಿಸಿದ ಪಾರ್ಕ್‌ನಲ್ಲಿ ಬುದ್ಧನ ಪ್ರತಿಷ್ಠೆ ನಡೆಯಲಿದೆ.

Advertisement

ಉದ್ದದ ಕಿನಾರೆ
ಕೋಡಿ ಅತೀ ಉದ್ದವಾದ ಕಡಲ ಕಿನಾರೆಯನ್ನು ಹೊಂದಿದೆ. ಪ್ರವಾಸೋದ್ಯಮಕ್ಕೆ ಪ್ರಶಸ್ತ ಸ್ಥಳವಾಗಿದೆ. ಕುಂದಾಪುರ ಹಾಗೂ ಕೋಡಿಯ ನದಿಯ ಮಧ್ಯೆ ಹತ್ತಿರದಿಂದ ಸೇತುವೆ ನಿರ್ಮಾಣವಾದ ಕಾರಣ ಪ್ರವಾಸಿಗರ ಸಂಖ್ಯೆ ಹಿಂದೆಂದೂ ಕಂಡಿರದ ರೀತಿಯಲ್ಲಿ ಹೆಚ್ಚುತ್ತಲಿದೆ. ಇದಕ್ಕೆ ಮೆರಗು ಗೊಂಡಂತೆ ಸೀ ವಾಕ್‌ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು ಪ್ರತಿದಿನ ಸಂಜೆ ಹಾಗೂ ರಜಾದಿನಗಳಲ್ಲಿ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಕೋಡಿಯ ಭಾಗಕ್ಕೆ ವಿಹಾರಕ್ಕಾಗಿ ಆಗಮಿಸುತ್ತಿದ್ದಾರೆ.

ಪಾರ್ಕ್‌
ಕೋಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಜಟ್ಟಿಗೇಶ್ವರ ಫ್ರೆಂಡ್ಸ್‌ ಸಮಿತಿಯ ಸದಸ್ಯರು ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ ಫ್ರೆಂಡ್ಸ್‌ ಗಾರ್ಡನ್‌ ರಚಿಸಿದ್ದಾರೆ. ಇದರಲ್ಲಿ ಕುಳಿತು ಸಮುದ್ರದ ಅಲೆಗಳು ಒಂದನ್ನೊಂದು ಬೆನ್ನಟ್ಟುತ್ತಾ ಬರುವುದನ್ನು, ಅಲೆಗಳ ಅಬ್ಬರದ ಮೂಲಕ ಪೂತ್ಕರಿಸುವುದನ್ನು, ಹೊತ್ತುಗಳೆಯುತ್ತಿದ್ದಂತೆಯೇ ಬಣ್ಣ ಬದಲಿಸುವ ಸಮುದ್ರವನ್ನು ಕಾಣಬಹುದು. ಬೇಸರ ಕಳೆದು ಆಸರಿಗೆ ನೀಗಿಸುವ ಹೊತ್ತಿನಲ್ಲಿ ಆಗಸದಿಂದ ನೇಸರನು ಕೆಂಬಣ್ಣಕ್ಕೆ ತಿರುಗಿ ಸಮುದ್ರದಾಳಕ್ಕೆ ಇಳಿದಂತೆ ಕಾಣುವ ಸೊಬಗನ್ನು ನೋಡಲು ಪ್ರವಾಸಿಗರ ತಂಡವೇ ಹರಿದುಬರುತ್ತಿದೆ. ಇಂತಹ ಪಾರ್ಕ್‌ ರಚನೆ ಮೂಲಕ ಊರಿನ ಪ್ರವಾಸೋದ್ಯಮ ಉತ್ಕರ್ಷಕ್ಕೆ ಕೊಡುಗೆ ನೀಡಿದ್ದಾರೆ.

ಏನೇನಿದೆ ?
ಇದಕ್ಕಾಗಿ ಅಂದಾಜು 3 ಲಕ್ಷ ರೂ. ವ್ಯಯಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಇಲ್ಲಿನ ನಿವಾಸಿ ಕೆ. ಎಚ್‌. ರಾಜೇಂದ್ರ ಅವರು ಫ್ರೆಂಡ್ಸ್‌ ತಂಡದ ಮುಖ್ಯಸ್ಥರಾಗಿ ಪಾರ್ಕ್‌ ನಿರ್ಮಾಣದಲ್ಲಿ ಮುತುವರ್ಜಿಯಲ್ಲಿ ಈ ಗಾರ್ಡನ್‌ ರಚಿಸಲಾಗಿದ್ದು ಅವರೇ ದೊಡ್ಡ ಮೊತ್ತವನ್ನು ಆರಂಭಿಕ ನಿಧಿಯಾಗಿ ನೀಡಿದ್ದಾರೆ. ಉಳಿಕೆ ಮೊತ್ತವನ್ನು ಊರವರಿಂದ ಸಂಗ್ರಹಿಸಲಾಗಿದೆ. ಇದರಲ್ಲಿ 12 ಕಾಂಕ್ರೀಟ್‌ ಆಸನಗಳನ್ನು ಹಾಕಲಾಗಿದ್ದು ಮೂವತ್ತಕ್ಕಿಂತ ಹೆಚ್ಚು ಮಂದಿ ಕೂರಬಹುದಾಗಿದೆ. ಇಲ್ಲಿರುವ ಪ್ರತಿಯೊಂದು ಬೆಂಚ್‌ಗಳೂ ಒಬ್ಬೊಬ್ಬರ ಕೊಡುಗೆಯಾಗಿದೆ. ಗಿಡಗಳನ್ನು ನೆಡಲಾಗಿದ್ದು ಹಸಿರು ಸಿರಿಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಪಾರ್ಕ್‌ ರಚಿಸಲಾಗಿದೆ. ಗಿಡದ ಬುಡಕ್ಕೂ ಕಟ್ಟೆಗಳನ್ನು ರಚಿಸಲಾಗಿದ್ದು ಪಾರ್ಕ್‌ನ ಸುತ್ತಲೂ ಕಟ್ಟೆ ರಚಿಸಲಾಗಿದೆ. ವಾರಾಂತ್ಯದಲ್ಲಿ ನೂರಾರು ಮಂದಿ ಈ ಪ್ರದೇಶದಲ್ಲಿ ಸಮುದ್ರವಿಹಾರ ನಡೆಸುತ್ತಾರೆ. ಅವರ ಅನುಕೂಲಕ್ಕಾಗಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಕುಡಿಯಲು ನೀರು
ಕುಂದಾಪುರ ಪುರಸಭೆ ವ್ಯಾಪ್ತಿಯ ಇಲ್ಲಿ ಕುಡಿಯುವ ನೀರಿನ ಸಮೀಪದಲ್ಲಿ ಹಾದುಹೋಗಿದ್ದು, ನೀರಿನ ಪೈಪ್‌ಗ್ಳ ಮುಖಾಂತರ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ರಾತ್ರಿಯ ವೇಳೆಯಲ್ಲಿ ಪಾರ್ಕಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿ ಇನ್ನಷ್ಟು ದೀಪಗಳ ವ್ಯವಸ್ಥೆಯಾಗಬೇಕಿದೆ. ಈಗಾಗಲೇ ಪುರಸಭೆಯಿಂದ ಒಂದು ವಿದ್ಯುತ್‌ ಕಂಬದ ಮೂಲಕ ವಿದ್ಯುತ್‌ ಲೈಟ್‌ ಒದಗಿಸಲಾಗಿದೆ. ಸಮುದ್ರಸ್ನಾನ ನಡೆಸಿದರೆ ಬಟ್ಟೆ ಬದಲಿಸಲೊಂದು ಕೊಠಡಿ, ಶೌಚಾಲಯದ ಅಗತ್ಯ ಕೂಡ ಇದೆ.

Advertisement

ಶಾಂತಿಗಾಗಿ ಬುದ್ಧ
ಜಗತ್ತಿಗೇ ಶಾಂತಿಯ ಸಂದೇಶವನ್ನು ಸಾರಿದ ಗೌತಮ ಬುದ್ಧನ ಮೂರ್ತಿ ನೆಲೆಗೊಂಡಿದ್ದು, ಮನಃ ಶಾಂತಿಗಾಗಿ ಸ್ಥಳೀಯರನ್ನು ಕೂಡ ಆಹ್ವಾನಿಸುತ್ತಿದೆ. ಬುದ್ಧನ ಮೂರ್ತಿಯ ಉದ್ಘಾಟನೆ 2020 ಜನವರಿಯಲ್ಲಿ ಪ್ರಸ್ತುತ ಅಧ್ಯಕ್ಷ ರಾಜೇಂದ್ರ ಶೇರಿಗಾರ್‌ ಉಪಸ್ಥಿತಿಯಲ್ಲಿ ನಡೆಯಲಿದೆ. 1.5 ಅಡಿ ಅಗಲದ, 2 ಅಡಿ ಎತ್ತರದ ಎತ್ತರದ, 72 ಕೆಜಿ ತೂಕದ ಕೃಷ್ಣಶಿಲೆಯಲ್ಲಿ ಬುದ್ಧನನ್ನು ಕಡೆಯಲಾಗಿದೆ. ದಿ| ಸತೀಶ್‌ ಮಾಸ್ಟರ್‌ ಅವರ ನೆನಪಿಗಾಗಿ ಊರವರು ಹಾಗೂ ಸೋನ್ಸ್‌ ಶಾಲೆಯ ಹಳೆ ವಿದ್ಯಾರ್ಥಿಗಳು ಈ ಬುದ್ಧನನ್ನು ಕೊಡುಗೆಯಾಗಿ ನೀಡಿದ್ದಾರೆ.

ಊರವರ ಪ್ರಯತ್ನ
ಊರವರೇ ಸೇರಿ ಮಾದರಿಯಾಗಿ ಇಂತಹ ಪಾರ್ಕ್‌ ರಚನೆ ಮಾಡಿದ್ದಾರೆ. ಮುಂದಿನ ದಿನ ಪುರಸಭೆಯಿಂದ, ಪ್ರವಾಸೋದ್ಯಮ ಇಲಾಖೆಯಿಂದ ಇನ್ನಷ್ಟು ಸಹಾಯದ ನಿರೀಕ್ಷೆಯಲ್ಲಿ ಇದ್ದೇವೆ.
-ಅಶೋಕ್‌ ಪೂಜಾರಿ, ಕೋಡಿ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next