ದುಬೈ: ಕಪ್ ಗೆಲ್ಲುವ ಫೇವರೇಟ್ ಗಳಾಗಿ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಟೀಂ ಇಂಡಿಯಾ ಸತತ ಎರಡು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ, ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿರಾಟ್ ಪಡೆ ಸೋಲು ಕಂಡಿದೆ. ಹೀಗಾಗಿ ಸೆಮಿ ಫೈನಲ್ ರೇಸ್ ನಲ್ಲಿ ಭಾರತ ತಂಡ ಹಿಂದಿದೆ.
ಕಿವೀಸ್ ವಿರುದ್ಧದ ಎಂಟು ವಿಕೆಟ್ ಅಂತರದ ಸೋಲಿನ ಬಳಿಕ ಮಾತನಾಡಿದ ಬೌಲರ್ ಜಸ್ಪ್ರೀತ್ ಬುಮ್ರಾ, “ಬಯೋ ಬಬಲ್ ನ ಆಯಾಸ ಹೆಚ್ಚಾಗಿದೆ. ನಮಗೆ ವಿಶ್ರಾಂತಿಯ ಅಗತ್ಯವಿದೆ” ಎಂದಿದ್ದಾರೆ.
ಟಿ20 ವಿಶ್ವಕಪ್‌ಗೆ ಒಂದು ವಾರದ ಮೊದಲು ಮುಕ್ತಾಯಗೊಂಡ ಐಪಿಎಲ್ ನಂತರ ತಂಡವು ದಣಿದಿದೆಯೇ ಎಂದು ಸುದ್ದಿಗಾರರು ಕೇಳಿದಾಗ, “ಖಂಡಿತವಾಗಿಯೂ, ಕೆಲವೊಮ್ಮೆ ನಿಮಗೆ ವಿರಾಮ ಬೇಕು. ಆರು ತಿಂಗಳಿನಿಂದ ಓಡಾಟದಲ್ಲಿದ್ದೀವೆ, ನಿಮ್ಮ ಕುಟುಂಬವನ್ನು ಮಿಸ್ ಮಾಡುತ್ತೀರಿ” ಎಂದು ಬುಮ್ರಾ ಹೇಳಿದರು.
ಇದನ್ನೂ ಓದಿ:ಭಾರತ ತಂಡದ ಸೆಮಿ ಪ್ರವೇಶ ಪವಾಡವಲ್ಲದೆ ಬೇರೇನೂ ಅಲ್ಲ:ಟ್ರೋಲ್ ಮಾಡಿದ ಅಫ್ರಿದಿ
“ಹಾಗಾಗಿ ಅದೆಲ್ಲವೂ ಕೆಲವೊಮ್ಮೆ ನಿಮ್ಮ ಮನಸ್ಸಿನ ಆಡುತ್ತದೆ. ಆದರೆ ಮೈದಾನದಲ್ಲಿ ಇರುವಾಗ ಈ ಎಲ್ಲ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ. ನಿಸ್ಸಂಶಯವಾಗಿ ಬಬಲ್ ನಲ್ಲಿ ಉಳಿಯುವುದು ಮತ್ತು ನಿಮ್ಮ ಕುಟುಂಬದಿಂದ ದೂರವಿರುವ ಸಮಯವು ಇಲ್ಲಿ ಪ್ರಭಾವ ಬೀರುತ್ತದೆ” ಎಂದು ಹೇಳಿದರು.
“ಬಿಸಿಸಿಐ ಕೂಡ ನಮಗೆ ಬಬಲ್ ನಿಂದ ಕಷ್ಟವಾಗದಿರಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದೆ. ಇದು ಕಷ್ಟದ ಸಮಯ. ಸಾಂಕ್ರಾಮಿಕ ರೋಗ ನಡೆಯುತ್ತಿದೆ, ಆದ್ದರಿಂದ ನಾವು ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಕೆಲವೊಮ್ಮೆ ಬಬಲ್ ಆಯಾಸವು ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ” ಎಂದು ಬುಮ್ರಾ ಹೇಳಿದರು.