ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳ ಹಂಚಿಕೆಯಲ್ಲಿ ಆಗಿದ್ದ ಸಮಸ್ಯೆ ಸರಿಪಡಿಸುವುದಕ್ಕಾಗಿ ಮಂಗಳವಾರ ಆಂತರಿಕ ಅಂಕಗಳ ಮೇಳ ಹಮ್ಮಿಕೊಂಡಿದೆ.
ಜ್ಞಾನಭಾರತಿ ಆವರಣದಲ್ಲಿರುವ ಪರೀಕ್ಷಾ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಮೇಳ ಆಯೋಜಿಸಲಾಗಿದೆ. 2009ರಿಂದ 2019ರ ವರೆಗೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಅಂದಾಜು 1,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ನೀಡುವಲ್ಲಿ ಸಮಸ್ಯೆಯಾಗಿದ್ದು, ಈ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂತಹ ಸಮಸ್ಯೆಗಳು ಎದುರಾಗದಂತೆ ವಿವಿಯಿಂದ ಕ್ರಮ ತೆಗೆದುಕೊಳ್ಳಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆ ಪ್ರವೇಶ ಪತ್ರ ಪಡೆದುಕೊಳ್ಳುವ ಸಂದರ್ಭದಲ್ಲಿಯೇ ಆಂತರಿಕ ಅಂಕಗಳು ಅಪ್‌ಲೋಡ್ ಆಗಿದೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಇದೆ. ಆಂತರಿಕ ಅಂಕ ಅಪ್‌ಲೋಡ್ ಆಗದಿದ್ದರೆ ಪ್ರವೇಶ ಪತ್ರ ಡೌನ್‌ಲೋಡ್‌ಗೆ ಅವಕಾಶ ನೀಡದಿರಲು ವಿವಿ ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ಆಂತರಿಕ ಅಂಕದ ಸಮಸ್ಯೆ ಬರುವ ಸಾಧ್ಯತೆ ಕಡಿಮೆ ಎಂದು ಬೆಂವಿವಿ ಮೂಲಗಳು ತಿಳಿಸಿವೆ.
ಏಕಕಾಲದಲ್ಲಿ ಪ್ರಕರಣಗಳ ವಿಲೇವಾರಿ: ಪದವಿ ಶಿಕ್ಷಣವನ್ನು ಬೇರೆ ಬೇರೆ ಕಾಲೇಜುಗಳಲ್ಲಿ ಮಾಡಿದ್ದ ಸಂದರ್ಭದಲ್ಲಿ ಆಯಾ ಕಾಲೇಜಿನವರು ಆಂತರಿಕ ಅಂಕವನ್ನು ಸರಿಯಾಗಿ ಅಪ್‌ಲೋಡ್ ಮಾಡಿರುವುದಿಲ್ಲ. ತಾಂತ್ರಿಕ ಸಮಸ್ಯೆಯಿಂದಾಗಿಯೂ ಅಪ್‌ಲೋಡ್ ಆಗಿರುವ ಸಾಧ್ಯತೆ ಇರುವುದಿಲ್ಲ.
ಅಂತರಿಕ ಅಂಕ ಇಲ್ಲದ ವಿದ್ಯಾರ್ಥಿಗಳು ಪದವಿ ಪೂರ್ಣಗೊಂಡಿದ್ದರೂ ಅಂಕಪಟ್ಟಿಗಳಲ್ಲಿ ಸ್ಟಾರ್ ಮಾರ್ಕ್ಸ್ (ಆಂತರಿಕ ಅಂಕ ಅಪ್‌ಲೋಡ್ ಮಾಡಿಲ್ಲ ಎಂದರ್ಥ) ಬಂದಿರುತ್ತದೆ. ಇದು ಪದವಿ ಪ್ರಮಾಣಪತ್ರ ಪಡೆಯುವ ಸಮಸ್ಯೆ ನೀಡುತ್ತಿದೆ. ಇಂತಹ ಎಲ್ಲ ಪ್ರಕರಣಗಳನ್ನು ಏಕಕಾಲದಲ್ಲಿ ವಿಲೇವಾರಿ ಮಾಡಲು ಮೇಳ ಹಮ್ಮಿಕೊಳ್ಳಲಾಗಿದೆ ಎಂದು ವಿವಿ ತಿಳಿಸಿದೆ.