ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೀರಶೈವ-ಲಿಂಗಾಯತ ಸಮಾಜದ ಆಶಾಕಿರಣ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬಣ್ಣಿಸಿದ್ದಾರೆ.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ ಪ್ರಥಮ ಸ್ಮರಣೋತ್ಸವ, ಹರ ಜಾತ್ರಾ ಮಹೋತ್ಸವ ಯಶಸ್ಸಿನ ಕಾರಣಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನಾನು ಕಾಂಗ್ರೆಸ್‌ನಲ್ಲಿದ್ದೇನೆ.
ಯಡಿಯೂರಪ್ಪ ಬಿಜೆಪಿಯಲ್ಲಿದ್ದರೂ ನಮ್ಮ ವೀರಶೈವ- ಲಿಂಗಾಯತ ಸಮಾಜದ ಆಶಾಕಿರಣವಾಗಿದ್ದಾರೆ. ಲಿಂಗಾಯತ-ವೀರಶೈವ ಸಮಾಜ ಬೇರೆ ಬೇರೆ ಎಂಬ ವಿಷಯ ಉದ್ಭವವಾದಾಗ ಯಡಿಯೂರಪ್ಪ ಮಹಾಸಭಾದ ನಿಲುವಿಗೆ ತಾವು ಬದ್ಧ ಎಂದಿದ್ದರು. ಸಮಾಜ ಒಡೆಯುವುದನ್ನು ತಪ್ಪಿಸಿದರು ಎಂದರು.
ನಾನು ವೀರಶೈವ ಮಹಾಸಭಾ ಅಧ್ಯಕ್ಷನಾಗಲು ಹೋದವನಲ್ಲ. ಸಿದ್ಧಗಂಗಾ ಶ್ರೀಗಳ ಜೊತೆಗೆ ಯಡಿಯೂರಪ್ಪ ಬೆಂಬಲ ಸಹ ಇತ್ತು. ನೀವೇ ಮಹಾಸಭಾದ ಅಧ್ಯಕ್ಷರಾಗಿ ಎಂದು ಯಡಿಯೂರಪ್ಪ ಅವರಿಗೆ ನಾನು ಹೇಳಿದಾಗ, ನೀವು ಮಹಾಸಭಾದ ಅಧ್ಯಕ್ಷರಾಗಿ, ಏನೇ ಆಗಲಿ ನಾನು ನಿಮ್ಮ ಜೊತೆ ಇರುತ್ತೇನೆ. ನಮ್ಮದೇ ಸರ್ಕಾರ ಬರುತ್ತದೆ. ಏನು ಬೇಕೋ ಅದನೆಲ್ಲ ಮಾಡೋಣ ಎಂದಿದ್ದಕ್ಕೆ ನಾನು ಎರಡನೇ ಬಾರಿಗೆ ಮಹಾಸಭಾದ ಅಧ್ಯಕ್ಷನಾಗಿ ಮುಂದುವರೆಯುತ್ತಿದ್ದೇನೆ ಎಂದರು.
ಅತಿ ವೇಗವಾಗಿ ಹೋದ್ರೆ ಅಪಘಾತ!: ಶ್ರೀ ವಚನಾನಂದ ಸ್ವಾಮೀಜಿ ಹರಿಹರ ಪೀಠಕ್ಕೆ ಬಂದ 20 ತಿಂಗಳಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಆಗಿವೆ. ರೈಲು ಬಹಳ ಫಾಸ್ಟ್ ಆಗಿ ಹೋದರೆ ಆ್ಯಕ್ಸಿಡೆಂಟ್ ಆಗಬಹುದು. ಸ್ವಲ್ಪ ಸ್ಲೋ ಆಗಿ ಹೋದರೆ ಸಮಾಜದ ಅಭಿವೃದ್ಧಿ ಆಗುತ್ತದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮಾರ್ಮಿಕವಾಗಿ ಹೇಳಿದರು.
ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಿದ್ದಂತೆ ದಾವಣಗೆರೆ ಜಿಲ್ಲಾಧಿಕಾರಿ, ಎಸ್ಪಿಯಾಗಿ ನಮ್ಮವರನ್ನೇ ಮಾಡಿದ್ದಾರೆ. ಸಿದ್ದರಾಮಯ್ಯ ಇದ್ದಾಗ ಎಲ್ಲಾ ಕಡೆ ಅವರ ಸಮುದಾಯದವರನ್ನೇ ಅಧಿಕಾರಿಗಳನ್ನಾಗಿ ನಿಯೋಜಿಸುತ್ತಿದ್ದರು. ನಮ್ಮವರು ಎಲ್ಲಿಯೂ ಇರುತ್ತಿರಲಿಲ್ಲ.
-ಶಾಮನೂರು ಶಿವಶಂಕರಪ್ಪ, ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ