Advertisement

ಕರಡಿಗೆ ಮತ್ತೆ ಟಿಕೆಟ್‌; ಬಿಎಸ್‌ವೈ ಕೈಮೇಲು

08:32 AM Mar 30, 2019 | Team Udayavani |

ಬೆಂಗಳೂರು: ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಮತ್ತೆ ಸ್ಪರ್ಧಿಸಲು ಟಿಕೆಟ್‌ ನೀಡಿರುವ ಬಿಜೆಪಿಯು ಚಿಕ್ಕೋಡಿಯಿಂದ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ರಾಯಚೂರಿನಿಂದ ರಾಜಾ ಅಮರೇಶ್‌ ನಾಯಕ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿ ಘೋಷಣೆಯಾದಂತಾಗಿದೆ. ರಾಜ್ಯದಲ್ಲಿ ಬಾಕಿ ಉಳಿದಿದ್ದ ಮೂರು ಕ್ಷೇತ್ರಗಳಿಗೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಶುಕ್ರವಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಕೃತವಾಗಿ ಘೋಷಿಸಿದೆ.

Advertisement

ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರಿಗೆ ಮತ್ತೆ ಟಿಕಟ್‌ ನೀಡಲಾಗಿದೆ. ಆ ಮೂಲಕ ರಾಜ್ಯದಲ್ಲಿದ್ದ 15 ಬಿಜೆಪಿ ಸಂಸದರೂ ಮತ್ತೂಮ್ಮೆ ಸ್ಪರ್ಧಿಸಲು ಬಿಜೆಪಿ ಅವಕಾಶ ಕಲ್ಪಿಸಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಎಲ್ಲ ಬಿಜೆಪಿ ಸಂಸದರಿಗೆ ಟಿಕೆಟ್‌ ಸಿಕ್ಕಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಈ ಹಿಂದೆ ಹೇಳಿದಂತೆ ಎಲ್ಲ ಸಂಸದರರೂ ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಆ ಮೂಲಕ ಮತ್ತೂಮ್ಮೆ ಯಡಿಯೂರಪ್ಪ ಅವರ ಕೈ ಮೇಲಾದಂತಿದೆ. ಬಳ್ಳಾರಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸರಾಗಿದ್ದ ಅನಂತ ಕುಮಾರ್‌ ಅವರು ಅಕಾಲಿಕವಾಗಿ ನಿಧನರಾಗಿದ್ದರು. ಹಾಗಾಗಿ ಬಿಜೆಪಿ ಸಂಸದರ ಸಂಖ್ಯೆ 17ರಿಂದ 15ಕ್ಕೆ ಇಳಿಕೆಯಾಗಿತ್ತು. ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಅವರನ್ನು ಬಿಜೆಪಿ ಬೆಂಬಲಿಸಿದ್ದು, ಉಳಿದ 27 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಕೊಪ್ಪಳದಲ್ಲಿ ಮತ್ತೆ ಅವಕಾಶ: ಬಿಜೆಪಿ ಮೂರು ಕಂತಿನಲ್ಲಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರಡಿ ಸಂಗಣ್ಣ ಅವರು ಹೆಸರು ಇಲ್ಲದ ಕಾರಣ ಬಹುತೇಕ ಅವರಿಗೆ ಟಿಕೆಟ್‌ ಕೈತಪ್ಪುವ ಮಾತು ಕೇಳಿಬಂದಿತ್ತು. ಕರಡಿ ಸಂಗಣ್ಣ ಅವರು ಹಲವು ಬಾರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಈ ನಡುವೆ ಕ್ಷೇತ್ರದಲ್ಲಿ ಸಿ.ವಿ.ಚಂದ್ರಶೇಖರ್‌, ಡಾ.ಕೆ.ಬಸವರಾಜು ಹಾಗೂ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಅವರು ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿರಲಿಲ್ಲ. ಹಾಲಿ ಸಂಸದರಿಗೆಲ್ಲಾ ಟಿಕೆಟ್‌ ನೀಡಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಕರಡಿ ಸಂಗಣ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next