Advertisement
ಪ್ರಮುಖವಾಗಿ 14ನೇ ಹಣಕಾಸು ಆಯೋಗದ ಶಿಫಾರಸಿನಡಿ 2019-20ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲಿ ಕಡಿತ, ಜಿಎಸ್‌ಟಿ ಪರಿಹಾರ ಪಾವತಿಯಲ್ಲೂ ಖೋತಾ ನಿರೀಕ್ಷೆ, ಇತರ ಕಾರಣಗಳಿಂದ ರಾಜ್ಯ ಸರಕಾರಕ್ಕೆ ಬರಬೇಕಿದ್ದ ದೊಡ್ಡ ಮೊತ್ತದ ಹಣ ಕೈತಪ್ಪಿದೆ. ಹಾಗಾಗಿ ತೆರಿಗೆ ಮೂಲದ ಆದಾಯ ಆಶಾದಾಯಕವಾಗಿದ್ದರೂ ಜನಪ್ರಿಯ ಬಜೆಟ್ ಮಂಡಿಸಲು ಸಾಧ್ಯವಾಗದ ಸ್ಥಿತಿ ಇದೆ. ಇದನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯ ಮಂತ್ರಿ ಯಡಿಯೂರಪ್ಪ ಹೇಗೆ ನಿಭಾಯಿಸಲಿದ್ದಾರೆ ಎಂಬು ದನ್ನು ಕಾದು ನೋಡಬೇಕಿದೆ.
ಸರಕಾರಕ್ಕೆ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆ ತೆರಿಗೆ ಪ್ರಮುಖ ಆದಾಯ ಮೂಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ನಾಲ್ಕೂ ಮೂಲಗಳಿಂದ ಒಟ್ಟು 1,15,924 ಕೋ.ರೂ. ತೆರಿಗೆ ಆದಾಯ ನಿರೀಕ್ಷಿಸಲಾಗಿದೆ. ಈ ವರೆಗೆ 1.01 ಲಕ್ಷ ಕೋ.ರೂ. ಸಂಗ್ರಹವಾಗಿದೆ. ಸಾರಿಗೆ ತೆರಿಗೆಯಿಂದ 7,100 ಕೋಟಿ ರೂ. ಆದಾಯ ಸಂಗ್ರಹ ಗುರಿಯಿದ್ದರೂ ಈ ವರೆಗೆ 5,530 ಕೋ.ರೂ. ಮಾತ್ರ ಸಂಗ್ರಹವಾಗಿದೆ. ಹಾಗಾಗಿ ನಿಗದಿತ ಗುರಿಯಲ್ಲಿ 1 ಸಾವಿರ ಕೋ. ರೂ. ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ ಅಬಕಾರಿ ತೆರಿಗೆಯಿಂದ 20,750 ಕೋ.ರೂ. ಗುರಿ ಮೀರಿ ಹೆಚ್ಚುವರಿಯಾಗಿ 1 ಸಾವಿರ ಕೋ.ರೂ. ಸಂಗ್ರಹವಾಗುವ ನಿರೀಕ್ಷೆಯಿದೆ. ಹಾಗಾಗಿ ಪ್ರಸಕ್ತ ವರ್ಷದಲ್ಲಿ 1.15 ಲಕ್ಷ ಕೋ.ರೂ. ತೆರಿಗೆ ಸಂಗ್ರಹ ಗುರಿ ತಲುಪುವ ಸಾಧ್ಯತೆ ಹೆಚ್ಚಿದೆ ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ. ಅನುದಾನ ಖೋತಾ
ಕೇಂದ್ರದಿಂದ ಬರಬೇಕಾದ ಅನುದಾನದ ಪಾಲಿನಲ್ಲಿ ಇಳಿಕೆ ರಾಜ್ಯದ ಆರ್ಥಿಕತೆಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. 14ನೇ ಹಣಕಾಸು ಆಯೋಗದ ಕೊನೆಯ ಅವಧಿ ಅಂದರೆ, 2019- 20ನೇ ಸಾಲಿನಲ್ಲಿ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಕ್ಕೆ ಕೇಂದ್ರವು ಬಿಡುಗಡೆ ಮಾಡಿದ್ದು, 31,180 ಕೋ.ರೂ. ಮಾತ್ರ. ಅಂದರೆ 5,495 ಕೋ.ರೂ. ಆದಾಯ ಏಕಾಏಕಿ ಖೋತಾ ಆಗಿದೆ.
Related Articles
ಕೇಂದ್ರವು ಪಾವತಿಸಬೇಕಾದ ಮೊತ್ತದಲ್ಲೂ ಕಡಿತ ರಾಜ್ಯದ ಆರ್ಥಿಕ ಸ್ಥಿತಿಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸಕ್ತ ವರ್ಷದಲ್ಲಿ ಕೇಂದ್ರವು ಭರಿಸಲೇಬೇಕಾದ ಮೊತ್ತದಲ್ಲಿ ಬರೋಬ್ಬರಿ 17 ಸಾವಿರ ಕೋ.ರೂ. ಕಡಿತ ವಾಗುವ ಸಾಧ್ಯತೆ ಇದೆ. ಪ್ರಸ್ತುತ ವರ್ಷದ 2ನೇ ತ್ತೈಮಾಸಿಕದಲ್ಲೇ ನೆರೆ ತಲೆದೋರಿದ್ದರಿಂದ ಮುಖ್ಯಮಂತ್ರಿಗಳು ಅನಗತ್ಯ ಕಾಮಗಾರಿಗಳಿಗೆ ಅನುದಾನ ಕಡಿತಗೊಳಿಸಿ ತುರ್ತು ಕಾಮಗಾರಿ, ಯೋಜನೆಗಳನ್ನಷ್ಟೇ ಕೈಗೊಳ್ಳುವಂತೆ ಸೂಚನೆ ನೀಡಿ ದ್ದರು. ಹಾಗಾಗಿ ಇಲಾಖೆಗಳಿಗೆ ಹಂಚಿಕೆಯಾಗಿದ್ದ ಅನುದಾನ ದಲ್ಲಿ ಸರಿಸುಮಾರು ಶೇ. 75ರಷ್ಟು ಅನುದಾನವಷ್ಟೇ ಬಿಡು ಗಡೆಯಾಗಿದೆ.
Advertisement
ಅನುದಾನ ಬಳಕೆ ಇಳಿಕೆಇಲಾಖಾವಾರು ಅನುದಾನ ಬಳಕೆ ಪ್ರಮಾಣವೂ ಕಡಿಮೆ ಇದೆ. ಈ ಅವಧಿಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ, ಅನುದಾನ ಬಳಕೆಗೆ ಆದ್ಯತೆ ಸಿಗಲಿಲ್ಲ. ಇನ್ನೊಂದೆಡೆ ಆರ್ಥಿಕ ಸಂಕಷ್ಟ ಕೂಡ ಎದುರಾಗಿದ್ದರಿಂದ ಅನುದಾನ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇದಕ್ಕೆ ಹಣಕಾಸಿನ ಕೊರತೆಯೂ ಒಂದು ಕಾರಣ ಎನ್ನಲಾಗಿದೆ.
ಆರ್ಥಿಕ ಸ್ಥಿತಿ ಗಂಭೀರವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರಕಾರ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಸರಕಾರಿ ಅನುದಾನದಲ್ಲಿ ಸಿಂಹಪಾಲು ಅಂದರೆ ಶೇ. 70 ರಷ್ಟು ನೌಕರರ ಸಂಬಳ, ಸಾರಿಗೆಗೆ ಬಳಕೆಯಾಗು ತ್ತಿದೆ. ಇದು ಹೊರೆಯಾಗುತ್ತಿದ್ದು, ಅಭಿವೃದ್ಧಿ ಮತ್ತು ಕಲ್ಯಾಣಗಳಿಗೆ ಹೆಚ್ಚಿನ ಅನುದಾನ ಒದಗಿಸುವುದು ಸವಾಲಾಗಿದೆ. ಆ ಹಿನ್ನೆಲೆ ಯಲ್ಲಿ ಅನಗತ್ಯ ಹುದ್ದೆ ರದ್ದತಿಗೆ, ಆಡಳಿತ ನಿರ್ವಹಣ ವೆಚ್ಚ ತಗ್ಗಿಸಲು ಕ್ರಮ ಕೈಗೊಳ್ಳು ವುದಕ್ಕೆ ಸಂಪುಟ ಉಪಸಮಿತಿ ರಚನೆಯಾಗಿದೆ. ಇದು ಆರ್ಥಿಕ ಸ್ಥಿತಿಗತಿಗೆ ಹಿಡಿದ ಕನ್ನಡಿ. ನೆರೆ ಪರಿಹಾರ
ರಾಜ್ಯದಲ್ಲಿ ಮಹಾ ನೆರೆ ಕಾಣಿಸಿಕೊಂಡು ಲಕ್ಷಾಂತರ ಕೋಟಿ ರೂ. ಮೊತ್ತದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ರಾಜ್ಯ ಸರಕಾರ 34 ಸಾವಿರ ಕೋ.ರೂ. ನಷ್ಟ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಕೇಂದ್ರ ನೀಡಿದ್ದು 1,860 ಕೋ.ರೂ. ಮಾತ್ರ. ರಾಜ್ಯದ ವತಿಯಿಂದ ಸುಮಾರು 3 ಸಾವಿರ ಕೋ.ರೂ. ಬಿಡುಗಡೆಯಾಗಿದೆ. ಇದು ಅನಿರೀಕ್ಷಿತ ವೆಚ್ಚವಾಗಿದ್ದು, ಖಜಾನೆ ಮೇಲೆ ಹೊರೆ ಬಿದ್ದಿದೆ. - ಎಂ. ಕೀರ್ತಿಪ್ರಸಾದ್