ಬೆಂಗಳೂರು:ಕಬ್ಬಿಗೆ ಬೆಂಬಲ ಬೆಲೆ ಬೇಡಿಕೆ ಇಟ್ಟು ಪ್ರತಿಭಟನೆ ಮಾಡಿದ ರೈತರ ಮೇಲೆ ದೌರ್ಜನ್ಯ ಎಸಗಿ ಬಂದಿಸಿ ಜಾಮೀನು ರಹಿತ ಕೇಸ್ ದಾಖಲೆ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಅದರಲ್ಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೈತ ವಿರೋಧಿ ಮತ್ತು ಉತ್ತರ ಕರ್ನಾಟಕ ವಿರೋಧಿ ನೀತಿ ಮತ್ತು ಮನಸ್ಥಿತಿ ಹೊಸದೇನಲ್ಲ. ಈ ಸರ್ಕಾರ ಆ ಭಾಗದವರ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಲೇ ಬಂದಿದೆ ಎಂದು ದೂರಿದ್ದಾರೆ.
ಪ್ರತಿಭಟನೆ ಮಾಡುತ್ತಿರುವ ರೈತರನ್ನು ಯಾವ ಪಕ್ಷಕ್ಕೆ ಸೇರಿದವರು ಎಂದು ಕೇಳುತ್ತಿರುವುದು. ಮಹಿಳೆಯರು ಎಂದು ಪರಿಗಣಿಸದೆ ಪೊಲೀಸರನ್ನು ಬಿಟ್ಟು ನ್ಯಾಯ ಕೇಳಲು ಬಂದವರನ್ನು ಬಂಧಿಸಿ ಬೆಳಗಾವಿಯ ಹಿರೇಬಾಗೇವಾಡಿ ಜೈಲಿಗೆ ಹಾಕುತ್ತಿರುವುದು ಮುಖ್ಯಮಂತ್ರಿಯವರ ಉದ್ಧಟತನ ತೋರುತ್ತದೆ. ಕೂಡಲೇ ರೈತರ ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿಯೂ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಚಾರ ಗಿಟ್ಟಿಸಿಕೊಳ್‌ಳಲು ಖುದ್ದು ತಾವೇ ಸುವರ್ಣಸೌಧಕ್ಕೆ ಬಂದು ಸಮಸ್ಯೆ ಬಗೆಹರಿಸುವುದಾಗಿ ಹೇಳಿಕೆ ನೀಡಿ ನಿನ್ನೆ ವಿಧಾನಸೌಧದಲ್ಲಿ ರೈತರೊಂದಿಗೆ ಸಭೆ ನಡೆಸುತ್ತೇನೆ ಎಂದು ಪಲಾಯನ ಮಾಡಿದ್ದು ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಯವರ ನಿರಾಸಕ್ತಿ ತೋರುತ್ತದೆ ಎಂದು ಆರೋಪಿಸಿದ್ದಾರೆ.
ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಸುಳ್ಳು ಭರವಸೆ ನೀಡಿ ಕಾಲ ತಳ್ಳುತ್ತಿದ್ದಾರೆ. ಇದರ ಜವಾಬ್ದಾರಿ ಪಾಲುದಾರ ಪಕ್ಷ ಕಾಂಗ್ರೆಸ್ ಸಹ ಹೊರಬೇಕಾಗುತ್ತದೆ. ಕುಮಾರಸ್ವಾಮಿಯವರು, ರೇವಣ್ಣ ಅವರು ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಒಟ್ಟಾರೆ ಸಮ್ಮಿಶ್ರ ಸರ್ಕಾರ ಪಲಾಯನವಾದಿ ಸರ್ಕಾರ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಕುಮಾರಸ್ವಾಮಿಯವರು ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ನ್ಯಾಯಯುತ ಬೇಡಿಕೆಗೆ ಹೋರಾಟ ನಡೆಸಿರು ರೈತರನ್ನು ಜೈಲಿಗೆ ಹಾಕಿರುವುದು ಖಂಡನೀಯ, ಎಲ್ಲರನ್ನೂ ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ.
– ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ