ಸಾಗರ : ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಸರಿಸುಮಾರು ಒಂಬತ್ತು ತಿಂಗಳು ಕಳೆದಿದ್ದರೂ ಸಾಗರದ ನಗರಸಭೆ ಮಾತ್ರ ಈಗಲೂ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಇರಿಸಿ ಗೌರವಿಸುತ್ತಿದೆ ಎಂದು ‘ಉದಯವಾಣಿ’ ಸುದ್ದಿ ಮಾಡಿದ 24 ಘಂಟೆಯೊಳಗೆ ಸಾಗರ ನಗರಸಭೆಯ ಅಧ್ಯಕ್ಷರ ಕೊಠಡಿಯಲ್ಲಿ ಬಿಎಸ್‌ವೈ ಫೋಟೋಗೆ ಕೊಕ್ ಕೊಟ್ಟು ಬಸವರಾಜ ಬೊಮ್ಮಾಯಿ ಅವರ ಫೋಟೋವನ್ನೂ ಅಳವಡಿಸಲಾಗಿರುವ ಘಟನೆ ಮಂಗಳವಾರ ನಡೆದಿದೆ.
ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿಯಲ್ಲಿ ಒಂದೆಡೆ ಹಾಲಿ ಶಾಸಕ ಹಾಲಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೋಗಳನ್ನು ಹಾಕಲಾಗಿದೆ. ಇನ್ನೊಂದೆಡೆ ಭಾರತದ ಪ್ರಧಾನ ನರೇಂದ್ರ ಮೋದಿ, ದೇಶದ ರಾಷ್ಟ್ರಪತಿ ರಾಮನಾಥ್ ಕೋವಿದ್‌ರ ಫೋಟೋಗಳಿದ್ದು, ಅವರ ಜೊತೆ ಮುಖ್ಯಮಂತ್ರಿಗಳ ಫೋಟೋ ಇರುವಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಫೋಟೋ ರಾರಾಜಿಸುತ್ತಿದೆಯೇ ವಿನಃ ಇಡೀ ಹಾಲ್‌ನಲ್ಲಿ ಎಲ್ಲಿಯೂ ರಾಜ್ಯದ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೋ ಕಂಡುಬರುತ್ತಿರಲಿಲ್ಲ. ಇದು ಉದಯವಾಣಿ ಆನ್‌ಲೈನ್‌ನಲ್ಲೂ ಸುದ್ದಿಯಾಗಿತ್ತು. ಉದಯವಾಣಿಯ ಸುದ್ದಿಯನ್ನೇ ಅರಸಿ ಉಳಿದ ಆನ್‌ಲೈನ್ ವೆಬ್‌ಪೋರ್ಟಲ್‌ಗಳು ಕೂಡ ಸುದ್ದಿಯನ್ನು ದಾಖಲಿಸಿದ್ದವು.
ಇದನ್ನೂ ಓದಿ : ಸಿಟಿ ಮಾರ್ಕೆಟ್ ಮೇಲ್ಸೇತುವೆಯಲ್ಲಿ ಅಪಘಾತ : ಹಲವರಿಗೆ ಗಾಯ, ಟೌನ್ ಹಾಲ್ ಸುತ್ತ ಸಂಚಾರ ದಟ್ಟಣೆ
ಸುದ್ದಿ ಹರಡುತ್ತಿದ್ದಂತೆ ಮಾತನಾಡಿದ್ದ ಸಾಗರ ನಗರಸಭೆ ಪೌರಾಯುಕ್ತ ರಾಜು ಡಿ. ಬಣಕಾರ್, ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಜನಪ್ರತಿನಿಧಿಗಳ ಫೋಟೋ ಅಳವಡಿಸುವ ಸಂಬಂಧ ಅಧಿಕೃತ ಸುತ್ತೋಲೆ, ಸೂಚನೆಗಳಿರುವ ಬಗ್ಗೆ ಮಾಹಿತಿ ಇಲ್ಲ. ಸರ್ಕಾರದ ಸೂಚನೆ ಪರಿಶೀಲಿಸಿ, ಈ ಬಗ್ಗೆ ಗಮನಹರಿಸಲಾಗುವುದು ಎಂದಿದ್ದರು. ಎಂ.ಕೆ. ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್‌ರ ಭಾವಚಿತ್ರ ಹಾಕಲು ಅಧಿಕೃತ ಸೂಚನೆಗಳಿವೆ. ಮುಖ್ಯಮಂತ್ರಿಗಳ ಭಾವಚಿತ್ರ ಹಾಕುವ ಸಂಬಂಧ ಪ್ರೊಟೋಕಾಲ್ ಸೂಚನೆ ಇಲ್ಲ.
ಈ ಹಿಂದೆ ಕಾಗೋಡು ತಿಮ್ಮಪ್ಪ ಅವರು ಶಾಸಕರಾಗಿದ್ದ ಅವಧಿಯಲ್ಲಿ ಸ್ಥಳೀಯ ಶಾಸಕರ ಭಾವಚಿತ್ರ ಮಾತ್ರ ಹಾಕಲಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕಿರಲಿಲ್ಲ ಎಂದು ಸಾಗರ ನಗರಸಭೆಯಲ್ಲಿ ಈ ಹಿಂದೆ ಪ್ರಭಾರಿ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ ಪ್ರತಿಪಾದಿಸಿದ್ದರು. ಪೌರಾಯುಕ್ತ ರಾಜು. ಡಿ.ಬಣಕಾರ್‌ರಿಗೆ ಪತ್ರಿಕೆ ಕರೆ ಮಾಡಿದರೂ ಅವರದನ್ನು ಸ್ವೀಕರಿಸಲಿಲ್ಲ.