Advertisement

BJP ಭಿನ್ನಮತಕ್ಕೆ ಬಿಎಸ್‌ವೈ ತೇಪೆ; ಮುನಿಸು ತಣಿಸಲು ವಿಜಯೇಂದ್ರ ನೇತೃತ್ವದ ಸಮಿತಿ

01:21 AM Mar 26, 2024 | Team Udayavani |

ಬೆಂಗಳೂರು: ಟಿಕೆಟ್‌ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಂಡಾಯಕ್ಕೆ ತೇಪೆ ಹಚ್ಚುವುದಕ್ಕೆ ಈಗ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರೇ ಅಖಾಡಕ್ಕೆ ಇಳಿದಿದ್ದಾರೆ. ಇದರ ಜತೆಗೆ ಮುನಿಸಿ ಕೊಂಡವರನ್ನು ತಣಿಸುವುದಕ್ಕೆ ಹಿರಿಯ ನಾಯಕ ರನ್ನು ಒಳಗೊಂಡ ತಂಡವನ್ನು ಬಿಜೆಪಿ ರಚಿಸಿದೆ.

Advertisement

ದಾವಣಗೆರೆ, ಕೊಪ್ಪಳ, ಬೆಳಗಾವಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಬೀದರ್‌ ಹಾಗೂ ಚಿತ್ರದುರ್ಗದಲ್ಲಿ ಬಂಡಾಯದ ಬಾವುಟ ಹಾರಾಡುತ್ತಿದೆ. ಟಿಕೆಟ್‌ ಘೋಷಣೆಯಾದ ಮರುದಿನವೇ ಚಿಕ್ಕಬಳ್ಳಾಪುರದಲ್ಲಿ “ಗೋ ಬ್ಯಾಕ್‌ ಸುಧಾಕರ್‌’ ಅಭಿಯಾನವೂ ಪ್ರಾರಂಭ ವಾಗಿದೆ. ಚುನಾವಣೆ ಬಿಸಿ ಕಳೆಗಟ್ಟುವುದಕ್ಕೆ ಮುನ್ನವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಂತೆ ವರಿಷ್ಠರು ಹೊಣೆ ನೀಡಿರುವ ಹಿನ್ನೆಲೆಯಲ್ಲಿ ಈಗ ಸಂಧಾನ ಕಾರ್ಯ ಚುರುಕುಗೊಳಿಸಲಾಗಿದೆ.
ಬಂಡಾಯ ಶಮನಕ್ಕಾಗಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಚಿವರಾದ ಸಿ.ಟಿ. ರವಿ, ವಿ. ಸುನಿಲ್‌ ಕುಮಾರ್‌, ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ನೇತೃತ್ವದಲ್ಲಿ ಬಿಜೆಪಿ ಹಿರಿಯ ನಾಯಕರ ತಂಡ ರಚಿಸಲಾಗಿದೆ. ತತ್‌ಕ್ಷಣದಿಂದಲೇ ಸಂಧಾನ ಕಾರ್ಯ ಪ್ರಾರಂಭಿಸಿ ಎಂಬ ಸೂಚನೆ ಹಿನ್ನೆಲೆ ಯಲ್ಲಿ ಅಸಮಾಧಾನಿತರನ್ನು ದೂರವಾಣಿ ಮೂಲಕ ಹಾಗೂ ಖುದ್ದು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ.

ದಾವಣಗೆರೆ ಸಂಧಾನ?
ದಾವಣಗೆರೆಯಲ್ಲಿ ಸೃಷ್ಟಿಯಾಗಿರುವ ಬಂಡಾಯ ಒಂದು ಹಂತಕ್ಕೆ ಶಮನವಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆ ಮುಖಂಡರಾದ ಜಿ.ಎಂ. ಸಿದ್ದೇಶ್ವರ, ಬಿ.ಪಿ. ಹರೀಶ್‌, ಜಗಳೂರು ರಾಮಚಂದ್ರಪ್ಪ ಮತ್ತಿತರ ಮುಖಂಡರು ಸಭೆ ನಡೆಸಿದರು. ಬಂಡಾಯದ ಬಾವುಟ ಹಾರಿಸಿದವರಲ್ಲಿ ಪ್ರಮುಖರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಎಸ್‌.ಎ. ರವೀಂದ್ರನಾಥ್‌ ಸಭೆಗೆ ಆಗಮಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಾಗೂ ಎನ್‌. ರವಿಕುಮಾರ್‌ ಮಂಗಳವಾರ ದಾವಣಗೆರೆಗೆ ತೆರಳಿ ಇವರ ಜತೆಗೆ ಮಾತುಕತೆ ನಡೆಸಲಿದ್ದಾರೆ. ದಾವಣಗೆರೆ ಭಿನ್ನಮತ ಹೆಚ್ಚುಕಡಿಮೆ ತಣ್ಣಗಾಗಿದೆ ಎಂದೇ ಹೇಳಲಾಗುತ್ತಿದೆ.

ಬೆಳಗಾವಿ ಮಾತುಕತೆ
ಬೆಳಗಾವಿ ಕ್ಷೇತ್ರದ ವಿಚಾರ ಮಾತ್ರ ವರಿಷ್ಠರಿಗೆ ತೀವ್ರ ತಲೆಬಿಸಿ ಸೃಷ್ಟಿಸಿದೆ. ಶೆಟ್ಟರ್‌ ವಿರುದ್ಧ ಸ್ಥಳೀಯ ನಾಯಕರ ಮುನಿಸು ಮುಂದುವರಿದಿದೆ.

ಖುದ್ದು ಬಿ.ವೈ. ವಿಜಯೇಂದ್ರ ಬೆಳಗಾವಿ ಮುಖಂಡರ ಜತೆಗೆ ಸಂಪರ್ಕದಲ್ಲಿದ್ದು, ಭಿನ್ನಮತ ಶಮನಕ್ಕೆ ಪ್ರಯತ್ನ ನಡೆಸಿದ್ದಾರೆ. ಜತೆಗೆ ಯಲಹಂಕ ವಿಶ್ವನಾಥ್‌ ಜತೆಗೂ ವಿಜಯೇಂದ್ರ ಮಾತುಕತೆ ನಡೆಸಲಿದ್ದಾರೆ.

Advertisement

ತಣ್ಣಗಾಯಿತೇ ಕೊಪ್ಪಳ ಸಪ್ಪಳ
ಕೊಪ್ಪಳ ಟಿಕೆಟ್‌ ಕೈ ತಪ್ಪಿದಕ್ಕೆ ಬೇಸರಗೊಂಡಿದ್ದ ಕರಡಿ ಸಂಗಣ್ಣ ಅವರನ್ನು ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಪ್ರಹ್ಲಾದ್‌ ಜೋಷಿ ಮಾತುಕತೆ ನಡೆಸಿ ಮೆತ್ತಗಾಗಿಸಿದ್ದಾರೆ. ಸೋಮವಾರ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಕರಡಿ ಸಂಗಣ್ಣ ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದರು. ಅವರನ್ನು ತಮ್ಮ ಜತೆ ಪಕ್ಷದ ಕಚೇರಿಗೆ ಕರೆತಂದ ಬೊಮ್ಮಾಯಿ ಅವರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ವಿಜಯೇಂದ್ರ ಸೇರಿ ಪ್ರಮುಖರ ಜತೆ ಮಾತುಕತೆಗೆ ಕುಳ್ಳಿರಿಸಿದರು. ಅವಕಾಶ ಬಂದಾಗ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ಲಭಿಸಿದ ಹಿನ್ನೆಲೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ಸಂಗಣ್ಣ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.

ಬಿಜೆಪಿ ಬಂಡಾಯ ಶಮನ ಯತ್ನ
-ಅತೃಪ್ತಿ ಶಮನಕ್ಕೆ ವಿಜಯೇಂದ್ರ ನೇತೃತ್ವದಲ್ಲಿ ನಾಯಕರ ಸಮಿತಿ.
-ದಾವಣಗೆರೆ, ಕೊಪ್ಪಳ, ಬೆಳಗಾವಿ, ಶಿವಮೊಗ್ಗ ಸಹಿತ ಹಲವೆಡೆ ಬಂಡಾಯ.
-ಮುಖಂಡರನ್ನು ಫೋನ್‌, ವೈಯಕ್ತಿಕ ವಾಗಿ ಭೇಟಿಯಾಗಲು ಪ್ರಯತ್ನ.
-ಸಂಗಣ್ಣ ಕರಡಿ ಜತೆಗೆ ಪ್ರಹ್ಲಾದ್‌ ಜೋಶಿ, ಬೊಮ್ಮಾಯಿ ಮಾತುಕತೆ.
-ಇಂದು ದಾವಣಗೆರೆಯಲ್ಲಿ ರೇಣುಕಾ ಚಾರ್ಯ ಜತೆಗೆ ಬಿಎಸ್‌ವೈ ಮಾತುಕತೆ.

ಬೇಸರದಲ್ಲಿರುವವರಿಗೆ ಕೈಮುಗಿದು ಸಹಕಾರ ಕೊಡಿ ಎಂದು ಕೇಳಿಕೊಂಡಿದ್ದೇವೆ. ದಾವಣಗೆರೆಗೆ ಮಂಗಳವಾರ ನಾನು ಹೋಗುತ್ತೇನೆ. ಎಲ್ಲವೂ ಸರಿಹೋಗಲಿದೆ, ಹೋಗಿ ಮಾತಾಡಿಕೊಂಡು ಬರುತ್ತೇನೆ.
-ಬಿ.ಎಸ್‌. ಯಡಿಯೂರಪ್ಪ,
ಮಾಜಿ ಮುಖ್ಯಮಂತ್ರಿ

 

Advertisement

Udayavani is now on Telegram. Click here to join our channel and stay updated with the latest news.

Next