Advertisement

ಬಿಎಸ್‌ವೈಗೆ ರಿಪೇರಿ ಮಾಡೋದು ಗೊತ್ತಿದೆ

12:23 PM Sep 13, 2019 | Team Udayavani |

ಹಾಸನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ರಿಪೇರಿ ಮಾಡುವುದು ಹೇಗೆ ಎಂಬುದು ನಮಗೆ ಗೊತ್ತು. ದ್ವೇಷದ ರಾಜಕಾರಣವನ್ನು ಅವರು ಎಷ್ಟು ದಿನ ನಡೆಸುತ್ತಾರೋ ನಡೆಸಲಿ ನಾವೂ ನೋಡುತ್ತೇವೆ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ, ಹಾಸನ ಹಾಲು ಒಕ್ಕೂಟದ ಅಧ್ಯಕ್ಷರೂ ಆದ ಎಚ್.ಡಿ.ರೇವಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬೆದರಿಕೆಗೆ ಜಗ್ಗಲ್ಲ: ಹಾಸನ ಡೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಹಾಸನ ಹಾಲು ಒಕ್ಕೂಟದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೇವಣ್ಣ ಕೆಎಂಎಫ್ ಅಧ್ಯಕ್ಷನಾಗಬಾರದು ಎಂದು ಮುಖ್ಯಮಂತ್ರಿಯಾದ ಕೆಲವೇ ಕ್ಷಣಗಳಲ್ಲಿ ಕೆಎಂಎಫ್ ಅಧ್ಯಕ್ಷರ ಚುನಾವಣೆಯನ್ನೇ ರದ್ದು ಮಾಡಿದ ಯಡಿಯೂರಪ್ಪ ಅವರು ಆಮೇಲೆ ಚುನಾವಣೆ ನಡೆಯುವವರೆಗೂ ಯಾವ್ಯಾವ ಹಾಲು ಕ್ಕೂಟದ ಅದ್ಯಕ್ಷರಿಗೆ ಏನೇನು ಆಮಿಷ ಒಡ್ಡಿದರು ಎಂಬುದು ನಮಗೆ ಗೊತ್ತಿಲ್ಲವೇ? ಕೆಎಂಎಫ್ಗೆ ತಮಗೆ ಬೇಕಾದವರನ್ನು ಎಂಡಿ ಹುದ್ದೆಗೆ ನೇಮಿಸಿಕೊಂಡು ಬೆದರಿಕೆ ಒಡ್ಡಿದರೆ ಅದಕ್ಕೆಲ್ಲಾ ಹೆದರುತ್ತೇನೆಯೇ? ಯಡಿಯೂರಪ್ಪ ಅವರಂಥವರನ್ನು ನಾವು ಎಷ್ಟು ದಿನ ನೋಡಿಲ್ಲ? ದ್ವೇಷದ ರಾಜಕಾರಣವನ್ನು ಹೆಚ್ಚು ದಿನ ನಡೆಯಲ್ಲ ಎಂದು ತಿಳಿದುಕೊಳ್ಳಬೇಕೆಂದರು.

ದೇವೇಗೌಡರ ಕುಟುಂಬವರ ರಾಜಕಾರಣ ಮುಗಿಸಲೇಬೇಕು ಎಂದು ಯಡಿಯೂರಪ್ಪ ದ್ವೇಷದ ರಾಜಕಾರಣಮಾಡುತ್ತಿದ್ದರೆ ನಾವು ಹೆದರಲ್ಲ. ಸವಾಲಾಗಿ ತೆಗೆದುಕೊಳ್ಳತ್ತೇನೆಂದು ಗುಡುಗಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಂತ್ರಿಯಾಗಿದ್ದ 14 ತಿಂಗಳು ಕೆಎಂಎಫ್ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಆದರೆ ನಾನು ಅದಕ್ಕೆ ಆಸೆ ಪಡಲಿಲ್ಲ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲ ಕ್ಷಣಗಳಲ್ಲಿಯೇ ಕೆಎಂಎಫ್ ಕಡತ ತರಿಸಿಕೊಂಡು ದ್ವೇಷದ ರಾಜಕಾರಣ ಆರಂಭಿಸಿದರು ಎದು ಆಪಾದಿಸಿದರು.

Advertisement

ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ 2008ರಲ್ಲಿ ಇಳಿದ ಬಳಿಕ ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಬಳ್ಳಾರಿಯಲ್ಲಿ ಐಸ್‌ಕ್ರೀಂ ಘಟಕ, ಶಿಕಾರಿಪುರದಲ್ಲಿ ಪಶು ಆಹಾರ ಘಟಕ ಹೊರತುಪಡಿಸಿದರೆ ಹೈನು ಉದ್ಯಮದ ಯಾವುದೇ ಹೊಸ ಘಟಕ ಸ್ಥಾಪಿಸಿಲ್ಲ ಎಂದು ದೂರಿದರು.

ಕೆಎಂಎಫ್ ವಹಿವಾಟು ಹೆಚ್ಚಳ: 1995ರಲ್ಲಿ ಕೆಎಂಎಫ್ ವಹಿವಾಟು 600 ಕೋಟಿ ರೂ. ಇತ್ತು. ಕೆಎಂಎಫ್ ಅಧ್ಯಕ್ಷನಾಗಿ ನಾನು ಕೆಎಂಎಫ್ ವಹಿವಾಟು 5 ಸಾವಿರ ಕೋಟಿ ತಲುಪುವಂತೆ ಮಾಡಿದೆ ಎಂದ ಅವರು, ದೇವೇಗೌಡರು ಪ್ರಧಾನಿಯಾಗಿದ್ದಾಗ ಬೆಂಗಳೂರಿನಲ್ಲಿ ಮೆಗಾ ಡೇರಿ ಸ್ಥಾಪಿಸಿದ್ದರಿಂದ ಹೈನೋದ್ಯಮಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.

ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರು ಜಿಲ್ಲೆಯನ್ನು ವಿಭಜಿಸಲು ಮುಂದಾಗಿರುವ ಸರ್ಕಾರದ ನಿರ್ಧಾರದಿಂದ ಹಾಸನ ಹಾಲು ಒಕ್ಕೂಟಕ್ಕೇನೂ ನಷ್ಟವಿಲ್ಲ. ಚಿಕ್ಮಮಗಳೂರು ಒಕೂಟ ಮಾಡಿ ಕೊಳ್ಳುವುದಿದ್ದರೆ ಸಂತೋಷ ಎಲ್ಲಾ ಸಹಕಾರ ನೀಡುವೆ ಎಂದೂ ರೇವಣ್ಣ ಅವರು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಹಾಸನ ಹಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ವ್ಯವಸ್ಥಾಪಕ ಜಯಪ್ರಕಾಶ್‌, ನಿರ್ದೇಶಕರಾದ ದೊಡ್ಡಬೀಕನಹಳ್ಳಿ ನಾಗರಾಜ್‌, ರಾಮಚಂದ್ರೇಗೌಡ, ನಾರಾಯಣಗೌಡ, ಹೊನ್ನಹಳ್ಳಿ ಸತೀಶ್‌, ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next