Advertisement

ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ: ಉಪಚುನಾವಣೆ ಬಳಿಕ ಬಿಜೆಪಿ ಸರಕಾರ ಪತನ: ಸಿದ್ಧರಾಮಯ್ಯ

10:09 AM Sep 30, 2019 | Team Udayavani |

ಯಾದಗಿರಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ದುರ್ಬಲ ಮುಖ್ಯಮಂತ್ರಿ ಆಗಿದ್ದಾರೆ. ತಮ್ಮ ಪಕ್ಷದವರೇ ಅತೀ ಹೆಚ್ಚು ಸಂಸದರು ಹಾಗೂ ಶಾಸಕರು ಇದ್ದರೂ ಕೇಂದ್ರ ಸರಕಾರದ ಮೆಲೆ ಒತ್ತಡ ಹೇರಿ ನೆರೆ ಪರಿಹಾರದ ಹಣ ಬಿಡುಗಡೆ ಮಾಡಿಸುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂದು ಸಿದ್ಧರಾಮಯ್ಯ ಅವರು ಹೇಳಿದರು.

Advertisement

ಅರ್ಧಪಾಲು ಕರ್ನಾಟಕವೇ ಭೀಕರ ನೆರೆಗೆ ತುತ್ತಾಗಿದ್ದರೂ ಕೇಂದ್ರ ಸರಕಾರ ಇದುವರೆಗೆ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಜನರು ಕಷ್ಟದಲ್ಲಿದ್ದಾಗ ಅವರ ಕಷ್ಟಕ್ಕೆ ಸ್ಪಂದಿಸುವುದು ಅಧಿಕಾರದಲ್ಲಿರುವವರ ಕರ್ತವ್ಯ. ಹೀಗಾಗಿ ಮುಖ್ಯಮಂತ್ರಿಯವರು ಈ ಕೂಡಲೇ ಸರ್ವಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳಿ ರಾಜ್ಯದ ಪರಿಸ್ಥಿತಿಯನ್ನು ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.

ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದಾಗಲೂ ನಮಗೆ ಭೇಟಿ ಮಾಡಲು ಅವಕಾಶ ಕೊಟ್ಟಿಲ್ಲ. ಇನ್ನು ಮೋದಿಗೆ ಭೇಟಿಗೆ ಪತ್ರ ಬರೆದರೂ ಅವರು ಭೇಟಿಗೆ ಅವಕಾಶ ಕೊಟ್ಟಿಲ್ಲ ಇದು ರಾಜ್ಯಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿದ ದ್ರೋಹ ಎಂದು ಸಿದ್ಧರಾಮಯ್ಯನವರು ಕಿಡಿಕಾರಿದರು.

ಈಗಾಗಲೇ ತಮ್ಮ ಶಾಸಕತ್ವವನ್ನು ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಅವರಿಗೆ ನನ್ನ ಕುರಿತಾಗಿ ಮಾತನಾಡುವ ನೈತಿಕತೆ ಇಲ್ಲ ಎಂದು ಸಿದ್ಧರಾಮಯ್ಯನವರು ಅಭಿಪ್ರಾಯಪಟ್ಟರು.

ಅಕ್ಟೋಬರ್ 10ನೇ ತಾರೀಖಿನೊಳಗೆ ಪ್ರತಿಪಕ್ಷ ಸ್ಥಾನದ ಆಯ್ಕೆ ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಪಕ್ಷದ ಹೈಕಮಾಂಡ್ ಯಾರನ್ನು ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡುತ್ತದೆಯೋ ಅವರ ಮುಂದಾಳತ್ವದಲ್ಲೇ ನಮ್ಮ ಪಕ್ಷ ಸದನದಲ್ಲಿ ಸರಕಾರವನ್ನು ಎದುರಿಸುತ್ತದೆ ಎಂದು ಮಾಜೀ ಮುಖ್ಯಮಂತ್ರಿ ತಿಳಿಸಿದರು.

Advertisement

ಮಹಿಷಾಸುರ ಇತಿಹಾಸದ ಭಾಗವಾಗಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಇತಿಹಾಸದ ಜ್ಞಾನವಿಲ್ಲದ ಕಾರಣ ತಪ್ಪು ಹೇಳಿಕೆ ನೀಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಅವರು ಮಹಿಷಾಸುರ ದಸರಾ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು. ಬಿಜೆಪಿಯವರು ದುರುದ್ದೇಶದಿಂದ ಮಹಿಷಾಸುರ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದೂ ಸಿದ್ಧರಾಮಯ್ಯ ಇದೇ ಸಂದರ್ಭದಲ್ಲಿ ನುಡಿದರು.

ಜನ ಆಶೀರ್ವಾದ ಮಾಡಿದರೆ ನಾನು ಇನ್ನೊಮ್ಮೆ ಮುಖ್ಯಮಂತ್ರಿ ಆಗಲೂಬಹುದು ಎಂದು ಸಿದ್ಧರಾಮಯ್ಯನವರು ಆಶಾವಾದ ವ್ಯಕ್ತಪಡಿಸಿದರು. ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು ಆ ಬಳಿಕ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಸಿದ್ಧರಾಮಯ್ಯನವರು ರಾಜಕೀಯ ಭವಿಷ್ಯ ನುಡಿದರು.

ಕೇಂದ್ರ ಸರಕಾರವು ತನ್ನ ವ್ಯಾಪ್ತಿಯಲ್ಲಿ ಬರುವ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಅನಿಲ್ ಲಾಡ್ ಅವರು ಸಿಬಿಐ ತನೀಖೆಯ ಭಯದಿಂದಲೇ ಬಿಜೆಪಿ ಸೇರುತ್ತಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು. ಬಳ್ಳಾರಿ ಜಿಲ್ಲೆ ವಿಭಜನೆ ಅನಪೇಕ್ಷಿತ ವಿಚಾರ. ಈ ಕುರಿತಾಗಿ ಸೂಕ್ತ ಚರ್ಚೆಯಾಗಬೇಕು ಎಂದು ಮಾಜೀ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next