ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತ ಅವರ ಕುಟುಂಬ ಸದಸ್ಯರು ಹೊರನಾಡು ಮತ್ತು ಕಳಸ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಬಿಎಸ್‌ವೈ ಜತೆಗೆ ಪುತ್ರಿಯರು ಹಾಗೂ ಪುತ್ರ ಬಿ.ವೈ.ವಿಜಯೇಂದ್ರ ದಂಪತಿ ಇದ್ದರು.
ಶನಿವಾರ ಸಂಜೆ ಹೊರನಾಡು ದೇವಸ್ಥಾನಕ್ಕೆ ಭೇಟಿ ನೀಡಿ ರಾತ್ರಿ ಅನ್ನಪೂರ್ಣೇಶ್ವರಿ ರಥೋತ್ಸವ ಸೇವೆ, ನವಚಂಡಿ ಪಾರಾಯಣ, 10 ಸಾವಿರ ಜಪಗಳನ್ನು ನಡೆಸಲಾಯಿತು. ರಥದಲ್ಲಿ ಅನ್ನಪೂರ್ಣೇಶ್ವರಿ ಉತ್ಸವ ಮೂರ್ತಿಯನ್ನು ಕೂರಿಸಿ ದೇವಸ್ಥಾನದ ಸುತ್ತ ಯಡಿಯೂರಪ್ಪ ಮತ್ತು ವಿಜಯೇಂದ್ರ ರಥವನ್ನು ಎಳೆದರು. ಬಳಿಕ ಮಂಗಳಾರತಿಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
ಬೆಳಗ್ಗೆ 7ರಿಂದ ಬಿ.ಎಸ್.ಯಡಿಯೂರಪ್ಪ ಕುಟುಂಬದಿಂದ ಚಂಡಿಕಾ ಯಾಗ ನಡೆಸಲಾಯಿತು. 9 ಋತ್ವಿಜರ ನೇತೃತ್ವದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಯಾಗ ನಡೆಯಿತು. ಇದೇ ಸಂದರ್ಭದಲ್ಲಿ ಮಾತೆ ಅನ್ನಪೂರ್ಣೇಶ್ವರಿಗೆ ಅಕ್ಕಿ ಸೇವೆಯನ್ನು ಸಮರ್ಪಿಸಿದರು. ದೇವಸ್ಥಾನದ ಧರ್ಮದರ್ಶಿ ಜಿ. ಭೀಮೇಶ್ವರ ಜೋಷಿ ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ದಂಪತಿಗೆ ಅನ್ನಪೂರ್ಣೇಶ್ವರಿ ಪ್ರಸಾದ ನೀಡಿ ಶುಭ ಹಾರೈಸಿದರು.
ಮಧ್ಯಾಹ್ನದ ಅನ್ನಪ್ರಸಾದ ಸ್ವೀಕರಿಸಿದ ಬಳಿಕ ಕಳಸ ಕಳಸೇಶ್ವರ ದೇವಸ್ಥಾನಕ್ಕೆ ಯಡಿಯೂರಪ್ಪ ಕುಟುಂಬದವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯಿಂದ ಯಡಿಯೂರಪ್ಪ ಹಾಗೂ ವಿಜಯೇಂದ್ರ ದಂಪತಿಗೆ ದೇವರ ಪ್ರಸಾದ ನೀಡಲಾಯಿತು.
ಹೊರನಾಡಿಗೆ ಭೇಟಿ ನೀಡದೆ ಕೆಲವು ವರ್ಷಗಳಾಗಿತ್ತು. ಹಾಗಾಗಿ ಪೂಜೆ ಮಾಡಿಸಿಕೊಂಡು ಹೋಗುವ ಸಲುವಾಗಿ ಬಂದಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ ಬರಲಿ. ರೈತರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇವೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿಗೆ ಇನ್ನಷ್ಟು ಶಕ್ತಿಯನ್ನು ತಾಯಿ ಅನ್ನಪೂರ್ಣೇಶ್ವರಿ ನೀಡಲಿ. ರಾಜ್ಯದಲ್ಲೂ ಹೆಚ್ಚಿನ ಸ್ಥಾನದೊಂದಿಗೆ ಗೆಲ್ಲುವ ಮೂಲಕ ಮೋದಿ ಕೈಯನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ತಾಯಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ