Advertisement

ಬಿಎಸ್‌ವೈ-ಎಚ್‌ಡಿಕೆ ಸಂಭಾಷಣೆ: ವಾರದಲ್ಲಿ 4 ಬಾರಿ ದೂರವಾಣಿ ಮೂಲಕ ಮಾತುಕತೆ

12:21 AM Oct 13, 2020 | mahesh |

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೂರವಾಣಿ ಸಂಭಾಷಣೆ ನಡೆಸಿದ್ದು, ಇದು ತೀವ್ರ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ ಮೂಲಕ ಪ್ರಸ್ತಾವಿಸುವ ವಿಚಾರಗಳಿಗೆ ಯಡಿಯೂರಪ್ಪ ತತ್‌ಕ್ಷಣ ಸ್ಪಂದಿಸಿ ಆದೇಶ ಹೊರಡಿಸುವ ಮಟ್ಟಕ್ಕೆ ಇವರ ಬಾಂಧವ್ಯ ಸುಧಾರಣೆಯಾಗಿದೆ.

Advertisement

ಸಿದ್ದರಾಮಯ್ಯ ಜತೆ ವಾಕ್ಸಮರಕ್ಕಿಳಿದಿರುವ ಕುಮಾರಸ್ವಾಮಿಯು ಯಡಿಯೂರಪ್ಪ ಬಗ್ಗೆ “ಸಾಫ್ಟ್’ ಆಗಿದ್ದು, ಸಮಸ್ಯೆ ಪ್ರಸ್ತಾವಿಸಿ ಪರಿಹಾರ ಪಡೆದುಕೊಂಡು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಕಳೆದ ವಾರ ಇವರಿಬ್ಬರು ಮೂರ್‍ನಾಲ್ಕು ಬಾರಿ ದೂರವಾಣಿ ಮೂಲಕ ರಾಜಕೀಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈಗಿನ ಚುನಾವಣೆ ಹೊತ್ತಿನಲ್ಲಿ ಇದು ತೀವ್ರ ಕುತೂಹಲ ಮೂಡಿಸಿದೆ.

ತತ್‌ಕ್ಷಣ ಸ್ಪಂದನೆ
ವಿದ್ಯಾಗಮ ವಿಚಾರದಲ್ಲಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ ಕೂಡಲೇ ಯಡಿಯೂರಪ್ಪ ಅವರು ಸ್ಥಗಿತದ ಆದೇಶ ಹೊರಡಿ ಸಿದರು. ಶಿಕ್ಷಕರಿಗೆ ಮಧ್ಯಾಂತರ ರಜೆ ನೀಡುವ ಆಗ್ರಹಕ್ಕೂ ಸ್ಪಂದಿಸಿದ್ದರು. ಕುಮಾರಸ್ವಾಮಿ ಪ್ರಸ್ತಾವಿಸಿರುವ ಖಾಸಗಿ ಹಾಗೂ ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ ವೇತನ ವಿಚಾರದಲ್ಲಿಯೂ ಒಂದೆರಡು ದಿನಗಳಲ್ಲಿ ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸಿ ಆದೇಶ ಹೊರಡಿಸುವ ಭರವಸೆಯನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ ಎನ್ನಲಾಗಿದೆ.

ಅಧಿವೇಶನದ ಬಳಿಕ ನಿರಂತರ ಸಂಪರ್ಕ
ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಹಾಗೂ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಹಿತ ಕಾಂಗ್ರೆಸ್‌ ನಾಯಕರು ರಾಜ್ಯ ಸರಕಾರದ ವಿರುದ್ಧ ಮುಗಿ ಬಿದ್ದಿದ್ದ ಬೆನ್ನಲ್ಲೇ ಉಭಯ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ. ವಾರದಲ್ಲಿ ನಾಲ್ಕು ದಿನ ಫೋನ್‌ ಮೂಲಕ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಎಲ್ಲ ಬೆಳವಣಿಗೆಗಳು ರಾಜಕೀಯವಾಗಿ ಕುತೂಹಲ ಮೂಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next