Advertisement

ಬಿಎಸ್‌ವೈ ಸರ್ಕಾರ ಉಳಿಯುತ್ತಾ? ಬೀಳುತ್ತಾ?

10:09 AM Dec 09, 2019 | Lakshmi GovindaRaj |

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಮೂರೂ ರಾಜಕೀಯ ಪಕ್ಷಗಳ ನಾಯಕರು ಫ‌ಲಿತಾಂಶಕ್ಕಾಗಿ ಕಾತುರದಿಂದ ಕಾದು ಕುಳಿತಿದ್ದಾರೆ. ಮೂರೂ ಪಕ್ಷಗಳು ಸೋಲು-ಗೆಲುವಿನ ಬಗ್ಗೆ ತಮ್ಮದೇ ಆದ ಲೆಕ್ಕಾಚಾರ ಹಾಕಿಕೊಂಡಿದ್ದು, ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

Advertisement

ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆದ್ದು, ಬಿಜೆಪಿ ಸರ್ಕಾರವನ್ನು ಪತನಗೊಳಿಸುವ ಬಯಕೆಯಲ್ಲಿದೆ. ಬಿಜೆಪಿ ಸರ್ಕಾರ ಪತನಗೊಂಡರೆ ತಾವು “ಕಿಂಗ್‌ಮೇಕರ್‌’ ಆಗಬಹುದು ಎಂಬ ಆಸೆ ಜೆಡಿಎಸ್‌ನದಾಗಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಫ‌ಲಿತಾಂಶದ ಮೇಲೆ ಅವಲಂಬಿತವಾಗಿರುವುದರಿಂದ ಅವರೆಲ್ಲಾ ಉಸಿರು ಬಿಗಿ ಹಿಡಿದುಕೊಂಡು ಕಾಯುವಂತಾಗಿದೆ.

ಬೆಳಗ್ಗೆ 8ರಿಂದ ಮತ ಎಣಿಕೆ: ಸೋಮವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಫ‌ಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಮತ ಎಣಿಕೆ ನಡೆಯುವ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆಯಾ ಕ್ಷೇತ್ರಗಳ ವ್ಯಾಪ್ತಿ ಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಮದ್ಯ ಮಾರಾಟ ಸಹ ನಿಷೇಧಿಸಲಾಗಿದೆ.

ಬಿಜೆಪಿ 10 ರಿಂದ 12, ಕಾಂಗ್ರೆಸ್‌ 7 ರಿಂದ 8 ಹಾಗೂ ಜೆಡಿಎಸ್‌ 4 ರಿಂದ 5 ಸ್ಥಾನ ಗೆಲ್ಲುವ ಭರವಸೆ ಹೊಂದಿವೆ. ಈ ಮಧ್ಯೆ, ಹೊಸಕೋಟೆಯಲ್ಲಿ ಅತಿ ಹೆಚ್ಚಿನ ಮತದಾನವಾಗಿರುವುದು, ಬೆಂಗಳೂರಿನ ನಾಲ್ಕೂ ಕ್ಷೇತ್ರಗಳಲ್ಲಿ ಮತದಾನ ಕಡಿಮೆ ಯಾಗಿರುವುದು ಫ‌ಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ.

ಮತದಾನೋತ್ತರ ಸಮೀಕ್ಷೆ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಉಳಿಯಲು ಬೇಕಾಗುವಷ್ಟು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದಾಗಿ ಎಲ್ಲ ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ಶಿವಾಜಿನಗರ, ಹೊಸಕೋಟೆ, ರಾಣೆಬೆನ್ನೂರು, ಕಾಗವಾಡ , ಕೆ.ಆರ್‌.ಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಇತರ ಅಭ್ಯರ್ಥಿಗಳಿಗೆ 50:50 ಫೈಟ್‌ ಇರುವ ಬಗ್ಗೆ ಸಮೀಕ್ಷೆಗಳಲ್ಲಿ ಹೇಳಲಾಗಿದೆ.

Advertisement

ಶಿವಾಜಿನಗರದಲ್ಲಿ ಕಾಂಗ್ರೆಸ್‌ನ ರಿಜ್ವಾನ್‌ ಹಾಗೂ ಬಿಜೆಪಿಯ ಸರವಣ, ಹೊಸಕೋಟೆಯಲ್ಲಿ ಬಿಜೆಪಿಯ ಎಂ.ಟಿ.ಬಿ.ನಾಗರಾಜ್‌ ಹಾಗೂ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ, ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ಹಾಗೂ ಬಿಜೆಪಿಯ ಅರುಣ್‌ಕುಮಾರ್‌, ಕಾಗವಾಡದಲ್ಲಿ ಕಾಂಗ್ರೆಸ್‌ನ ರಾಜು ಕಾಗೆ ಹಾಗೂ ಬಿಜೆಪಿಯ ಶ್ರೀಮಂತ ಪಾಟೀಲ್‌, ಕೆ.ಆರ್‌.ಪೇಟೆಯಲ್ಲಿ ಬಿಜೆಪಿಯ ನಾರಾಯಣಗೌಡ ಹಾಗೂ ಜೆಡಿಎಸ್‌ನ ದೇವರಾಜ್‌ ನಡುವೆ ಪೈಪೋಟಿ ಇರುವುದಾಗಿ ಸಮೀಕ್ಷೆಗಳು ಹೇಳಿವೆ.

ಗೋಕಾಕ್‌, ಅಥಣಿ, ಯಶವಂತಪುರ, ಮಹಾಲಕ್ಷ್ಮಿಲೇ ಔಟ್‌, ಕೆ.ಆರ್‌.ಪುರ, ವಿಜಯನಗರ, ಯಲ್ಲಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಹುಣಸೂರು, ಕಾಗವಾಡ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಸಾಧ್ಯತೆ, ಕೆ.ಆರ್‌.ಪೇಟೆ ಹಾಗೂ ಯಶವಂತಪುರದಲ್ಲಿ ಜೆಡಿಎಸ್‌ಗೆ ಗೆಲುವಿನ ಸಾಧ್ಯತೆಯಿದೆ ಎಂಬುದು ಸಮೀಕ್ಷೆಯ ತಿರುಳು.

ಮತದಾನ ಪ್ರಮಾಣ: ಹದಿನೈದು ಕ್ಷೇತ್ರಗಳಲ್ಲಿ ಶೇ.67.90ರಷ್ಟು ಮತದಾನ ಆಗಿದ್ದು, 37.77 ಲಕ್ಷ ಮತದಾರರ ಪೈಕಿ 13.10 ಲಕ್ಷ ಪುರುಷರು ಹಾಗೂ 12.54 ಲಕ್ಷ ಮಹಿಳೆಯರು ಸೇರಿ ಒಟ್ಟು 25.65 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಅಥಣಿ- ಶೇ.75.35, ಕಾಗವಾಡ-ಶೇ.76.24, ಗೋಕಾಕ್‌-ಶೇ.73.03, ಯಲ್ಲಾಪುರ-ಶೇ.77.53, ಹಿರೇಕೆರೂರು-ಶೇ. 79.03, ರಾಣಿಬೆನ್ನೂರು-ಶೇ. 73.93, ವಿಜಯನಗರ-ಶೇ. 65.02, ಚಿಕ್ಕ ಬಳ್ಳಾಪುರ-ಶೇ.86.84, ಕೆ.ಆರ್‌. ಪುರ-ಶೇ. 46.74, ಯಶವಂತಪುರ-59.10, ಮಹಾಲಕ್ಷ್ಮೇಲೇಔಟ್‌-ಶೇ. 51.21, ಶಿವಾಜಿನಗರ-ಶೇ. 48.05, ಹೊಸ ಕೋಟೆ-ಶೇ. 90.90, ಕೆ.ಆರ್‌. ಪೇಟೆ-ಶೇ. 80.52, ಹುಣಸೂರು-ಶೇ.80.59ರಷ್ಟು ಮತದಾನ ಆಗಿದೆ.

ಮತ ಎಣಿಕೆ ಎಲ್ಲೆಲ್ಲಿ?
* ಬೆಂಗಳೂರಿನ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ಹಾಗೂ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ಮತಎಣಿಕೆ, ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಸೆಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ನಲ್ಲಿ ನಡೆಯಲಿದೆ.

* ಯಶವಂತಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೆಂಗೇರಿಯ ಮೈಸೂರು ರಸ್ತೆಯಲ್ಲಿರುವ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ.

* ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವಸಂತನಗರದ ಅರಮನೆ ರಸ್ತೆಯಲ್ಲಿರುವ ಮೌಂಟ್‌ ಕಾರ್ಮೆಲ್‌ ಪಿ.ಯು ಕಾಲೇಜಿನಲ್ಲಿ ನಡೆಯಲಿದೆ.

* ಹಿರೇಕೆರೂರು ಹಾಗೂ ರಾಣಿಬೆನ್ನೂರು ವಿಧಾನಸಭೆ ಉಪಚುನಾವಣೆಯ ಮತ ಎಣಿಕೆ ಹಾವೇರಿಯ ದೇವಗಿರಿಯ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ.

* ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.

* ಕೆ.ಆರ್‌.ಪೇಟೆ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕೆ.ಆರ್‌.ಪೇಟೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನಡೆಯಲಿದೆ.

* ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ದೇವನಹಳ್ಳಿ ಹೊರವಲಯದ ಆಕಾಶ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next