ಶಿವಮೊಗ್ಗ: 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಶಿಕಾರಿಪುದರಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಎಲ್ಲಾ ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತೇವೆ. ಇದಕ್ಕೆ ಅಮಿತ್ ಶಾ ಕೂಡಾ ಒಪ್ಪಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಹಾಗೂ ನಾನು ಚರ್ಚಿಸಿ ಈಗಾಗಲೇ ನಿರ್ಧಾರ ಮಾಡಿದ್ದೇವೆ. ಎಲ್ಲರಿಗೂ ಪಕ್ಷದಿಂದಲೇ ಟಿಕೆಟ್ ನೀಡಲಾಗುತ್ತದೆ. ಅನರ್ಹ ಶಾಸಕರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಳೆದ ಬಾರಿ ಇದೀಗ ಅನರ್ಹ ಶಾಸಕರಾಗಿರುವ ವಿರುದ್ಧ ಸೋತಿದ್ದ ಬಿಜೆಪಿ ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಸುಳಿವು ನೀಡಿದರು.
ಚುನಾವಣೆ ನಡೆಯುವ ಪ್ರತಿ ಕ್ಷೇತ್ರಕ್ಕೂ ಇಬ್ಬರು ಉಸ್ತುವಾರಿಯನ್ನು ನೇಮಿಸಲಾಗಿದೆ ಎಂದ ಅವರು ಸಿದ್ದರಾಮಯ್ಯ ಗೆದ್ದಾಗ ಇವಿಎಂ ಸರಿಯಾಗಿತ್ತು. ಇವಾಗ ಸರಿಯಿಲ್ಲ ಎಂಬುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರಿಂದಾಗಿ ಲಿಂಗಾಯತ ವೀರಶೈವ ಧರ್ಮ ಉಳಿದಿದೆ ಎಂಬ ಶಾಮನೂರು ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಹಿಂದೆ ಸರ್ಕಾರ ವೀರಶೈವ ಧರ್ಮವನ್ನು ಲಿಂಗಾಯತ ಧರ್ಮದಿಂದ ಪ್ರತ್ಯೇಕಿಸುವ ವೇಳೆ ನಾನು ಕಠಿಣ ನಿಲುವು ತೆಗೆದುಕೊಂಡಿದ್ದನ್ನು ಶಾಮನೂರು ಸ್ವಾಗತಿಸಿದ್ದರು. ಬಹುಶಃ ಆ ಕಾರಣಕ್ಕೆ ಅವರು ಹೀಗೆ ಹೇಳಿರಬಹುದು ಎಂದರು
ರಾಜ್ಯದ ಎಲ್ಲ ಜಲಾಶಯಗಳು ತುಂಬಿರುವುದರಿಂದ ರಾಜ್ಯದ ಆರ್ಥಿಕ ಸ್ಥಿತಿ ಸದೃಢಗೊಂಡಿದೆ. ಕೇವಲ ಶಿಕಾರಿಪುರ ಮಾತ್ರವಲ್ಲ ರಾಜ್ಯಾದ್ಯಂತ ನೀರಾವರಿಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.