Advertisement

ನಿಷ್ಕ್ರಿಯ ಪಾಲಿಕೆ ಸದಸ್ಯರ ವಿರುದ್ಧ ಬಿಎಸ್‌ವೈ ಗರಂ

12:40 PM Aug 13, 2018 | Team Udayavani |

ಬೆಂಗಳೂರು: ಬಿಬಿಎಂಪಿಯಲ್ಲಿ ಬಹಳಷ್ಟು ಬಿಜೆಪಿ ಪಾಲಿಕೆ ಸದಸ್ಯರು ತಾವು ಬೆಳೆದಿದ್ದಾಯಿತು, ಶ್ರೀಮಂತರಾಗಿದ್ದಾಯಿತು ಎಂಬಂತಿದ್ದಾರೆ. ಅಂಥವರಿಂದ ಪಕ್ಷಕ್ಕೆ ಕೊಡುಗೆ ಏನು?, ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ತನಗೆ ಯಾವುದೇ ಮುಲಾಜಿಲ್ಲ. ಪಕ್ಷ ಸಂಘಟನೆಯಾಗಬೇಕಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಾಕೀತು ಮಾಡಿದರು.

Advertisement

ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಆ.9ರಿಂದ ಆರಂಭವಾದ ಪ್ರವಾಸದ ಭಾಗವಾಗಿ 6 ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ ತಮ್ಮ ನೇತೃತ್ವ ತಂಡ ಭಾನುವಾರ ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಶಕ್ತಿ ಕೇಂದ್ರ ಪ್ರಮುಖರು ಹಾಗೂ ಮೇಲ್ಪಟ್ಟವರ ಸಭೆಯಲ್ಲಿ ಅವರು ಮಾತನಾಡಿದರು.

ಬೆರಳೆಣಿಕೆಯಷ್ಟು ಒಳ್ಳೆಯ ಕಾರ್ಪೋರೇಟರ್‌ಗಳಷ್ಟೇ ಪಕ್ಷ ಬಲವರ್ಧನೆಯಲ್ಲಿ ತೊಡಗಿಸಿಕೊಂಡಿರುವುದು ಕಾರ್ಯಕರ್ತರ ಭಾವನೆಯಿಂದ ಅರ್ಥವಾಗಿದೆ. ಸಂಬಂಧಪಟ್ಟವರನ್ನು ಕರೆದು ಸರಿಪಡಿಸಬೇಕಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಎಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ‌ರು.

ಇಂದಿರಾ ಕ್ಯಾಂಟೀನ್‌ನಲ್ಲೂ ಲೂಟಿ: ಬಿಜೆಪಿ ಕೊಡುಗೆಗಳ ಜತೆಗೆ ಮೈತ್ರಿ ಸರ್ಕಾರದ ದುರಾಡಳಿತದ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿಕೊಡಬೇಕು. ಬಿಬಿಎಂಪಿ ಕೈಗೊಂಡಿರುವ ವೈಟ್‌ಟಾಪಿಂಗ್‌ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿದೆ. ಒಟ್ಟು 800 ಕೋಟಿ ರೂ. ಮೊತ್ತದ ಯೋಜನೆಗೆ ಈವರೆಗೆ 60 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಬಡವರ ಅನುಕೂಲಕ್ಕೆಂದು ಆರಂಭವಾದ ಇಂದಿರಾ ಕ್ಯಾಂಟೀನ್‌ನಲ್ಲೂ ಕೋಟ್ಯಂತರ ರೂ. ಲೂಟಿಯಾಗುತ್ತಿದೆ.

ಬಡವರ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದ್ದು, ಇದನ್ನು ಜನತೆಗೆ ತಿಳಿಸಬೇಕು ಎಂದು ಹೇಳಿದರು. ತ್ಯಾಜ್ಯ ವಿಲೇವಾರಿಗೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದರೂ ನಗರದಲ್ಲಿ ಸ್ವತ್ಛತೆ ಕಾಣದಾಗಿದೆ. ಇದರ ಹೊಣೆಯನ್ನು ಕಾಂಗ್ರೆಸ್‌-ಜೆಡಿಎಸ್‌ ಹೊರಬೇಕು. ಸರಿಯಾಗಿ ಸಂಬಳ ಸಿಗದ ಕಾರಣ ಪೌರ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಪೌರ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

Advertisement

ಸರ್ಕಾರ ಬದುಕಿದೆಯೇನ್ರಿ: ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಜಾಲ ವ್ಯಾಪಕವಾಗಿದ್ದು, ಯುವಜನತೆಗೆ ಮಾರಕವೆನಿಸಿದೆ. ಸರ್ಕಾರ ಬದುಕಿದೆಯೇನ್ರಿ?  ಬೆಂಗಳೂರಿನಲ್ಲಿ ನಿತ್ಯ ಕೊಲೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೀಗಿರುವಾಗ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಹೊಂದಾಣಿಕೆ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುವ ಕಾಲ ದೂರವಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಹೆಚ್ಚು ಸ್ಥಾನ ಗೆಲ್ಲಲು ಸಂಘಟನೆಗೆ ಸನ್ನದ್ಧರಾಗಬೇಕು. ಮಹಿಳಾ ಮೋರ್ಚಾ, ಪರಿಶಿಷ್ಟ ಜಾತಿ, ಪಂಗಡ, ಮೋರ್ಚಾ, ಹಿಂದುಳಿದ ವರ್ಗ ಮೋರ್ಚಾಗಳನ್ನು ಬಲಪಡಿಸಬೇಕು. ಕನಿಷ್ಠ 10 ಮನೆಯವರನ್ನು ಸಂಪರ್ಕಿಸ ಪಕ್ಷಕ್ಕೆ ಸೇರ್ಪಡೆ ಮಾಡಬೇಕು. ನಿಮ್ಮ ಪ್ರದೇಶ, ಬಡಾವಣೆ, ವಿಭಾಗದಲ್ಲಿ ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದ ವರ್ಗದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಂಘಟಿಸಬೇಕು ಎಂದರು.

ರಾಜ್ಯದ ಯಾವುದೋ ಒಂದು ಭಾಗದಲ್ಲಿ 10,000 ಮಂದಿ ಹೋರಾಟ ನಡೆಸಬಹುದು. ಆದರೆ, ಬೆಂಗಳೂರಿನಲ್ಲಿ 10,000 ಇಲ್ಲವೇ 15,000 ಮಂದಿ ಹೋರಾಟಕ್ಕಿಳಿದರೆ ಇಡೀ ರಾಜ್ಯಕ್ಕೆ ಸಂದೇಶ ರವಾನೆಯಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

33 ಪಾಲಿಕೆ ಸದಸ್ಯರು ಚೆಕ್ಕರ್‌: ಬೆಂಗಳೂರಿನ 14 ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಶಕ್ತಿ ಪ್ರಮುಖರು ಹಾಗೂ ಮೇಲ್ಮಟ್ಟದವರ ಸಭೆ ಭಾನುವಾರ ಆಯೋಜನೆಯಾಗಿತ್ತು. ಅದರಂತೆ ಇಷ್ಟು ಕ್ಷೇತ್ರಗಳಲ್ಲಿನ 56 ಕಾರ್ಪೋರೇಟರ್‌ಗಳು ಪಾಲ್ಗೊಳ್ಳಬೇಕಿತ್ತು. ಆದರೆ, ಸಭೆಗೆ ಹಾಜರಾಗಿದ್ದು 23 ಪಾಲಿಕೆ ಸದಸ್ಯರಷ್ಟೆ. ಇದರಿಂದ ಆಕ್ರೋಶಗೊಂಡ ಬಿ.ಎಸ್‌.ಯಡಿಯೂರಪ್ಪ ತಮ್ಮ ಭಾಷಣದಲ್ಲೇ ಕಾರ್ಪೋರೇಟರ್‌ಗಳ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದಿಂದ ಆಯ್ಕೆಯಾಗಿ, ಆರ್ಥಿಕವಾಗಿಯೂ ಸಬಲರಾಗಿ ಪಕ್ಷ ಮರೆತರವರಿಗೆ ಪಾಠ ಕಲಿಸುವ ಎಚ್ಚರಿಕೆ ಸಂದೇಶ ರವಾನಿಸಿದರು.

ಡಿವಿಎಸ್‌, ಸುರೇಶ್‌ಕುಮಾರ್‌ ಗೈರು: ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಶಾಸಕ ಎಸ್‌.ಸುರೇಶ್‌ ಕುಮಾರ್‌ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಬೆಂಗಳೂರು ನಗರ ವ್ಯಾಪ್ತಿಯ 14 ಕ್ಷೇತ್ರಗಳ ಪೈಕಿ ರಾಜಾಜಿನಗರವೂ ಸೇರಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಗರ ಘಟಕಕ್ಕೆ ಸುರೇಶ್‌ ಕುಮಾರ್‌ ದೂರು ನೀಡಿದ್ದರು.

ಆದರೆ, ಯಾರ ವಿರುದ್ಧವೂ ಕ್ರಮ ಕೈಗೊಳ್ಳದ ಕಾರಣ ಅಸಮಾಧಾನಗೊಂಡಿದ್ದ ಅವರು ಸಭೆಯಿಂದ ದೂರ ಉಳಿದಿದ್ದರು. ಹಾಗೆಯೇ ಹೆಬ್ಟಾಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದವರ ಮೇಲೆ ಕ್ರಮಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಸಭೆಗೆ ಹಾಜರಾಗಿರಲಿಲ್ಲ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next