Advertisement
ಅಧ್ಯಕ್ಷರಾದ ಸಂದರ್ಭದಲ್ಲಿಯೇ ತುರ್ತು ಪರಿಸ್ಥಿತಿ ಬಂತು. ಬಳ್ಳಾರಿ ಜೈಲಿನ ಸೂಪರಿಂಟೆಂಡೆಂಟ್ ಇವರಿಗೆ ಶೋಷಣೆ ಮಾಡುತ್ತಿದ್ದ. ಅವರ ವಿರುದ್ಧ ಹೋರಾಟ ಮಾಡಿದರು. ಅದಕ್ಕೆ ಫಲ ಕೂಡ ಸಿಕ್ಕಿತ್ತು. ಕೊನೆಗೆ ಕೈದಿಗಳಿಗೆ ರೇಷನ್ ನೀಡಿ ಅಡುಗೆ ಮಾಡಿಕೊಳ್ಳಲು ಅವಕಾಶ ಸಿಕ್ಕಿತ್ತು. ಇದೇ ಸಂದರ್ಭದಲ್ಲಿ ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಪುರಸಭೆ ಅಧ್ಯಕ್ಷರಾಗಿ ಮಾಡಿದ ಕೆಲಸ ನೋಡಿ ಕಾರ್ಯಕರ್ತರು ಎಂಎಲ್‌ಎ ಟಿಕೆಟ್ ಕೇಳುವಂತೆ ಒತ್ತಡ ಹಾಕಿದ್ದರು, ನವ ದೆಹಲಿಗೆ ಹೋಗುವಂತೆ ಹಣ ಕೂಡ ಕೊಟ್ಟರು. ಆದರೂ ಅವರು ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಪಕ್ಷ ಕೊಟ್ಟ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದು ಓಡಾಡಿದರು. ಆದರೂ ಜೆಎನ್‌ಪಿ ಪಕ್ಷದ ಎಚ್.ಬಸವಣ್ಣಪ್ಪ ಕಡಿಮೆ ಅಂತರದಲ್ಲಿ ಪರಾಭವಗೊಂಡರು. ಕಾಂಗ್ರೆಸ್‌ನ ವೆಂಕಟಪ್ಪ ಗೆದ್ದರು. ಅವರು ಗುಂಡೂರಾವ್ ಅವರ ಅವಧಿಯಲ್ಲಿ ಸಚಿವರು ಕೂಡ ಆದರು.
Related Articles
Advertisement
1980ರಲ್ಲಿ ಜನತಾ ಪಕ್ಷ ರಚನೆಯಾಯಿತು. ಆಗ ತಾಲೂಕಾಧ್ಯಕ್ಷರಾಗಿ ಬಿಎಸ್‌ವೈ ನೇಮಕವಾದರು. ಅವರ ನೇತೃತ್ವದಲ್ಲಿ ಅನೇಕ ಹೋರಾಟಗಳು ನಡೆದವು. 1982ರ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಗೆ ಪಕ್ಷ ಟಿಕೆಟ್ ನೀಡಿತು. ಮೊದಲ ಪ್ರಯತ್ನದಲ್ಲಿ 23 ಸಾವಿರ ಮತಗಳ ಅಂತರದಲ್ಲಿ ಮಾಜಿ ಸಚಿವ ವೆಂಕಟಪ್ಪ ವಿರುದ್ಧ ಗೆಲುವು
ಸಾಧಿಸಿದರು. ಆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರನ್ನು ಕಾಂಗ್ರೆಸ್‌ನಿಂದ ಚುನಾವಣೆ ಪ್ರಚಾರಕ್ಕೆ ಕರೆ ತಂದಿದ್ದರು. ಇಂದಿರಾ ಬಂದರೂ ಯಡಿಯೂರಪ್ಪ ಗೆದ್ದರು.
ಏಳ್ಗೆ ಸಹಿಸದೆ ಹಲ್ಲೆ ಮಾಡಿದ್ದರು:
ಆರ್‌ಎಸ್‌ಎಸ್ ಕಾರ್ಯಕರ್ತನಾಗಿ 23-24ನೇ ವಯಸ್ಸಿನಲ್ಲಿ ಶಿಕಾರಿಪುರಕ್ಕೆ ಬಂದ ಬಿಎಸ್‌ವೈ, ಶಂಕರ್ ರೈಸ್ ಮಿಲ್‌ನಲ್ಲಿ ಗುಮಾಸ್ತರಾಗಿ ಕೆಲಸ ಆರಂಭಿಸಿದರು. ಶಂಕರ್ ರೈಸ್ ಮಿಲ್ ಮಾಲೀಕರಾದ ವೀರಭದ್ರಶಾಸ್ತ್ರಿ ತಮ್ಮ ಹಿರಿಯ ಮಗಳನ್ನೇ ಅವರಿಗೆ ಮದುವೆ ಮಾಡಿಸಿದರು. ಶಿಕಾರಿಪುರಕ್ಕೆ ಸಂಘದ ಕಾರ್ಯಕರ್ತನಾಗಿ ಬರುವ ಮುಂಚೆ ಅವರ ಮಾವ ಅವರಿಗೆ ಬರುವಂತೆ ತಿಳಿಸಿದ್ದರು. ಯಡಿಯೂರಪ್ಪ ಅವರ ತಾಯಿಯ ಸಹೋದರ ಕುಮಾರ್ ಎಂಬುವರು ಶಿಕಾರಿಪುರದಲ್ಲೇ ಪಿಡಬ್ಲೂéಡಿ ಇಲಾಖೆ ಎಇಇ ಆಗಿದ್ದರು. ಆಗಲೇ ಇಲ್ಲಿಗೆ ಬರುವಂತೆ ಹೇಳಿದ್ದರು. ಅವರು ಒಪ್ಪಿರಲಿಲ್ಲ. ಕೊನೆಗೆ ಸಂಘವೇ ಇಲ್ಲಿಗೆ ಅವರನ್ನು ಸಂಘಟನೆ ಕೆಲಸಕ್ಕೆ ಕಳುಹಿಸಿ ಕೊಟ್ಟಿತು. ಅಂದಿನಿಂದ ಶಿಕಾರಿಪುರ ಚಿತ್ರಣವೇ ಬದಲಾಗತೊಡಗಿತು. ಪುರಸಭೆ ಅಧ್ಯಕ್ಷರಾಗಿದ್ದಾಗ ಅವರಿಗೊಂದು ನೇಮ ಇತ್ತು. ಬೆಳಗ್ಗೆ 5 ಗಂಟೆಗೆ ಸೈಕಲ್‌ನಲ್ಲಿ ಕೇರಿ ಕೇರಿ ಸುತ್ತುತ್ತಿದ್ದರು. ಪೌರ ಕಾರ್ಮಿಕರು, ಜನಸಾಮಾನ್ಯರ ಸಮಸ್ಯೆಯನ್ನು ಕೇಳಿ ತಿಳಿದುಕೊಂಡು ಪರಿಹರಿಸುವ ಕೆಲಸ ಮಾಡುತ್ತಿದ್ದರು. ಇದೇ ಅವಧಿಯಲ್ಲಿ ಬೇರೆ ಪಕ್ಷದ ಕಾರ್ಯಕರ್ತನೊಬ್ಬ ಅವರ ಏಳಿಗೆ ಸಹಿಸದೆ ಹಲ್ಲೆ ಮಾಡಿದ್ದ. ದೇವರ ದಯೆಯಿಂದ ಅವರು ಬದುಕಿದರು.
ಚಿನ್ನ ಅಡ ಇಟ್ಟು ಕಾರ್ಯಕರ್ತರಿಗೆ ಖರ್ಚು ಮಾಡುತ್ತಿದ್ದರು:
7 ಎಕರೆ ಗೇಣಿ ಜಮೀನು ಬಂದಿತ್ತು. ಅದರಲ್ಲಿ ಬಂದ ಹಣದಿಂದಲೇ ಅವರು ಪಕ್ಷ ಕಟ್ಟಿದ್ದರು. ಪತ್ನಿ ಮೈತ್ರಾದೇವಿ ಆ ಕಾಲಕ್ಕೆ ಶ್ರೀಮಂತ ಕುಟುಂಬದಿಂದ ಬಂದವರು. ಕಷ್ಟ ಬಂದಾಗ ಬಂಗಾರ ಮಾರಿ ಕಾರ್ಯಕರ್ತರಿಗೆ ನೆರವು ನೀಡಿದ ಉದಾಹರಣೆಗಳಿವೆ. ಇದು ಯಾವುದನ್ನೂ ಬಹಿರಂಗವಾಗಿ ತೋರ್ಪಡಿಸಿಕೊಂಡವರಲ್ಲ ಅವರು. ಇಲ್ಲಿ ಚಿನ್ನ ಅಡವಿಟ್ಟರೆ ಗೊತ್ತಾಗುತ್ತದೆ ಎಂದು ಶಿವಮೊಗ್ಗದಲ್ಲಿ ಅಡವಿಡುತ್ತಿದ್ದರು. ಮನೆಗೆ ಬಂದವರಿಗೆ ಊಟ, ತಿಂಡಿಗೆ ಕೊರತೆ ಇರಲಿಲ್ಲ. ಕಷ್ಟ ಎಂದಾಗ ಕೈಲಾದ ಸಹಾಯ ಮಾಡುತ್ತಿದ್ದರು. ಎಲ್ಲರೂ ಯಡಿಯೂರಪ್ಪ ಹಣ ಮಾಡಿದ್ದಾರೆ ಎನ್ನುತ್ತಾರೆ. ಆದರೆ ಅವರು ಅಷ್ಟೆಲ್ಲ ಹಣ ಖರ್ಚು ಮಾಡುತ್ತಿದ್ದು ಸ್ವಂತ ದುಡಿಮೆಯಿಂದ. ಅವರಿಗೆ ಯಾವುದೇ ಚಟ ಇರಲಿಲ್ಲ. ಹಾಗಾಗಿ ಅವರ ಬಳಿ ಹಣ ಪೋಲಾಗುತ್ತಿರಲಿಲ್ಲ. ಜಮೀನಿನಿಂದ, ಎಂಎಲ್‌ಎ ಆದಾಗ ಬರುತ್ತಿದ್ದ ಸಂಬಳವನ್ನೆಲ್ಲ ಕಾರ್ಯಕರ್ತರಿಗೆ ವಾಪಸ್ ನೀಡುತ್ತಿದ್ದರು. ಹಾಗಾಗಿಯೇ ಅವರು ಇಷ್ಟು ಬೆಳೆಯಲು ಸಾಧ್ಯವಾಗಿದ್ದು.
ಎಸ್.ಬಿ.ಮಠದ್,
ಬಿ.ಎಸ್.ಯಡಿಯೂರಪ್ಪ ಒಡನಾಡಿ