Advertisement

ಅವಿನಾಶ ಗೆದ್ದರೆ ಬಿಎಸ್‌ವೈ ಸರ್ಕಾರ ರಚನೆ: ಸೋಮಣ್ಣ

12:07 PM Apr 30, 2019 | pallavi |

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರಿಗೆ ಶಕ್ತಿ ತುಂಬಲು ಮತ್ತು ಅವರ ಕೈಬಲಪಡಿಸಲು ಚಿಂಚೋಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ್‌ ಜಾಧವ್‌ ಅವರನ್ನು ಗೆಲ್ಲಿಸಬೇಕು. ಚಿಂಚೋಳಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಯಡಿಯೂರಪ್ಪನವರು ಸರ್ಕಾರ ರಚಿಸುವುದು ಖಚಿತ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಚಿಂಚೋಳಿಯಲ್ಲಿ ಸೋಮವಾರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಾ| ಅವಿನಾಶ್‌ ಜಾಧವ್‌ ನಾಮಪತ್ರ ಸಲ್ಲಿಕೆ ನಂತರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮತನಾಡಿದರು.

ಇದು ಅವಿನಾಶ್‌ ಜಾಧವ್‌ ಚುನಾವಣೆ ಅಲ್ಲ. ಇದೊಂದು ಅಭಿವೃದ್ಧಿ ಪರವಾದ ಚುನಾವಣೆಯಾಗಿದೆ. ಚಿಂಚೋಳಿ ಮತದಾರರಿಗೆ ಈ ಬಾರಿ ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಅವಕಾಶ ಸಿಕ್ಕಿದೆ. ಡಾ| ಉಮೇಶ ಜಾಧವ್‌ ಅವರನ್ನು ದೆಹಲಿಗೆ ಮತ್ತು ಅವರ ಮಗ ಡಾ| ಅವಿನಾಶ್‌ ಜಾಧವ್‌ ಅವರನ್ನು ಬೆಂಗಳೂರಿಗೆ ಕಳಿಸುವುದರೊಂದಿಗೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ, ನರೇಂದ್ರ ಮೋದಿ ಪ್ರಧಾನಿ ಮಾಡುವ ಅವಕಾಶವೆಂದರು.

ಕಾಂಗ್ರೆಸ್‌ನ ಅಪವಿತ್ರ ಮೈತ್ರಿಯಿಂದ ರಾಜ್ಯದಲ್ಲಿ ಉಪಚುನಾವಣೆ ಬಂದಿದೆ. ರಾಜ್ಯದಲ್ಲಿ ಭೀಕರ ಬರ, ಕುಡಿಯುವ ನೀರಿನ ತೊಂದರೆ ಇದೆ. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇಚರ್‌ ಕ್ಯೂರ್‌ಗೆ ಹೋಗುತ್ತಾರೆ. ಮೈತ್ರಿ ಸರ್ಕಾರ ಸತ್ತಿದ್ದು, ಈ ಸರ್ಕಾರ ಕಿತ್ತೆಸೆಯಲು ನೀವೆಲ್ಲ ಮುಂದಾಗಬೇಕೆಂದು ಮನವಿ ಮಾಡಿದರು.

ಡಾ| ಉಮೇಶ ಜಾಧವ್‌ ಮಾತನಾಡಿ, ಚಿಂಚೋಳಿ ನನ್ನನ್ನು ಎರಡು ಬಾರಿ ಶಾಸಕನಾಗಿ ಗೆಲ್ಲಿಸಿದ್ದೀರಿ. ನಾನು ಏಳು ಜನ್ಮ ಎತ್ತಿ ಬಂದರೂ ನಿಮ್ಮ ಋಣ ತೀರಿಸಲು ಆಗುವುದಿಲ್ಲ. ಚಿಂಚೋಳಿ ಕ್ಷೇತ್ರವನ್ನು ಸಮ್ಮಿಶ್ರ ಸರ್ಕಾರ ಕಡೆಗಣಿಸಿದ್ದರಿಂದ ನಾನು ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆ ಆಗಿದ್ದೇನೆ ಎಂದರು.

Advertisement

ನಾನು ಪುತ್ರ ವ್ಯಾಮೋಹಿ ಅಲ್ಲ. ಕಾರ್ಯಕರ್ತರ ಒತ್ತಡದಿಂದ ನನ್ನ ಮಗ ಅವಿನಾಶ್‌ ಜಾಧವ್‌ನ್ನು ರಾಜಕೀಯಕ್ಕೆ ತಂದಿದ್ದೇನೆ. ನನ್ನ ಮಗನನ್ನು ನಿಮ್ಮ ಜೋಳಿಗೆಗೆ ಹಾಕಿದ್ದು, ಅವ ನನ್ನ ಮಗನಲ್ಲ. ನಿಮ್ಮ ಮಗ. ಅವನನ್ನು ರಾಜಕೀಯಕ್ಕೆ ಕರೆತರುವ ಅವಶ್ಯಕತೆ ಇರಲಿಲ್ಲ. ಆದರೆ, ನಿಮ್ಮೆಲ್ಲರ ಸೇವೆ ಮಾಡಲು ರಾಜಕೀಯಕ್ಕೆ ಕರೆ ತಂದಿದ್ದೇನೆ. ಅವನನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಮೋದಿ ಮತ್ತೂಮ್ಮೆ ಪ್ರಧಾನಿ ಆಗುತ್ತಾರೆ. ನಾನು ಸಂಸದನಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ, ಬಿಜೆಪಿ ಮುಖಂಡ ಬಾಬುರಾವ ಚಿಂಚನಸೂರ ಮಾತನಾಡಿ, ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಡಾ| ಅವಿನಾಶ್‌ ಜಾಧವ ಗೆಲ್ಲಿಸಬೇಕು. ಚಿಂಚೋಳಿ ಫಲಿತಾಂಶ ಬಂದ 24 ಗಂಟೆಯಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವುದು ಖಚಿತ ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ, ಬೀದರ ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ನಗರಾಧ್ಯಕ್ಷ, ಎಂಎಲ್ಸಿ ಬಿ.ಜಿ. ಪಾಟೀಲ, ಶಾಸಕರಾದ ಬಸವರಾಜ ಮತ್ತಿಮಡು, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಹಿರಿಯ ಮುಖಂಡರಾದ ಶಶೀಲ್ ಜಿ.ನಮೋಶಿ, ಸುನಿಲ್ ವಲ್ಲ್ಯಾಪುರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next