ತುಮಕೂರು: ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎನ್ನುತ್ತಿದ್ದ ಬಿಜೆಪಿ ಮುಖಂಡರು, ಈಗ “ಸರ್ಕಾರದ ಆಯಸ್ಸು ಆರು ತಿಂಗಳು ಅಷ್ಟೇ’ ಎನ್ನುತ್ತಿದ್ದಾರೆ. ಎಲ್ಲರೂ ರಾತ್ರಿ ಕನಸು ಕಂಡರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್ ಟೀಕಿಸಿದರು.
ನಗರದ ಸಿದ್ಧಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. 2008ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಉಗ್ರಪ್ಪನವರು ಸದನದಲ್ಲಿ ರೈತರ ಸಾಲಮನ್ನಾ ಮಾಡುವಂತೆ ಧ್ವನಿಯೆತ್ತಿದ್ದಾಗ
ಯಡಿಯೂರಪ್ಪನವರು ನಾನೇನು ದುಡ್ಡು ಪ್ರಿಂಟ್ ಮಾಡುವ ಮಿಷನ್ ಇಟ್ಟಿದ್ದೇನಾ ಎಂದು ಪ್ರರ್ಶನಿಸಿದ್ದರು. ಅಂಥವರು ಇಂದು ಪದೇ ಪದೆ ರೈತರ ಸಾಲಮನ್ನಾ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂದರೆ ಅದರ ಹಿಂದಿನ ಮರ್ಮ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಗಿನ್ನೆಸ್ ದಾಖಲೆ ಮಾಡ್ತೇನೆ!: ಪಕ್ಷದ ವರಿಷ್ಠರು ನನಗೆ ಯವ ಖಾತೆ ನೀಡಿದರೂ ನಿಭಾಯಿಸುತ್ತೇನೆ. ನೀಡಿರುವ ಖಾತೆಯಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಸಚಿವ ಸ್ಥಾನವನ್ನು ನಿಭಾಯಿಸಲು ಶೈಕ್ಷಣಿಕ ಅರ್ಹತೆಗಿಂತ ಅನುಭವ ಮುಖ್ಯ ಎಂದ ಜಮೀರ್, “ಆಹಾರ ಮತ್ತು ನಾಗರಿಕರ ಸರಬರಾಜು ಖಾತೆ ಸಿಕ್ಕಿದ್ದಕ್ಕೆ ಖುಷಿಯಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಖಾತೆ ಮೂಲಕ ನಾನು ಇತಿಹಾಸ ಸೃಷ್ಟಿಸುತ್ತೇನೆ. ಗಿನ್ನೀಸ್ ದಾಖಲೆ ಮಾಡುತ್ತೇನೆ,’ ಎಂದು ಹೇಳಿದರು.
ಗೌಡರ ಮಾತು ಕೇಳಿದರೆ ತಪ್ಪೇನು?: ರಾಜ್ಯದ ಸಮಸ್ಯೆ ಇದ್ದಾಗ ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರ ಮಾತನ್ನು ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಸಚಿವರು, ದೇವೇಗೌಡರು ಮಾಜಿ ಪ್ರಧಾನಿಗಳು. ಹಾಗಾಗಿ ಅವರ ಸಲಹೆ-ಸೂಚನೆ ಪಡೆಯುವುದರಲ್ಲಿ ತಪ್ಪೇನಿಲ್ಲ.
ಕಾಂಗ್ರೆಸ್ ಪಕ್ಷದ ಖಾತೆ ಹಂಚಿಕೆಯಲ್ಲಿ ದೇವೇಗೌಡರಾಗಲಿ, ಮುಖ್ಯಮಂತ್ರಿ ಕುಮಾರಸ್ವಾಮಿರವರಾಗಲಿ ಮೂಗು ತೂರಿಸಿಲ್ಲ. ನಮ್ಮ ಪಕ್ಷದ ವರಿಷ್ಠರು ಖಾತೆ ಹಂಚಿಕೆ ಜವಾಬ್ದಾರಿ ನಿರ್ವಹಿಸಿದ್ದಾರೆ. ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಸಚಿವರಿಗೆ ಖಾತೆ ಹಂಚಿದ್ದಾರೆ ಎಂದು ಸ್ಪಷ್ಟಪಡಿಸಿದರು.