ಬೆಂಗಳೂರು: ಬಾಹ್ಯಾಕಾಶದಲ್ಲಿ ಭಾರತ ಮಾಡಿರುವ ಸಾಧನೆಗೆ ಡಿಆರ್‌ಡಿಒ ಮತ್ತು ಕೇಂದ್ರ ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಉಪಗ್ರಹ ವಿರೋಧಿ ಕ್ಷಿಪಣಿ ಅಭಿವೃದ್ಧಿಪಡಿಸುವಲ್ಲಿ ಯಶಸ್ಸು ಕಂಡ ಮಿಷನ್ ಶಕ್ತಿ ವಿಜ್ಞಾನಿಗಳಿಗೂ ಜನತೆಯ ಪರವಾಗಿ ಅಭಿನಂದನೆಗಳು. ಇದು ಸಾಮಾನ್ಯ ಸಾಧನೆ ಅಲ್ಲ.
ರಷ್ಯಾ, ಅಮೆರಿಕ, ಚೀನಾ ನಂತರ ಭಾರತ ಇಂತಹ ಸಾಧನೆ ಮಾಡಿದ 4ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಬಾಹ್ಯ ಯುದ್ಧದ ಮುಖಾಂತರ ನಮ್ಮ ಮೇಲೆ ಯಾವುದೇ ದೇಶ ಕಣ್ಣು ಹಾಕದಂತೆ ಎಚ್ಚರ ಇಡಬಹುದಾದ ಹಾಗೂ ಯುದ್ಧ ತಡೆಯಬಹುದು ಸಾಮರ್ಥ್ಯ ಇದು ಸಾಬೀತು ಮಾಡಿದೆ ಎಂದರು.
ಈ ಉಪಗ್ರಹ ವಿರೋಧಿ ಕ್ಷಿಪಣಿ ಅಭಿವೃದ್ಧಿ ಪಡಿಸುವ ಮುಖಾಂತರ ಶತ್ರು ದೇಶಗಳನ್ನು ತಡೆಯುವುದರ ಜತೆಗೆ ಅವುಗಳ ಉಪಗ್ರಹ ಅವಲಂಬಿತ ಸೇನಾ ಶಕ್ತಿಯನ್ನು ನಿಷ್ಕ್ರಿಯಗೊಳಿಸಬಹುದು. ಇದು ಏಷ್ಯಾ ಉಪಖಂಡದಲ್ಲಿ ಶಾಂತಿ ನೆಲೆಸುವುದಕ್ಕೆ ಸಹಕಾರಿಯಾಗಲಿದೆ ಎಂದರು.
ವಿಜ್ಞಾನಿಗಳ ಕಾರ್ಯ ಶ್ಲಾಘನೀಯ “ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಜಿಕಲ್ ಸ್ಟೈಕ್ ಮಾಡಿರುವ ದೇಶದ ವಿಜ್ಞಾನಿಗಳ ಸಾಧನೆ ಶ್ಲಾಘನೀಯ. ಆದರೆ, ಪ್ರಧಾನಿ ನರೇಂದ್ರ ಮೋದಿ ಅದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ಬಹಳ ಹಿಂದೆಯೇ ಬಾಹ್ಯಾಕಾಶ, ನ್ಯೂಕ್ಲಿಯರ್ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರು ತಾವೇ ಸಾಧನೆ ಮಾಡಿರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ವಿಜ್ಞಾನಿಗಳ ಸಾಧನೆಯನ್ನು ರಾಜಕಾರಣಕ್ಕೆ ಉಪಯೋಗಿಸಿಕೊಳ್ಳಬೇಡಿ. ಇದನ್ನು ಮಾರ್ಕೆಟಿಂಗ್ ಮಾಡಿಕೊಳ್ಳುವುದು ಬೇಡ. ಮೋದಿ ಬಂದ ಮೇಲೆ ದೇಶ ಅಭಿವೃದ್ಧಿಯಾಗಿದೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.