ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟಕ್ಕೆ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ಇಂದು ಸಂಜೆ ನಡೆಯಲಿದೆ. ಆದರೆ ಇದುವರೆಗೂ ನೂತನ ಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಸಂಪುಟ ಪುನರಚನೆಗೆ ಕೊನೆಗೂ ವರಿಷ್ಠರ ಒಪ್ಪಿಗೆ ಪಡೆದ ಬಿಎಸ್ ವೈ ಗೆ ಇದೀಗ ಸಂಕಟ ಎದುರಾಗಿದೆ.
ರಾಜರಾಜೇಶ್ವರಿ ನಗರ ಶಾಸಕ ಮುನರಿತ್ನರನ್ನು ಸಂಪುಟ ಸೇರಿಸಿಕೊಳ್ಳುವ ಕುರಿತು ಕಸರತ್ತು ಮುಂದುವರಿದಿದೆ. ಮುನಿರತ್ನರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ಇಚ್ಛಿಸಿದ್ದು, ಆದರೆ ವರಿಷ್ಠರು ಅಡ್ಡಗಾಲು ಹಾಕಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಹಿರಿಯ ಸಚಿವರ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಸುದೀರ್ಘ ಚರ್ಚೆ ನಡೆದಿದ್ದು, ಮುನಿರತ್ನ ಸೇರ್ಪಡೆಗೆ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದ್ದು, ಅವರ ವಿರುದ್ಧ ಮತದಾರರ ಗುರುತಿನ ಚೀಟಿ ಅಕ್ರಮ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಸಂಪುಟಕ್ಕೆ ಸೇರಿಸಿಕೊಳ್ಳದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುನಿರತ್ನ ಸೇರ್ಪಡೆಗೆ ಸಿಎಂ ಕಸರತ್ತು ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ವಿಸ್ತರಣೆ ಅಲ್ಲ , ಪುನಾರಚನೆ
ಇಂದು ಬೆಳಗ್ಗೆ ಮುನಿರತ್ನ ಅವರು ಸಿಎಂ ಬಿಎಸ್ ವೈ ಭೇಟಿಗೆ ತೆರಳಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಸಿಎಂ ಬಿಎಸ್ ವೈ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ನಾಗೇಶ್ ಗೆ ಕೊಕ್?
ಅಬಕಾರಿ ಸಚಿವ ಎಚ್. ನಾಗೇಶ್ ರನ್ನು ಸಂಪುಟದಿಂದ ಕೈಬಿಡುವುದು ಬಹುತೇಕ ಖಚಿತ ಎನ್ನಲಾಗಿದೆ. ನಿನ್ನೆ ಭೇಟಿಯಾದ ಸಂದರ್ಭದಲ್ಲಿ ಸಿಎಂ, ಸಂಪುಟ ವಿಸ್ತರಣೆಗೆ ಮುನ್ನ ರಾಜೀನಾಮೆ ನೀಡು, ನೀನು ಮಾತ್ರವಲ್ಲ , ಮೂರು ಜನರು ರಾಜೀನಾಮೆ ನೀಡುತ್ತಾರೆ ಎಂದು ಹೇಳಿದ್ದಾರೆ. ಇದೇ ಕಾರಣದಿಂದ ಅವರ ಬೆಂಬಲಿಗರು ಮಂಗಳವಾರ ಸಂಜೆ ಸಿಎಂ ನಿವಾಸದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.